ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಪ್ರಣಾಳಿಕೆ ಬಿಡುಗಡೆ: ವಿಕಸಿತ ಭಾರತದ ‘ಸಂಕಲ್ಪ ಪತ್ರ’

Published 14 ಏಪ್ರಿಲ್ 2024, 4:35 IST
Last Updated 14 ಏಪ್ರಿಲ್ 2024, 4:35 IST
ಅಕ್ಷರ ಗಾತ್ರ

ನವದೆಹಲಿ: ಸತತ ಮೂರನೇ ಅವಧಿಗೆ ಅಧಿಕಾರ ಬರುವ ಕನಸಿನೊಂದಿಗೆ ಬಿಜೆಪಿಯು, ಲೋಕಸಭಾ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಿದೆ.

‘ಮೋದಿ ಗ್ಯಾರಂಟಿ’ ಹೆಸರಿನ ‘ಸಂಕಲ್ಪ ಪತ್ರ’ದಲ್ಲಿ ಎನ್‌ಆರ್‌ಸಿಯಂತಹ ವಿವಾದಿತ ಅಂಶಗಳನ್ನು ಪ್ರಸ್ತಾಪಿಸಲಾಗಿಲ್ಲ. ಬಡವರು, ಯುವಜನರು, ರೈತರು ಮತ್ತು ಮಹಿಳೆಯರಿಗೆ ವಿವಿಧ ಭರವಸೆಗಳನ್ನು ನೀಡಲಾಗಿದೆ.  ಅಸ್ಥಿರ ಜಗತ್ತಿನಲ್ಲಿ ಸಂಪೂರ್ಣ ಬಹುಮತದ ಸ್ಥಿರ ಸರ್ಕಾರ ಮುಖ್ಯ ಎಂದು ಪ್ರತಿಪಾದಿಸಲಾಗಿದೆ.

‍ಪ್ರಣಾಳಿಕೆ ಬಿಡುಗಡೆ ಮಾಡಿದ ಮೋದಿ ಅವರು ನಾಲ್ಕು ಪ್ರತಿಗಳನ್ನು ಸರ್ಕಾರದ ಯೋಜನೆಗಳ ಮುಖ್ಯ ಫಲಾನುಭವಿಗಳಾದ ಬಡವರು, ಯುವಜನತೆ, ರೈತರು ಮತ್ತು ಮಹಿಳಾ (ಜಿವೈಎಎನ್‌) ಗುಂಪಿನ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು.

‘ದೇಶದ ಜನರ ಆಶೀರ್ವಾದಕ್ಕಾಗಿ ಬಿಜೆಪಿಯ ‘ಸಂಕಲ್ಪ ಪತ್ರ’ವನ್ನು ‘ಮೋದಿ ಗ್ಯಾರಂಟಿ’ಯ ದಾಖಲೆಯಾಗಿ ನಾನು ಪ್ರಸ್ತುತಪಡಿಸುತ್ತಿದ್ದೇನೆ. ಜೂನ್ 4ರಂದು ಚುನಾವಣೆಯ ಫಲಿತಾಂಶ ಘೋಷಣೆ ಆದ ತಕ್ಷಣದಿಂದಲೇ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳ ಅನುಷ್ಠಾನದ ಮೇಲೆ ಪಕ್ಷವು ಕೆಲಸ ಮಾಡಲಿದೆ’ ಎಂದು ಪ್ರಧಾನಿ ತಿಳಿಸಿದರು.

ಬಿಜೆಪಿಯು ಕಳೆದ ಹತ್ತು ವರ್ಷಗಳಲ್ಲಿ ತನ್ನ ಪ್ರಣಾಳಿಕೆಯ ಪ್ರತಿ ಅಂಶವನ್ನೂ ಅನುಷ್ಠಾನಗೊಳಿಸಿದೆ. ಪಕ್ಷವು ಪ್ರಣಾಳಿಕೆಯ ಪಾವಿತ್ರ್ಯವನ್ನು ಮರುಸ್ಥಾಪಿಸಿದೆ
ನರೇಂದ್ರ ಮೋದಿ, ಪ್ರಧಾನಿ ಪ್ರಧಾನಿ

‘ನಮ್ಮ ಸಂಕಲ್ಪ ಪತ್ರವು ‘ವಿಕಸಿತ ಭಾರತ’ದ ನಾಲ್ಕು ಬಲಿಷ್ಠ ಸ್ತಂಭಗಳಾದ ಯುವಶಕ್ತಿ, ಮಹಿಳಾ ಶಕ್ತಿ, ಬಡವರು ಮತ್ತು ರೈತರನ್ನು ಸಬಲೀಕರಣಗೊಳಿಸುತ್ತದೆ. ಘನತೆಯ ಬದುಕು, ಗುಣಮಟ್ಟದ ಬದುಕು, ಹೂಡಿಕೆ ಮೂಲಕ ಉದ್ಯೋಗ–ಇವುಗಳ ಮೇಲೆ ನಮ್ಮ ಗಮನ ಇದೆ’ ಎಂದು ಹೇಳಿದರು.

ಸರ್ಕಾರದ ಪ್ರಸ್ತುತ ಚಾಲ್ತಿಯಲ್ಲಿರುವ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನೇ ಆಧರಿಸಿ ಪ್ರಣಾಳಿಕೆ ರೂಪಿಸಲಾಗಿದ್ದು, 2019ರ ಪ್ರಣಾಳಿಕೆಯಲ್ಲಿ ಪ್ರಸ್ತಾಪವಾಗಿದ್ದ ‘ಒಂದು ದೇಶ, ಒಂದು ಚುನಾವಣೆ’ ಹಾಗೂ ಏಕರೂಪ ನಾಗರಿಕ ಸಂಹಿತೆಯ ಜಾರಿಯನ್ನು ಪುನರುಚ್ಚರಿಸಲಾಗಿದೆ.

ಭಾರತದ ಉತ್ತರ, ದಕ್ಷಿಣ ಹಾಗೂ ಪೂರ್ವ ಭಾಗಗಳಿಗೆ ಬುಲೆಟ್‌ ರೈಲು, ವಂದೇ ಭಾರತ್, ಅಮೃತ ಭಾರತ್ ಮತ್ತು ನಮೋ ಭಾರತ್ ರೈಲುಗಳ ವಿಸ್ತರಣೆ ಮಾಡುವ ಭರವಸೆ ನೀಡಲಾಗಿದೆ.

ಕಾಶಿ ವಿಶ್ವನಾಥ ಕಾರಿಡಾರ್ ಮಾದರಿಯಲ್ಲಿ ದೇಶದಾದ್ಯಂತ ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಗಮನಾರ್ಹ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಭರವಸೆಯೂ ಪ್ರಣಾಳಿಕೆಯಲ್ಲಿ ಸ್ಥಾನ ಪಡೆದಿದೆ.

ಅಯೋಧ್ಯೆಯ ಚಾರಿತ್ರಿಕ ಅಭಿವೃದ್ಧಿಯ ಜತೆಗೆ ಪ್ರಾಚೀನ ನಾಗರಿಕತೆಯ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ‘ಭಾರತೀಯ ಸಂಸ್ಕೃತಿ ಕೋಶ’ ಸ್ಥಾಪನೆಯ ಭರವಸೆ ನೀಡಲಾಗಿದೆ.

ದೇಶದ ಪ್ರತಿಯೊಂದು ಕುಟುಂಬವೂ ಬೆಲೆಯೇರಿಕೆಯಿಂದ ಕಷ್ಟ ಅನುಭವಿಸುತ್ತಿದೆ. ಸುಳ್ಳುಗಳೇ ತುಂಬಿರುವ ಬಿಜೆಪಿಯ ಪ್ರಣಾಳಿಕೆಯನ್ನು ಯಾರೂ ನಂಬುವುದಿಲ್ಲ 
ಆತಿಶಿ, ಎಎಪಿ ನಾಯಕಿ   

ಪ್ರಣಾಳಿಕೆಯಲ್ಲಿ ಭರವಸೆಗಳನ್ನು ಬಡವರು, ಮಧ್ಯಮ ವರ್ಗ, ಮಹಿಳೆಯರು, ಮೀನುಗಾರರು, ಕಾರ್ಮಿಕರು, ಹಿರಿಯ ನಾಗರಿಕರು ಹಾಗೂ ಎಸ್‌ಸಿ, ಎಸ್‌ಟಿ ಸೇರಿದಂತೆ 10 ಸಾಮಾಜಿಕ ಗುಂಪುಗಳು ಮತ್ತು ಸುಭದ್ರ ಭಾರತ, ಸಮೃದ್ಧ ಭಾರತ ಹಾಗೂ ನಗರಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ 14 ವಿಚಾರಗಳ ಅಡಿ ವರ್ಗೀಕರಿಸಲಾಗಿದೆ.

ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ಮುಂದುವರಿಸುವುದಾಗಿ ಭರವಸೆ ನೀಡಿರುವ ಪ್ರಣಾಳಿಕೆಯು, ಅವರಿಗೆ ವಸತಿ ಯೋಜನೆ ವಿಸ್ತರಿಸುವುದಾಗಿ ತಿಳಿಸಿದೆ. ಸೌರಶಕ್ತಿ ಯೋಜನೆ ಮೂಲಕ ಉಚಿತ ವಿದ್ಯುತ್‌ನ ಭರವಸೆ ನೀಡಿದೆ.

ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾಗವಹಿಸಿದ್ದರು.

* ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಲ್ಲಿ 70 ವರ್ಷ ದಾಟಿದ ಎಲ್ಲ ಹಿರಿಯರ ಸೇರ್ಪಡೆ

* ಆಯ್ದ ಸ್ಥಳಗಳನ್ನು ಮದುವೆಗೆ ಸಜ್ಜುಗೊಳಿಸುವ ಮೂಲಕ ‘ವೆಡ್ ಇನ್ ಇಂಡಿಯಾ’ಗೆ ಉತ್ತೇಜನ 

* ಮೂರು ಕೋಟಿ ಗ್ರಾಮೀಣ ಮಹಿಳೆಯರನ್ನು ‘ಲಕ್‌ಪತಿ ದೀದಿ’ ಮಾಡಲು ಪ್ರಯತ್ನ

* ಮಹಿಳಾ ಉದ್ಯೋಗಿಗಳನ್ನು ಬೆಂಬಲಿಸಲು ವಸತಿ ನಿಲಯಗಳು, ಶಿಶುಪಾಲನಾ ಕೇಂದ್ರಗಳ ಸ್ಥಾಪನೆಯಂಥ ಕ್ರಮಗಳ ಮೂಲಕ ಕೈಗಾರಿಕಾ ಮತ್ತು ವ್ಯಾಪಾರಿ ವಲಯಗಳಲ್ಲಿ ಮೂಲಸೌಕರ್ಯ ವೃದ್ಧಿ

* ‘ನಾರಿ ಶಕ್ತಿ ವಂದನ್ ಅಧಿನಿಯಮ್‌’ ಜಾರಿ ಮೂಲಕ ಸಂಸತ್‌ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಖಾತರಿ

ಅವರು ದೇಶದ ಜನರಿಗೆ ನೀಡಿರುವ ಭರವಸೆಗಳನ್ನು ಪ್ರಣಾಳಿಕೆ ಒಳಗೊಂಡಿದೆ. ‘ಮೋದಿ ಗ್ಯಾರಂಟಿ’ಯು 24 ಕ್ಯಾರೆಟ್ ಚಿನ್ನಕ್ಕೆ ಸಮನಾಗಿದೆ
ರಾಜನಾಥ್ ಸಿಂಗ್, ರಕ್ಷಣಾ ಸಚಿವ 

* 5ಜಿ ಸೇವೆಗಳ ವಿಸ್ತರಣೆ, ಜಗತ್ತಿನಾದ್ಯಂತ ರಾಮಾಯಣ ಹಬ್ಬದ ಆಯೋಜನೆ

* ಸರ್ಕಾರಿ ನೇಮಕಾತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ

* ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕಾನೂನು 

* ರೈತರಿಗೆ ಆರ್ಥಿಕ ಬೆಂಬಲ ನೀಡುವ ‘ಕಿಸಾನ್ ಸಮ್ಮಾನ್ ನಿಧಿ’, ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ಗೆ ಬಲ 

* ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳ 

* ನೀರಾವರಿ, ಕೃಷಿ ಉತ್ಪನ್ನಗಳ ದಾಸ್ತಾನು, ಶ್ರೇಣೀಕರಣ, ವಿಂಗಡಣೆ ಘಟಕಗಳು, ಶೀತಲೀಕರಣ ಘಟಕಗಳು, ಆಹಾರ ಸಂಸ್ಕರಣೆ ಘಟಕಗಳ ಸ್ಥಾಪನೆ ಮೂಲಕ ಕೃಷಿ ಮೂಲಸೌಕರ್ಯ ವೃದ್ಧಿ 

* ಕೃಷಿ ಸಂಬಂಧಿ ಚಟುವಟಿಕೆಗಳಾದ ಬೆಳೆ ಮುನ್ಸೂಚನೆ, ಕೀಟನಾಶಕ ಬಳಕೆ, ನೀರಾವರಿ, ಮಣ್ಣಿನ ಆರೋಗ್ಯ, ಹವಾಮಾನ ಮುನ್ಸೂಚನೆಗಾಗಿ ಸ್ವದೇಶಿ ನಿರ್ಮಿತ ‘ಭಾರತ್ ಕೃಷಿ’ ಉಪಗ್ರಹ ಉಡಾವಣೆ

* ತಳ ಮಟ್ಟದಲ್ಲಿ ಕನಿಷ್ಠ ಕೂಲಿಯ ಪರಿಷ್ಕರಣೆ

* ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಆಟೋ, ಟ್ಯಾಕ್ಸಿ, ಟ್ರಕ್ ಚಾಲಕರ ಒಳಗೊಳ್ಳುವಿಕೆ

* ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ

‘ಹಳೆಯ ಗ್ಯಾರಂಟಿಗಳಿಗೆ ಯಾವ ಹೊಣೆಗಾರಿಕೆಯೂ ಇಲ್ಲ ಕೇವಲ ಪದಗಳ ಕಣ್ಕಟ್ಟು! ಮೋದಿ ಗ್ಯಾರಂಟಿ ಎಂದರೆ ‘ಜುಮ್ಲಾಗಳ (ಸುಳ್ಳು) ವಾರಂಟಿ’
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ 

* ಭಾರತವನ್ನು ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ರೂಪಿಸುವುದು

* ಉದ್ಯೋಗಾವಕಾಶಗಳ ಹೆಚ್ಚಳ

* ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ವಲಯಗಳಲ್ಲಿ 2030ರ ವೇಳೆಗೆ ಭಾರತವನ್ನು ಜಾಗತಿಕ ಉತ್ಪಾದನಾ ತಾಣವನ್ನಾಗಿ ರೂಪಿಸುವುದು

ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರ ಸ್ಥಾಪನೆ

ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಮೇಲೆ ವಿಶೇಷ ಗಮನ ನೆಟ್ಟಿರುವ ಬಿಜೆಪಿ ತಮಿಳರನ್ನು ಸೆಳೆಯಲು ಜಗತ್ತಿನಾದ್ಯಂತ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದೆ. ‘ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಯಾದ ತಮಿಳು ನಮ್ಮ ಹೆಮ್ಮೆ. ತಮಿಳು ಭಾಷೆಯ ಜಾಗತಿಕ ಖ್ಯಾತಿಯನ್ನು ಹೆಚ್ಚಿಸಲು ಬಿಜೆಪಿಯು ಎಲ್ಲ ಪ್ರಯತ್ನಗಳನ್ನೂ ಮಾಡಲಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  ತಿರುವಳ್ಳುವರ್ ತಮಿಳಿನ ಪ್ರಸಿದ್ಧ ಕವಿ ಮತ್ತು ತತ್ವಶಾಸ್ತ್ರಜ್ಞ. ಅವರ ‘ಕುರಲ್’ ಕೃತಿಯನ್ನು ವ್ಯಾಪಕವಾಗಿ ಓದುವಂತೆ ಮೋದಿ ಈ ಹಿಂದೆ ಕರೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT