ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಚ್‌ ಫಿಕ್ಸಿಂಗ್ ಹೇಳಿಕೆ: ರಾಹುಲ್ ವಿರುದ್ಧ ಚುನಾವಣಾ ಆಯೋಗದ ಮೆಟ್ಟಿಲೇರಿದ BJP

Published 1 ಏಪ್ರಿಲ್ 2024, 10:08 IST
Last Updated 1 ಏಪ್ರಿಲ್ 2024, 10:08 IST
ಅಕ್ಷರ ಗಾತ್ರ

ನವದೆಹಲಿ: ‘ಇಂಡಿಯಾ’ ಕೂಟದ ರ್‍ಯಾಲಿಯಲ್ಲಿ ರಾಹುಲ್ ಗಾಂಧಿಯವರ ‘ಮ್ಯಾಚ್ ಫಿಕ್ಸಿಂಗ್’ ಮತ್ತು ಇತರ ಹೇಳಿಕೆಗಳ ಸಂಬಂಧ ಅವರ ವಿರುದ್ಧ ‘ಕಠಿಣ ಕ್ರಮ’ ಕೈಗೊಳ್ಳಬೇಕೆಂದು ಬಿಜೆಪಿ ಸೋಮವಾರ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವದ ನಿಯೋಗವು ರಾಹುಲ್ ಗಾಂಧಿ ವಿರುದ್ಧ ಆಯೋಗಕ್ಕೆ ದೂರು ಸಲ್ಲಿಸಿದೆ. ದೇಶದ ಜನರಲ್ಲಿ ಮತ್ತು ಪ್ರಧಾನಿ ಮೋದಿ ಅವರಲ್ಲಿ ಬೇಷರತ್ ಕ್ಷಮೆಯಾಚಿಸುವಂತೆ ರಾಹುಲ್‌ ಅವರಿಗೆ ನಿರ್ದೇಶಿಸಬೇಕು ಎಂದು ನಿಯೋಗವು ಒತ್ತಾಯಿಸಿದೆ.

ದೂರು ದಾಖಲಿಸಿದ ನಂತರ ಮಾತನಾಡಿದ ಪುರಿ, ‘ಕಾಂಗ್ರೆಸ್‌ ನಾಯಕನ ಹೇಳಿಕೆ ‘ಅತ್ಯಂತ ಆಕ್ಷೇಪಾರ್ಹ’ವಾಗಿದ್ದು, ಅದು ಕೇವಲ ನೀತಿಸಂಹಿತೆಯ ಉಲ್ಲಂಘನೆ ಅಷ್ಟೇ ಅಲ್ಲದೇ ಗಂಭೀರ ಪರಿಣಾಮ ಬೀರುವಂಥದ್ದು ಕೂಡ ಆಗಿದೆ’ ಎಂದು ಹೇಳಿದರು.

‘ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ, ಇದು (ಲೋಕಸಭಾ ಚುನಾವಣೆ) ‘ಫಿಕ್ಸ್ ಆದ ಮ್ಯಾಚ್’ ಎಂದು ಹೇಳಿದ್ದಾರೆ. ಜತೆಗೆ ಕೇಂದ್ರ ಸರ್ಕಾರವು ತನ್ನ ವ್ಯಕ್ತಿಗಳನ್ನು ಚುನಾವಣಾ ಆಯೋಗಕ್ಕೆ ನಿಯೋಜಿಸಿದೆ ಎಂದಿದ್ದಾರೆ. ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿರುವ ಅವರು, ಚುನಾವಣೆಯ ನಂತರ ಸಂವಿಧಾನವನ್ನು ರದ್ದುಪಡಿಸಲಾಗುತ್ತದೆ (ಬದಲಿಸಲಾಗುತ್ತದೆ) ಎಂದಿದ್ದಾರೆ’ ಎನ್ನುವುದಾಗಿ ಪುರಿ ತಿಳಿಸಿದರು.

‘ರಾಹುಲ್ ಮತ್ತು ಇತರ ಕಾಂಗ್ರೆಸ್ ಮುಖಂಡರು ಹಾಗೂ ‘ಇಂಡಿಯಾ’ ಕೂಟದ ನಾಯಕರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ನಾವು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದೇವೆ’ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖಂಡರ ದಾರಿ ತಪ್ಪಿಸುವ ಹೇಳಿಕೆಗಳನ್ನು ಗಮನಿಸುವಂತೆ ಚುನಾವಣಾ ಆಯೋಗವನ್ನು ಕೋರಿರುವ ಬಿಜೆಪಿಯು, ‘ಈ ಮೂಲಕ ಅವರು ಜನರಲ್ಲಿ ಅಸಮಾಧಾನ ಉಂಟುಮಾಡುತ್ತಿರುವುದರ ಜತೆಗೆ ಚುನಾವಣಾ ನೀತಿಸಂಹಿತೆ ಹಾಗೂ ಆರೋಗ್ಯಕರ ಪ್ರಜಾತಾಂತ್ರಿಕ ವಿಧಾನಗಳನ್ನು ಉಲ್ಲಂಘಿಸುತ್ತಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ‘ರಾಹುಲ್ ಗಾಂಧಿ ಪದೇ ಪದೇ ಇಂಥ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು. ‘ಲೋಕಸಭಾ ಚುನಾವಣೆಯಲ್ಲಿ ಇಂಥ ಹೇಳಿಕೆ ನೀಡದಂತೆ ಕಾಂಗ್ರೆಸ್ ನಾಯಕನ ಮಾತುಗಳನ್ನು ಸಂಪೂರ್ಣವಾಗಿ ಸೆನ್ಸಾರ್ ಮಾಡಬೇಕು’ ಎಂದು ಅವರು ಆಯೋಗವನ್ನು ಒತ್ತಾಯಿಸಿದರು. 

ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಯೋಗವು ತಿಳಿಸಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT