ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿ ರ್‍ಯಾಲಿಯಲ್ಲಿ ಮಕ್ಕಳ ಬಳಕೆ ಆರೋಪ: ಚುನಾವಣಾ ಆಯೋಗಕ್ಕೆ ಡಿಎಂಕೆ ದೂರು

Published 19 ಮಾರ್ಚ್ 2024, 16:05 IST
Last Updated 19 ಮಾರ್ಚ್ 2024, 16:05 IST
ಅಕ್ಷರ ಗಾತ್ರ

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆಸಿದ ರ್‍ಯಾಲಿ ವೇಳೆ ಶಾಲಾ ಮಕ್ಕಳ ಬಳಕೆ ಕುರಿತಂತೆ ತನಿಖೆ ಮತ್ತು ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಡಿಎಂಕೆ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಮೋದಿ ರ್‍ಯಾಲಿಯಲ್ಲಿ ಶಾಲಾ ಮಕ್ಕಳ ಬಳಕೆ ಕುರಿತಂತೆ ವಿಚಾರಣೆ ನಡೆಸಲಾಗುತ್ತಿದೆ. ಮುಖ್ಯ ಶಿಕ್ಷಣಾಧಿಕಾರಿ ಮತ್ತು ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತರಿಂದ ವರದಿ ಕೇಳಲಾಗಿದೆ ಎಂದು ಕೊಯಮತ್ತೂರು ಜಿಲ್ಲಾಧಿಕಾರಿ ಕ್ರಾಂತಿ ಕುಮಾರ್ ಪತಿ ಎಕ್ಸ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. ತನಿಖೆಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಅವರು ಹೇಳಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿದ ಬಿಜೆಪಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌.ಎಸ್. ಭಾರತಿ ಅವರು, ಮುಖ್ಯ ಚುನಾವಣಾಧಿಕಾರಿ ಸತ್ಯವ್ರತ ಸಾಹು ಅವರಿಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಮಾರ್ಚ್ 18ರಂದು ಬಿಜೆಪಿ ಆಯೋಜಿಸಿದ್ದ ರೋಡ್ ಶೋ ವೇಳೆ ಪಕ್ಷದ ಚಿಹ್ನೆ ಇದ್ದ ಬಟ್ಟೆಗಳನ್ನು ಧರಿಸಿದ್ದ 12ರಿಂದ 15 ವರ್ಷದ ಮಕ್ಕಳು ಭಾಗವಹಿಸಿದ್ದರು. ಅಲ್ಲದೆ, ಬಿಜೆಪಿ ಪರವಾದ ಹಾಡುಗಳನ್ನು ಹಾಡುತ್ತಿದ್ದರು. ಈ ರೀತಿ ಬಾಲಕಾರ್ಮಿಕರಾಗುವುದರಿಂದಲೂ ಮಕ್ಕಳನ್ನು ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಚುನಾವಣಾ ಪ್ರಚಾರ, ರ್‍ಯಾಲಿಗಳು ಮುಂತಾದ ಕಾರ್ಯಕ್ರಮಗಳಿಗೆ ಮಕ್ಕಳ ಬಳಕೆಗೆ ನಿರ್ಬಂಧ ವಿಧಿಸಿ ಫೆಬ್ರುವರಿ 5ರಂದು ಚುನಾವಣಾ ಆಯೋಗ ಹೊರಡಿಸಿದ್ದ ಅಧಿಸೂಚನೆಯನ್ನು ಬಿಜೆಪಿ ನೇರವಾಗಿ ಉಲ್ಲಂಘಿಸಿದೆ ಎಂದೂ ಅವರು ದೂರಿನಲ್ಲಿ ತಿಳಿಸಿದ್ದಾರೆ. ರ್‍ಯಾಲಿ ವಿಡಿಯೊ ತುಣುಕನ್ನೂ ಆಯೋಗಕ್ಕೆ ಸಲ್ಲಿಸಲಾಗಿದೆ.

ಜೊತೆಗೆ, ಮಾರ್ಚ್ 16ರ ಚಾಣಾಕ್ಯ ಟಿವಿ ವಾರ್ಷಿಕೋತ್ಸವದಲ್ಲಿ ದ್ವೇಷ ಭಾಷಣ ಮಾಡುವ ಮೂಲಕ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಡಿಎಂಕೆ ಮತ್ತೊಂದು ದೂರು ಸಲ್ಲಿಸಿದೆ.

ನಿರ್ಮಲಾ ಸೀತಾರಮನ್ ಅವರು, ದುರುದ್ದೇಶಪೂರಿತವಾಗಿ ಡಿಎಂಕೆ ಪಕ್ಷ ಮತ್ತು ಅದರ ನಾಯಕರ ವಿರುದ್ಧ ದ್ವೇಷಪೂರಿತ ಹಾಗೂ ಮಾನಹಾನಿಕರ ಭಾಷಣ ಮಾಡಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ದುರುದ್ದೇಶದಿಂದ ಅಪಪ್ರಚಾರ ಮಾಡಿದ್ದಾರೆ. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT