ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಶ್ಚಿಮ ಮಹಾರಾಷ್ಟ್ರ: ಸಮಬಲದ ಹೋರಾಟ

‘ಮಹಾ ವಿಕಾಸ ಅಘಾಡಿ’, ‘ಮಹಾಯುತಿ’ ನಡುವೆ ಹಣಾಹಣಿ
Published 29 ಮಾರ್ಚ್ 2024, 15:46 IST
Last Updated 29 ಮಾರ್ಚ್ 2024, 15:46 IST
ಅಕ್ಷರ ಗಾತ್ರ

ಮುಂಬೈ: ‘ಸಕ್ಕರೆ ಸೀಮೆ’ ಎಂದೇ ಹೆಸರುವಾಸಿಯಾಗಿರುವ, ವಿಶಾಲ ಮತ್ತು ಸಮೃದ್ಧ ಪಶ್ಚಿಮ ಮಹಾರಾಷ್ಟ್ರದ ಐದು ಜಿಲ್ಲೆಗಳಲ್ಲಿ ಹರಡಿಕೊಂಡಿರುವ 10 ಲೋಕಸಭಾ ಕ್ಷೇತ್ರಗಳು ಈ ಬಾರಿ ನೇರ ಹಣಾಹಣಿಗೆ ಸಾಕ್ಷಿಯಾಗಲಿವೆ. ಯಾರಿಗೆ ಎಷ್ಟು ಸ್ಥಾನ ಸಿಗಬಹುದು ಎನ್ನುವುದು ಮಾತ್ರ ನಿಗೂಢವಾಗಿದೆ.

ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಪ್ರಾಂತ್ಯದಲ್ಲಿ 2014 ಮತ್ತು 2019ರ ಚುನಾವಣೆಯಲ್ಲಿ ‘ಮೋದಿ ಅಲೆ’ ಮೂಲಕ ಬಿಜೆಪಿ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡಿತು. ವ್ಯವಸ್ಥಿತ ಕೃಷಿ ಜಾಲ ಮತ್ತು ಸಹಕಾರಿ ವಲಯಕ್ಕೆ ಹೆಸರಾದ ಈ ಪ್ರಾಂತ್ಯವು ಪವಾರ್ ಕುಟುಂಬದ ಹೋರಾಟಕ್ಕೂ ಸಾಕ್ಷಿಯಾಗಲಿದೆ.

ಮೇ.7 ಮತ್ತು ಮೇ.13ರಂದು ಮತದಾನ ನಡೆಯಲಿರುವ ಈ ಭಾಗದಲ್ಲಿ ಮರಾಠಾ ಮತ್ತು ಒಬಿಸಿ ಮೀಸಲಾತಿ ವಿಚಾರವೇ ನಿರ್ಣಾಯಕ ಅಂಶವಾಗಿರಲಿದೆ.

2009ರ ಲೋಕಸಭಾ ಚುನಾವಣೆಯಲ್ಲಿ ಹತ್ತು ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್–ಎನ್‌ಸಿಪಿ ತಲಾ 3 ಸ್ಥಾನ, ಶಿವಸೇನಾ 2, ಪಕ್ಷೇತರ 1 ಮತ್ತು ಸ್ವಾಭಿಮಾನಿ ಶೇತ್ಕಾರಿ ಸಂಘಟನೆ ಒಂದು ಕ್ಷೇತ್ರ ಗೆದ್ದಿದ್ದವು. 2014ರಲ್ಲಿ ಎನ್‌ಸಿಪಿ 4, ಬಿಜೆಪಿ 3 ಮತ್ತು ಶಿವಸೇನಾ 2 ಹಾಗೂ ಸ್ವಾಭಿಮಾನಿ ಶೇತ್ಕಾರಿ ಸಂಘಟನೆ ಒಂದು ಕ್ಷೇತ್ರ ಗೆದ್ದಿದ್ದವು. 2019ರಲ್ಲಿ ಬಿಜೆಪಿ ತನ್ನ ಬಲ ವೃದ್ಧಿಸಿಕೊಂಡು 4 ಸ್ಥಾನಗಳಲ್ಲಿ ಜಯ ಸಾಧಿಸಿದರೆ, ಎನ್‌ಸಿಪಿ (ಶರದ್‌ಪವಾರ್ ಬಣ) ಮತ್ತು ಶಿವಸೇನಾ ತಲಾ 3 ಕ್ಷೇತ್ರಗಳನ್ನು ಗೆದ್ದಿದ್ದವು.

ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಕಾಂಗ್ರೆಸ್ ಗೆಲುವಿಗಾಗಿ ಶತಪ್ರಯತ್ನ ಮಾಡುತ್ತಿದೆ. ಈ ನಡುವೆ ಎನ್‌ಸಿಪಿ ಮತ್ತು ಶಿವಸೇನಾ ಪಕ್ಷಗಳು ವಿಭಜನೆಗೊಂಡು, ರಾಜಕೀಯ ಸಮೀಕರಣಗಳು ಬದಲಾಗಿವೆ.

ಕಾಂಗ್ರೆಸ್ ನೇತೃತ್ವದ ‘ಮಹಾ ವಿಕಾಸ ಅಘಾಡಿ’ (ಎಂವಿಎ) ಮತ್ತು ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟಗಳು ಸಮಬಲದೊಂದಿಗೆ ಕದನ ಕಣಕ್ಕೆ ಧುಮುಕಿವೆ.

ಬಾರಾಮತಿ ಕ್ಷೇತ್ರವು ಪಶ್ಚಿಮ ಮಹಾರಾಷ್ಟ್ರದ ಕೇಂದ್ರಬಿಂದು ಎನಿಸಿಕೊಂಡಿದೆ. ಪವಾರ್ ಕುಟುಂಬದ ಭದ್ರಕೋಟೆಯಾಗಿರುವ ಈ ಕ್ಷೇತ್ರಕ್ಕಾಗಿ ಮೂರು ಬಾರಿಯ ಸಂಸದೆ ಸುಪ್ರಿಯಾ ಸುಳೆ ಮತ್ತು ಅಜಿತ್ ಪವಾರ್ ಪತ್ನಿ ಸುನೇತ್ರ ಪವಾರ್ ಪೈಪೋಟಿ ನಡೆಸುತ್ತಿದ್ದಾರೆ. ಅಭ್ಯರ್ಥಿಗಳ ಹೆಸರು ಅಧಿಕೃತವಾಗಿ ಘೋಷಣೆಯಾಗದಿದ್ದರೂ ಆಗಲೇ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ಐದು ದಶಕಗಳಲ್ಲಿ ಮೊದಲ ಬಾರಿಗೆ ಬಾರಾಮತಿಯಲ್ಲಿ ಪವಾರ್ ಕುಟುಂಬದ ಸದಸ್ಯರ ನಡುವೆಯೇ ಹೋರಾಟ ನಡೆಯುತ್ತಿದೆ.

ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂದೆ ಅವರ ಪುತ್ರಿ ಪ್ರಣಿತಿ ಶಿಂದೆ ಸೋಲಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಅವರಿಗೆ ವಿರುದ್ಧವಾಗಿ ಬಿಜೆಪಿಯಿಂದ ಮಾಲ್‌ಶಿರಸ್‌ ಶಾಸಕ ರಾಮ್‌ ಸತ್ಪುತೆ ಕಣಕ್ಕಿಳಿದಿದ್ದಾರೆ.   

ಶಿರೂರ್‌ ಕ್ಷೇತ್ರದಲ್ಲಿ ಎನ್‌ಸಿಪಿ ಮತ್ತು ಎನ್‌ಸಿಪಿ (ಶರದ್‌ ಪವಾರ್ ಬಣ) ನಡುವೆ ಪೈಪೋಟಿ ಏರ್ಪಟ್ಟಿದ್ದು, ಶಿವಾಜಿರಾವ್ ಅಧಲ್‌ರಾವ್ ಪಾಟೀಲ್ ಮತ್ತು ಡಾ.ಅಮೋಲ್ ಕೊಲ್ಲೆ ನಡುವೆ ಹೋರಾಟ ನಡೆಯುತ್ತಿದೆ.

ಸಾಂಸ್ಕೃತಿಕ ರಾಜಧಾನಿ ಎನಿಸಿರುವ ಪುಣೆಯಲ್ಲಿ ಬಿಜೆಪಿಯ ಮುರಳೀಧರ ಮೊಹೊಲ್ ಮತ್ತು ಕಸಬಾ ಪೇಟ್‌ನ ಕಾಂಗ್ರೆಸ್ ಶಾಸಕ ರವೀಂದ್ರ ಧಾಂಗೇಕರ್ ನಡುವೆ ಹಣಾಹಣಿ ನಡೆಯಲಿದೆ. 

ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಎರಡೂ ಕೂಟಗಳಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದು, ಮುಂದಿನ ದಿನಗಳಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆದರೂ ಅಚ್ಚರಿಯೇನಿಲ್ಲ.

ಎನ್‌ಸಿಪಿ (ಶರದ್‌ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ
ಪಿಟಿಐ ಚಿತ್ರ 
ಎನ್‌ಸಿಪಿ (ಶರದ್‌ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ ಪಿಟಿಐ ಚಿತ್ರ 

ರಾಜವಂಶಸ್ಥರ ರಾಜಕೀಯ

ಕೊಲ್ಲಾಪುರ ಮತ್ತು ಸತಾರಾದ ಚುನಾವಣೆಯಲ್ಲಿ ರಾಜಮನೆತನಗಳು ಕೂಡ ಹೋರಾಟ ನಡೆಸುತ್ತಿವೆ. ಕೊಲ್ಲಾಪುರದಲ್ಲಿ ಎಂವಿಎದಿಂದ ಛತ್ರಪತಿ ಶಿವಾಜಿ ರಾಜಮನೆತನದ 12ನೇ ವಂಶಸ್ಥ ಹಾಗೂ ಕೊಲ್ಲಾಪುರದ ಸಮಾಜ ಸುಧಾರಕ ರಾಜಶ್ರೀ ಛತ್ರಪತಿ ಶಾಹು ಮಹಾರಾಜ್ ಅವರ ಮೊಮ್ಮಗ ಶಾಹು ಎರಡನೇ ಶಹಾಜಿ ಛತ್ರಪತಿ ಕಣಕ್ಕಿಳಿದಿದ್ದಾರೆ. ಬಿ.ಆರ್.ಅಂಬೇಡ್ಕರ್ ಅವರಿಗೂ ಶಾಹು ಮಹಾರಾಜ್ ಅವರಿಗೂ ಇದ್ದ ನಂಟಿನ ಕಾರಣಕ್ಕಾಗಿ ‘ವಂಚಿತ್ ಬಹುಜನ್ ಅಘಾಡಿ’ಯ ಪ್ರಕಾಶ್ ಅಂಬೇಡ್ಕರ್ ಅವರೂ ಶಹಾಜಿ ಛತ್ರಪತಿ ಅವರನ್ನು ಬೆಂಬಲಿಸುತ್ತಿದ್ದಾರೆ. ಸತಾರಾ ಕ್ಷೇತ್ರದಲ್ಲಿ ಛತ್ರಪತಿ ಶಿವಾಜಿ ಮನೆತನದ 13ನೇ ವಂಶಸ್ಥ ಹಾಲಿ ಬಿಜೆಪಿ ರಾಜ್ಯಸಭಾ ಸದಸ್ಯ ಛತ್ರಪತಿ ಉದಯನ್‌ರಾಜೇ ಭೋಂಸ್ಲೆ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಅವರು ಈ ಹಿಂದೆ ಎನ್‌ಸಿಪಿಯಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT