ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ | ಬಿಜೆಪಿ ಏಕಾಂಗಿ ಹೋರಾಟ: ಮನಮೋಹನ್‌ ಸಮಾಲ್

Published 22 ಮಾರ್ಚ್ 2024, 13:44 IST
Last Updated 22 ಮಾರ್ಚ್ 2024, 13:44 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದಲ್ಲಿ ಬಿಜೆಪಿಯು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮನಮೋಹನ್‌ ಸಮಾಲ್ ಶುಕ್ರವಾರ ತಿಳಿಸಿದರು.

ಇದರೊಂದಿಗೆ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಜತೆಗೆ ಬಿಜೆಪಿಯು ಬಹು ದಿನಗಳಿಂದ ನಡೆಸುತ್ತಿದ್ದ ಮೈತ್ರಿ ಮಾತುಕತೆ ವಿಫಲವಾದಂತಾಗಿದೆ.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಮತ್ತು ಒಡಿಶಾ ಅಭಿವೃದ್ಧಿಗಾಗಿ ಲೋಕಸಭೆಯ 21 ಮತ್ತು ವಿಧಾನಸಭೆಯ 147 ಕ್ಷೇತ್ರಗಳಲ್ಲಿ ಬಿಜೆಪಿಯು ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ. ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಕಳೆದ 10 ವರ್ಷಗಳಿಂದ ವಿವಿಧ ಸಂದರ್ಭಗಳಲ್ಲಿ ಬೆಂಬಲ ವ್ಯಕ್ತಪಡಿಸಿದ್ದಕ್ಕಾಗಿ ಬಿಜೆಡಿ ಅಧ್ಯಕ್ಷ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಸಮಾಲ್ ಧನ್ಯವಾದ ತಿಳಿಸಿದರು. 

ಬಿಜೆಡಿ ಸ್ಪಷ್ಟನೆ: ಬಿಜೆಪಿಯ ಹೇಳಿಕೆಯ ಬೆನ್ನಲ್ಲೇ ಬಿಜೆಡಿಯೂ ಈ ಸಂಬಂಧ ಸ್ಪಷ್ಟನೆ ನೀಡಿದೆ. ಒಡಿಶಾದ 21 ಲೋಕಸಭಾ ಕ್ಷೇತ್ರಗಳು ಮತ್ತು 147 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವು ಸ್ಪರ್ಧಿಸಲಿದೆ ಎಂದು ಬಿಜೆಡಿ ಸಂಘಟನಾ ಕಾರ್ಯದರ್ಶಿ ಪ್ರಣವ್ ಪ್ರಕಾಶ್ ದಾಸ್ ಹೇಳಿದ್ದಾರೆ.

‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಡಿ ರಾಜ್ಯದಲ್ಲಿ ಮೂರನೇ ನಾಲ್ಕರಷ್ಟು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಜಗನ್ನಾಥನ ಆಶೀರ್ವಾದ ಮತ್ತು ರಾಜ್ಯದ ಜನರ ನಂಬಿಕೆಯಿಂದ ಬಿಜೆಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿ ಹಿಂದೆಂದೂ ಇಲ್ಲದ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿದೆ’ ಎಂದು ತಿಳಿಸಿದ್ದಾರೆ.

ಬಿಜೆಡಿ ಮತ್ತು ಬಿಜೆಪಿ 1998ರಿಂದ 2009ರವರೆಗೆ, 11 ವರ್ಷ ಕಾಲ, ಮೈತ್ರಿಯಲ್ಲಿದ್ದು, ಮೂರು ಲೋಕಸಭಾ ಚುನಾವಣೆ ಮತ್ತು ಎರಡು ವಿಧಾನಸಭಾ ಚುನಾವಣೆಗಳನ್ನು ಜೊತೆಯಾಗಿ ಎದುರಿಸಿದ್ದವು.

ತಮಿಳುನಾಡು: 14 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿ ಘೋಷಣೆ

ತಮಿಳುನಾಡಿನ 14 ಲೋಕಸಭಾ ಕ್ಷೇತ್ರಗಳಿಗೆ ಮತ್ತು ಪುದುಚೇರಿಯ ಏಕೈಕ ಕ್ಷೇತ್ರಕ್ಕೆ ಬಿಜೆಪಿ ಶುಕ್ರವಾರ ಅಭ್ಯರ್ಥಿಗಳನ್ನು ಘೋಷಿಸಿದೆ.

ಪುದುಚೇರಿಯಲ್ಲಿ ಸಚಿವ ನಮಃಶಿವಾಯಮ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ತನ್ನ ಮಿತ್ರಪಕ್ಷವಾದ ಪಟ್ಟಾಳ್ ಮಕ್ಕಳ್ ಕಚ್ಚಿ (ಪಿಎಂಕೆ)ಗೆ ಬಿಜೆಪಿಯು 10 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದು, ಉಳಿದ ಕೆಲವು ಕ್ಷೇತ್ರಗಳನ್ನು ಮೈತ್ರಿಕೂಟದಲ್ಲಿರುವ ಇತರ ಸಣ್ಣ ಪಕ್ಷಗಳಿಗೆ ನೀಡಿದೆ.

ಪಕ್ಷವು ಗುರುವಾರ 9 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಅಣ್ಣಾಮಲೈ ಕೊಯಮತ್ತೂರಿನಿಂದ, ಕೇಂದ್ರ ಸಚಿವ ಎಲ್.ಮುರುಗನ್ ನೀಲ್‌ಗಿರೀಸ್‌ನಿಂದ, ತಮಿಳ್ ಇಸೈ ಸೌಂದರರಾಜನ್ ಚೆನ್ನೈ ದಕ್ಷಿಣದಿಂದ, ಕೇಂದ್ರದ ಮಾಜಿ ಸಚಿವ ಪೊನ್ ರಾಧಾಕೃಷ್ಣನ್ ಕನ್ಯಾಕುಮಾರಿಯಿಂದ ಸ್ಪರ್ಧಿಸುತ್ತಿದ್ದಾರೆ.

ಬಿಆರ್‌ಎಸ್‌ನಿಂದ ಇಬ್ಬರ ಹೆಸರು ಘೋಷಣೆ

ಹೈದರಾಬಾದ್ (ಪಿಟಿಐ): ಬಿಆರ್‌ಎಸ್ ಪಕ್ಷವು ಲೋಕಸಭಾ ಚುನಾವಣೆಗಾಗಿ ತೆಲಂಗಾಣದಲ್ಲಿ ಮತ್ತೆ ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದೆ. ಮಾಜಿ ಐಎಎಸ್ ಅಧಿಕಾರಿ ವೆಂಕಟರಾಮ ರೆಡ್ಡಿ ಮೇಡಕ್ ಕ್ಷೇತ್ರದಿಂದ, ಮಾಜಿ ಐಪಿಎಸ್ ಅಧಿಕಾರಿ ಆರ್.ಎಸ್.ಪ್ರವೀಣ್ ಕುಮಾರ್ ನಾಗರಕರ್ನೂಲ್‌ನಿಂದ ಕಣಕ್ಕಿಳಿಯುತ್ತಿದ್ದಾರೆ.

ವೆಂಕಟರಾಮ ರೆಡ್ಡಿ ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದರೆ, ಆರ್.ಎಸ್.ಪ್ರವೀಣ್ ಕುಮಾರ್ ಇತ್ತೀಚೆಗೆ ತಾನೇ ಬಿಎಸ್‌ಪಿ ತ್ಯಜಿಸಿ ಬಿಆರ್‌ಎಸ್ ಸೇರ್ಪಡೆಯಾಗಿದ್ದರು.

ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷವು ತೆಲಂಗಾಣದ 17 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT