ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ 2 ಹಂತ | ಮಹಿಳೆಯರಿಗೆ ಸಿಗದ ಸೂಕ್ತ ಪ್ರಾತಿನಿಧ್ಯ: ಅಭ್ಯರ್ಥಿಗಳ ಪ್ರಮಾಣ ಶೇ 8

ಮೊದಲ ಎರಡು ಹಂತ: ಮಹಿಳೆಯರಿಗೆ ಸಿಗದ ಸೂಕ್ತ ಪ್ರಾತಿನಿಧ್ಯ
Published 28 ಏಪ್ರಿಲ್ 2024, 23:29 IST
Last Updated 28 ಏಪ್ರಿಲ್ 2024, 23:29 IST
ಅಕ್ಷರ ಗಾತ್ರ
ಮಹಿಳೆಯರಿಗಾಗಿ ಇಂತಿಷ್ಟು ಸೀಟುಗಳನ್ನು ಮೀಸಲಿಟ್ಟರಷ್ಟೇ ಸಾಲದು. ಒಬ್ಬ ನಾಯಕಿಯಾಗಿ ಹಾಗೂ ನಿರ್ಧಾರ ಕೈಗೊಳ್ಳುವ ಸ್ಥಾನಗಳಲ್ಲಿ ಮಹಿಳೆಯರನ್ನು ಕಾಣುವಂತಹ ಸಾಂಸ್ಕೃತಿಕ ಬದಲಾವಣೆಯ ಅಗತ್ಯವಿದೆ ಎಂಬುದು ಬಿಜೆಡಿಯ ಬಿಜು ಮಹಿಳಾ ದಳದ ಉಪಾಧ್ಯಕ್ಷೆ ಮೀರಾ ಪರಿದಾ ಅವರ ಹೇಳಿಕೆ

ನವದೆಹಲಿ: ಲೋಕಸಭಾ ಚುನಾವಣೆಯ ಎರಡು ಹಂತಗಳ ಮತದಾನ ಪ್ರಕ್ರಿಯೆ ಕೊನೆಗೊಂಡಿದೆ. ಈ ಎರಡು ಹಂತಗಳಲ್ಲಿ ಒಟ್ಟು 2,823 ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇ 8ರಷ್ಟು ಮಾತ್ರ.

ಮಹಿಳಾ ಅಭ್ಯರ್ಥಿಗಳು ಕಡಿಮೆ ಸಂಖ್ಯೆಯಲ್ಲಿರುವುದು ಲಿಂಗ ಆಧಾರಿತ ತಾರತಮ್ಯದ ಆಳವಾದ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

ಏಪ್ರಿಲ್‌ 19ರಂದು ನಡೆದ ಮೊದಲ ಹಂತದಲ್ಲಿ 1,625 ಹಾಗೂ ಏಪ್ರಿಲ್‌ 26ರಂದು ನಡೆದ ಎರಡನೇ ಹಂತದಲ್ಲಿ ಒಟ್ಟು 1,198 ಅಭ್ಯರ್ಥಿಗಳು ಕಣದಲ್ಲಿದ್ದರು. 

ಮೊದಲ ಹಂತದಲ್ಲಿ ಕಣದಲ್ಲಿದ್ದ 135 ಮಹಿಳಾ ಅಭ್ಯರ್ಥಿಗಳಲ್ಲಿ 76 ಮಂದಿ ತಮಿಳುನಾಡಿನಲ್ಲಿ ಸ್ಪರ್ಧಿಸಿದ್ದರು. ಅದರೆ, ಆ ರಾಜ್ಯದ ಒಟ್ಟು ಅಭ್ಯರ್ಥಿಗಳಿಗೆ ಹೋಲಿಸಿದರೆ ಮಹಿಳೆಯರ ಪ್ರಮಾಣ ಶೇ 8ರಷ್ಟು ಮಾತ್ರ. ತಮಿಳುನಾಡಿನ ಎಲ್ಲ ಕ್ಷೇತ್ರಗಳಿಗೂ ಮೊದಲ ಹಂತದಲ್ಲಿ ಮತದಾನ ನಡೆದಿತ್ತು. ಎರಡನೇ ಹಂತದಲ್ಲಿ ಅತಿಹೆಚ್ಚು ಮಹಿಳೆಯರು ಕೇರಳದಲ್ಲಿ (24) ಕಣಕ್ಕಿಳಿದಿದ್ದರು.

ಈ ಲಿಂಗ ಅಸಮಾನತೆಯನ್ನು ರಾಜಕೀಯ ವಿಶ್ಲೇಷಕರು ಟೀಕಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡುವ ಅಭ್ಯಾಸವನ್ನು ಈಗಿನಿಂದಲೇ ರೂಢಿಸಿಕೊಳ್ಳುವ ಬದಲು ಮಹಿಳಾ ಮೀಸಲಾತಿ ಮಸೂದೆಯ ಜಾರಿಗಾಗಿ ಪಕ್ಷಗಳು ಏಕೆ ಕಾಯುತ್ತಿವೆ ಎಂದು ಪ್ರಶ್ನಿಸಿದ್ದಾರೆ. 

ಮಹಿಳಾ ಉಮೇದುವಾರರ ಸಂಖ್ಯೆಯನ್ನು ಹೆಚ್ಚಿಸಲು ರಾಜಕೀಯ ಪಕ್ಷಗಳು ರಚನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ದೆಹಲಿ ವಿಶ್ವವಿದ್ಯಾಲಯದ ಜೀಸಸ್ ಮತ್ತು ಮೇರಿ ಕಾಲೇಜಿನ ಸಹ ಪ್ರಾಧ್ಯಾಪಕಿ ಸುಶೀಲಾ ರಾಮಸ್ವಾಮಿ ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಲೇಬರ್ ಪಕ್ಷವು ಮಹಿಳೆಯರಿಗೆ ಇಂತಿಷ್ಟು ಸೀಟುಗಳನ್ನು ಮೀಸಲಿಟ್ಟಿರುವುದನ್ನು ಉಲ್ಲೇಖಿಸಿದ ಅವರು, ‘ರಾಜಕೀಯ ಪಕ್ಷಗಳು ಹೆಚ್ಚಿನ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಉತ್ಸುಕತೆ ತೋರಬೇಕಿತ್ತು’ ಎಂದಿದ್ದಾರೆ.

‘ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಮಹಿಳೆಯರಿಗಾಗಿ ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದು, ಮಹಿಳಾ ಸಬಲೀಕರಣದ ಬಗ್ಗೆಯೂ ಧ್ವನಿ ಎತ್ತಿವೆ. ಅದರೆ, ಮಹಿಳಾ ಅಭ್ಯರ್ಥಿಗಳ ಕೊರತೆಯು ರಾಜಕೀಯ ವ್ಯವಸ್ಥೆಯಲ್ಲಿ ಲಿಂಗ ಅಸಮಾನತೆಯ ಆಳವಾದ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳುವರು. 

ಭಾರತದ ಮತದಾರರಲ್ಲಿ ಅರ್ಧದಷ್ಟು ಮಹಿಳೆಯರೇ ಇದ್ದಾರೆ. ಹಾಗಿರುವಾಗ, ಅಭ್ಯರ್ಥಿಗಳಲ್ಲಿ ಅವರ ಪ್ರಾತಿನಿಧ್ಯವು ಕಡಿಮೆಯಿರುವುದು ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಪೂರ್ಣಪ್ರಮಾಣದ ಭಾಗವಹಿಸುವಿಕೆಗೆ ಅಡ್ಡಿಯಾಗುವ ಅಂಶಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಇಫ್ತಿಕಾರ್‌ ಅಹ್ಮದ್‌ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT