ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳಿಂದ ಕಿಡ್ನಿ ಪಡೆದು ಟಿಕೆಟ್ ಕೊಟ್ಟ ಲಾಲು: ಸಾಮ್ರಾಟ್ ಚೌಧರಿ

ಬಿಹಾರ ಬಿಜೆಪಿ ಅಧ್ಯಕ್ಷನ ಹೇಳಿಕೆ ವಿವಾದ; ಲಾಲು ಪುತ್ರಿ ತಿರುಗೇಟು
Published 22 ಮಾರ್ಚ್ 2024, 15:57 IST
Last Updated 22 ಮಾರ್ಚ್ 2024, 15:57 IST
ಅಕ್ಷರ ಗಾತ್ರ

ಪಟ್ನಾ: ‘ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಟಿಕೆಟ್‌ಗಳನ್ನು ಮಾರುವುದರಲ್ಲಿ ಪ್ರವೀಣರಾಗಿದ್ದು, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿಯೂ ಆಕಾಂಕ್ಷಿಗಳಿಗೆ ತಮ್ಮ ಪಕ್ಷದ ಟಿಕೆಟ್‌ಗಳನ್ನು ಮಾರುತ್ತಿದ್ದಾರೆ’ ಎಂದು ಬಿಹಾರ ಬಿಜೆಪಿ ಅಧ್ಯಕ್ಷ ಮತ್ತು ರಾಜ್ಯದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ, ‘ತಮ್ಮ ಮಗಳನ್ನೂ ಬಿಡದ ಲಾಲು, ಮೊದಲು ಅವರಿಂದ ಕಿಡ್ನಿ ಪಡೆದುಕೊಂಡು ನಂತರ ಚುನಾವಣಾ ಟಿಕೆಟ್ ನೀಡಿದ್ದಾರೆ’ ಎಂದು ಹೇಳಿದ್ದಾರೆ.

ಚೌಧರಿ ಆರೋಪವನ್ನು ತೀವ್ರವಾಗಿ ಖಂಡಿಸಿರುವ ಲಾಲು ಪುತ್ರಿ ರೋಹಿಣಿ ಆಚಾರ್ಯ, ‘ಕೀಳು ಚಿಂತನೆ, ಕೀಳು ಮಾತು, ಕೀಳು ವರ್ತನೆ’ಯ ಜನರಿಗೆ ನಾನು ಜನತಾ ನ್ಯಾಯಾಲಯದಲ್ಲಿ ಉತ್ತರಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ‘ಎಕ್ಸ್‌’ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ರೋಹಿಣಿ, ‘ಲಾಲೂಜಿ ನನ್ನ ತಂದೆ. ತಂದೆಯೆಡೆಗಿನ ಪ್ರೀತಿ ಮತ್ತು ಕರ್ತವ್ಯ ಪ್ರಜ್ಞೆಯಿಂದ ನಾನು ಅವರಿಗೆ ಒಂದು ಕಿಡ್ನಿ ನೀಡಿದ್ದೇನೆ. ಕುಟುಂಬಕ್ಕಾಗಿ ಮತ್ತು ಜನ್ಮಭೂಮಿ ಬಿಹಾರಕ್ಕಾಗಿ ಪ್ರಾಣ ತ್ಯಾಗ ಮಾಡಲೂ ನಾನು ಸಿದ್ಧ’ ಎಂದು ಹೇಳಿದ್ದಾರೆ.

ತಂದೆ –ತಾಯಿ ನನಗೆ ದೇವರಿಗಿಂತ ದೊಡ್ಡವರು ಎಂದಿರುವ ರೋಹಿಣಿ, ತಾನು ಸದಾ ಅವರಿಗೆ ಋಣಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ಸಿಂಗಪುರದಲ್ಲಿ ನೆಲೆಸಿರುವ ಲಾಲು ಪುತ್ರಿ ರೋಹಿಣಿ, ತಮ್ಮ ತಂದೆಗೆ 2022ರಲ್ಲಿ ಒಂದು ಕಿಡ್ನಿ ದಾನ ಮಾಡಿದ್ದರು. ಅವರು ಸರಣ್ ಕ್ಷೇತ್ರದಿಂದ ಆರ್‌ಜೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದಾರೆ.

ಸಾಮ್ರಾಟ್ ಚೌಧರಿ ಅವರು ಕುಶ್ವಾಹ ಸಮುದಾಯಕ್ಕೆ ಸೇರಿದ್ದು, ಸಮುದಾಯದ ಮುಖಂಡರೂ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. 

‘ನಮ್ಮ ಸಮಾಜ ಮತ್ತು ಸಮುದಾಯ ಎಂದಿಗೂ ಅಗ್ಗದ ಹೇಳಿಕೆಗಳು ಮತ್ತು ಅಗ್ಗದ ಭಾಷೆಯನ್ನು ಬೆಂಬಲಿಸುವುದಿಲ್ಲ’ ಎಂದು ಕುಶ್ವಾಹ ಸಮುದಾಯಕ್ಕೆ ಸೇರಿದ ಆರ್‌ಜೆಡಿ ಮುಖಂಡ ಮಧು ಮಂಜರಿ ಕುಶ್ವಾಹ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT