ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಯಲ್ಲಿ ಟಿಕೆಟ್ ಕೈತಪ್ಪಿದವರ ಆಕ್ರೋಶ: ಮೂರು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ

Published 29 ಮಾರ್ಚ್ 2024, 16:08 IST
Last Updated 29 ಮಾರ್ಚ್ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು/ಚಿತ್ರದುರ್ಗ/ರಾಯಚೂರು: ಬಿಜೆಪಿಯಲ್ಲಿ ಟಿಕೆಟ್ ಕೈತಪ್ಪಿದವರ ಆಕ್ರೋಶ ಮತ್ತಷ್ಟು ಪ್ರಖರಗೊಳ್ಳುತ್ತಿದ್ದು, ಮೂರು ಕ್ಷೇತ್ರಗಳ ಘೋಷಿತ ಅಭ್ಯರ್ಥಿಗಳಿಗೆ ಬಂಡಾಯದ ಬಿಸಿ ತಟ್ಟಿದೆ.

ಚಿತ್ರದುರ್ಗ, ರಾಯಚೂರು ಹಾಗೂ ಬೆಳಗಾವಿಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳಿಗೆ ಈ ಅಸಮಾಧಾನ ತಲೆನೋವಾಗಿ ಪರಿಣಮಿಸಿದೆ.

ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಅವರಿಗೆ ಪಕ್ಷ ಟಿಕೆಟ್ ನೀಡಿದ್ದರಿಂದ ಅಸಮಾಧಾನಗೊಂಡಿರುವ ಹೊಳಲ್ಕೆರೆಯ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್‌, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸುಳಿವು ನೀಡಿದ್ದಾರೆ.

ದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಸ್ವಾಭಿಮಾನಿ ಕಾರ್ಯಕರ್ತರ ಸಭೆಯ ಬಳಿಕ  ರಘುಚಂದನ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾಹಿತಿ ನೀಡಿದರು. ಅಭ್ಯರ್ಥಿ ಬದಲಾವಣೆಗೆ ಐದು ದಿನ ಗಡುವು ನೀಡಲಾಗಿದೆ. ಮುಂದಿನ ನಡೆಯನ್ನು ನಂತರ ತೀರ್ಮಾನಿಸುವುದಾಗಿ ಹೇಳಿದ ಅವರು, ಒಂದೊಮ್ಮೆ  ಅಭ್ಯರ್ಥಿ ಬದಲಿಸದಿದ್ದರೆ ಏಪ್ರಿಲ್‌ 3ರಂದು ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದರು.

‘ಇನ್ನೂ ಕಾಲ ಮಿಂಚಿಲ್ಲ. ಟಿಕೆಟ್‌ ಬದಲಾಯಿಸಲು ಅವಕಾಶವಿದೆ. ನಮ್ಮ ನೋವು ಪಕ್ಷದ ವರಿಷ್ಠರಿಗೆ ಅರ್ಥವಾಗಿದೆ ಎಂದು ಭಾವಿಸಿದ್ದೇನೆ. ನಮಗೆ ಮತದಾರರ ಹಿತಾಸಕ್ತಿ ಮುಖ್ಯವೇ ಹೊರತು ಪಕ್ಷದ ತೀರ್ಮಾನವಲ್ಲ. ಪುತ್ರ ರಘುಚಂದನ್‌ ಯಾವ ರೀತಿ ಸ್ಪರ್ಧಿಸಬೇಕು ಎಂಬುದು ಪಕ್ಷದ ನಿಲುವು ಆಧರಿಸಿ ತೀರ್ಮಾನವಾಗಲಿದೆ’ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ರಾಯಚೂರಿನಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕರಿಗೆ ಟಿಕೆಟ್ ಘೋಷಣೆಯಾದ ಬಳಿಕ, ಅತೃಪ್ತಿ ತೀವ್ರಗೊಂಡಿದೆ. ಆಕಾಂಕ್ಷಿಗಳಾಗಿದ್ದ ಮಾಜಿ ಸಂಸದ ಬಿ.ವಿ.ನಾಯಕ ಹಾಗೂ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಬೆಂಬಲಿಗರು ಜಿಲ್ಲೆಯ ವಿವಿಧೆಡೆ ಸಭೆ ನಡೆಸಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಸಭೆಗಳಲ್ಲಿ ಬ್ಯಾನರ್‌ಗಳ ಹಿಡಿದ ಪಕ್ಷದ ಕಾರ್ಯಕರ್ತರು, ‘ಗೋ ಬ್ಯಾಕ್‌ ಅಮರೇಶ್ವರ ನಾಯಕ’ ಎಂಬ ಘೋಷಣೆಗಳನ್ನು ಕೂಗಿದ್ದಾರೆ.

ರಾಯಚೂರು ಕ್ಷೇತ್ರದ ಬಿಜೆಪಿ ಪ್ರಭಾರಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಬಿಜೆಪಿ ವಿಭಾಗೀಯ ಕಾರ್ಯದರ್ಶಿ ಚಂದ್ರಶೇಖರ ಪಾಟೀಲ ಜಿಲ್ಲೆಗೆ ಬಂದು ಇಬ್ಬರು ಆಕಾಂಕ್ಷಿಗಳ ಮನೆಗೆ ತೆರಳಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇದೇ ಅವಧಿಯಲ್ಲಿ ಕಾರ್ಯಕರ್ತರು ಅಮರೇಶ್ವರ ನಾಯಕ ಅವರ ವಿರುದ್ಧಅವಾಚ್ಯ ಶಬ್ದಗಳಿಂದ ನಿಂದಿಸಿದ್ದೂ ನಡೆದಿದೆ.

ಅಮರೇಶ್ವರ ನಾಯಕ ಅವರೇ ಸ್ಪರ್ಧಿಸುವುದಾದರೆ ಅವರ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ಕಾರ್ಯಕರ್ತರು ಬಹಿರಂಗವಾಗಿಯೇ ಹೇಳಿದ್ದಾರೆ. ಇದರಿಂದ ಮುಜುಗರಕ್ಕೆ ಒಳಗಾದ ಪಕ್ಷದ ಪ್ರಭಾರಿಗಳು ಕಾರ್ಯಕರ್ತರ ಅಭಿಪ್ರಾಯವನ್ನು ವರಿಷ್ಠರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್ ಸ್ಪರ್ಧೆಯ ವಿರುದ್ಧ ಅಸಮಾಧಾನ ಹೊಂದಿದ್ದ ಬಹುತೇಕರನ್ನು ಬಿ.ಎಸ್. ಯಡಿಯೂರಪ್ಪ ಸಮಾಧಾನ ಪಡಿಸಿದ್ದರು. ಬಳಿಕ, ವಿರೋಧ ತಣ್ಣಗಾದಂತಿತ್ತು.

‌ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ ಅವರು, ‘ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿರುವೆ.  ಈ ಸಂಬಂಧ ಚರ್ಚಿಸಲು ಮಾರ್ಚ್‌ 31ರಂದು ನಗರದಲ್ಲಿ ಸಮಾನ ಮನಸ್ಕರ ಸಭೆ ಕರೆದಿರುವೆ’ ಎಂದರು.

‘ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಜಗದೀಶ ಶೆಟ್ಟರ್‌ ಅವರು, ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರನ್ನು ಮನಬಂದಂತೆ ಟೀಕಿಸಿದ್ದರು. ಈಗ ಅವರನ್ನೇ ಮತ್ತೆ ಪಕ್ಷಕ್ಕೆ ಬರಮಾಡಿಕೊಂಡು, ಬೆಳಗಾವಿ ಟಿಕೆಟ್‌ ಕೊಟ್ಟಿರುವುದು ಸರಿಯಲ್ಲ’ ಎಂದು ಹೇಳಿದರು.

‘ಸ್ಥಳೀಯವಾಗಿ ಹಲವು ಟಿಕೆಟ್ ಆಕಾಂಕ್ಷಿಗಳಿದ್ದರೂ ಹೊರಗಿನವರಿಗೆ ಮಣೆ ಹಾಕಿದ್ದು ಒಳ್ಳೆಯದಲ್ಲ. ಯಾರಿಗೆ ಟಿಕೆಟ್‌ ನೀಡುವುದು ಸೂಕ್ತವೆಂದು ಪಕ್ಷದವರು ನಡೆಸಿದ ಸಮೀಕ್ಷೆ ಸುಳ್ಳು. ಸಮೀಕ್ಷೆಯಲ್ಲಿ ಹೆಸರೇ ಬಾರದವರಿಗೆ ಟಿಕೆಟ್‌ ಕೊಟ್ಟಿರುವುದರಿಂದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT