ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಣಾಳಿಕೆಯಲ್ಲಿನ ಭರವಸೆಗಳು ಭ್ರಷ್ಟಾಚಾರ ಅಲ್ಲ: ಸುಪ್ರೀಂ ಕೋರ್ಟ್

Published 27 ಮೇ 2024, 16:30 IST
Last Updated 27 ಮೇ 2024, 16:30 IST
ಅಕ್ಷರ ಗಾತ್ರ

ನವದೆಹಲಿ: ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ನೀಡುವ ಭರವಸೆಗಳನ್ನು ಚುನಾವಣಾ ಕಾನೂನುಗಳ ಅಡಿಯಲ್ಲಿ ‘ಭ್ರಷ್ಟಾಚಾರ’ ಎನ್ನಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ.ವಿ. ವಿಶ್ವನಾಥನ್ ಅವರು ಇದ್ದ ವಿಭಾಗೀಯ ಪೀಠವು ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮತದಾರ ಶಶಾಂಕ ಜೆ. ಶ್ರೀಧರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಮೌಖಿಕವಾಗಿ ಈ ಮಾತು ಹೇಳಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದನ್ನು ಈ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಿದ್ಧಪಡಿಸಿದ್ದ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಗಳು ಸಾರ್ವಜನಿಕರಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಹಣಕಾಸಿನ ನೆರವು ಒದಗಿಸುವಂತಿದ್ದವು. ಈ ಭರವಸೆಗಳು ಚುನಾವಣಾ ಭ್ರಷ್ಟಾಚಾರಕ್ಕೆ ಸಮ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

‘ರಾಜಕೀಯ ಪಕ್ಷವೊಂದು ತನ್ನ ಪ್ರಣಾಳಿಕೆಯಲ್ಲಿ ನೀಡುವ ಭರವಸೆಗಳು ಸಾರ್ವಜನಿಕರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಹಣಕಾಸಿನ ನೆರವು ಒದಗಿಸುವಂತೆ ಇದ್ದರೆ, ಅದು ಆ ಪಕ್ಷದ ಅಭ್ಯರ್ಥಿಯ ಭ್ರಷ್ಟಾಚಾರವಾಗಿ ಪರಿಗಣಿತವಾಗುತ್ತದೆ ಎಂದು ವಕೀಲರು ಮಂಡಿಸಿರುವ ವಾದವನ್ನು ಒಪ್ಪಲು ಆಗುವುದಿಲ್ಲ’ ಎಂದು ಪೀಠವು ಸ್ಪಷ್ಟಪಡಿಸಿದೆ.

ಶಶಾಂಕ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಬಿ.ಝೆಡ್. ಜಮೀರ್ ಅಹಮದ್ ಖಾನ್ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದ ಐದು ಗ್ಯಾರಂಟಿಗಳು ಭ್ರಷ್ಟಾಚಾರಕ್ಕೆ ಸಮನಾಗುತ್ತವೆ ಎಂದು ಅರ್ಜಿದಾರರು ವಾದಿಸಿದ್ದರು.

ಪಕ್ಷವೊಂದು ತಾನು ಅನುಷ್ಠಾನಕ್ಕೆ ತರಲು ಬಯಸುವ ನೀತಿಗಳ ಬಗ್ಗೆ ಘೋಷಿಸುವುದನ್ನು ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123ರ ಅಡಿಯಲ್ಲಿ ಭ್ರಷ್ಟ ನಡೆ ಎಂದು ಪರಿಗಣಿಸಲು ಅವಕಾಶ ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈ ಹಿಂದೆ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT