ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಉತ್ತರ ಪ್ರದೇಶ– ಜಾತಿ ಸಮೀಕರಣದ ಸುತ್ತ ಮತ ಗಣಿತ

Published 17 ಏಪ್ರಿಲ್ 2024, 22:48 IST
Last Updated 17 ಏಪ್ರಿಲ್ 2024, 22:48 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ  ಮುಸ್ಲಿಮರು, ಗುಜ್ಜಾರರು, ಯಾದವರು, ಜಾಟರು ಹಾಗೂ ರಜಪೂತರು ಹಸಿರು ಕ್ರಾಂತಿಯ ಲಾಭ ಪಡೆದು ಬದುಕು ಹಸನು ಮಾಡಿಕೊಂಡವರು.  ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರು ಮಧ್ಯಮ ವರ್ಗದ ಈ ರೈತಾಪಿಗಳನ್ನು ‘ಸಾಮಾಜಿಕ ಮೈತ್ರಿಕೂಟ’ (ಮಜ್‌ಗರ್‌) ಹೆಸರಲ್ಲಿ ಸಂಘಟಿಸಿ ಮತ ಬ್ಯಾಂಕ್‌ ಮಾಡಿಕೊಂಡು ಅಧಿಕಾರದ ಸುಖ ಅನುಭವಿಸಿದವರು. ಈಚಿನ ವರ್ಷಗಳಲ್ಲಿ ‘ಮಜ್‌ಗರ್‌’ ಅಡಿಗಲ್ಲು ಕುಸಿದು ಚೆಲ್ಲಾಪಿಲ್ಲಿಯಾಗಿದೆ. ಆದರೆ, ಲೋಕಸಭಾ ಚುನಾವಣೆಯ ಹೊತ್ತಲ್ಲಿ ಚರಣ್‌ ಸಿಂಗ್ ಅವರಿಗೆ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿ ‘ಭಾರತ ರತ್ನ’ ನೀಡುವ ಮೂಲಕ ಜಾಟರ ಮತಗಳನ್ನು ಮತ್ತೆ ಸೆಳೆಯುವ ಮಹಾ ಪ್ರಯತ್ನವನ್ನು ಬಿಜೆಪಿ ಮಾಡಿದೆ.

ದಶಕದಿಂದ ವಿಪಕ್ಷಗಳ ಕೂಟದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮತ್ತೆ ಕೇಸರಿ ಪಡೆಯ ‘ದೋಸ್ತಿ’ ಕುದುರಿಸಿಕೊಂಡಿದೆ. ಚುನಾವಣಾ ಮೈತ್ರಿಯಿಂದ ಲೋಕದಳದಿಂದ ಮುಸ್ಲಿಮರು ದೂರವಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನೊಂದೆಡೆ, ರಜಪೂತರು ಚುನಾವಣೆಯ ಹೊತ್ತಿನಲ್ಲಿ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದಾರೆ. ಲೋಕಸಭಾ ಟಿಕೆಟ್‌ ಹಂಚಿಕೆಯಲ್ಲಿ ತಮ್ಮ ಸಮುದಾಯದವರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂಬುದು ಅವರ ಕೋಪಕ್ಕೆ ಕಾರಣ. ರಜಪೂತರು ಹಾಗೂ ಮುಸ್ಲಿಮರ ಮತ ಸೆಳೆಯಲು ‘ಇಂಡಿಯಾ’ ಮೈತ್ರಿಕೂಟ ಹಾಗೂ ಬಹುಜನ ಸಮಾಜ ಪಕ್ಷಗಳ (ಬಿಎಸ್‌ಪಿ) ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ. 

ಕಬ್ಬಿನ ಸೀಮೆಯಲ್ಲಿ ಯಾರ ಮತವೆಷ್ಟು? 

ಈ ಸೀಮೆಯ 26 ಜಿಲ್ಲೆಗಳಲ್ಲಿ ಮುಸ್ಲಿಮರ ಪ್ರಮಾಣ ಶೇ 23ರಿಂದ 27ರಷ್ಟಿದೆ. ಜಾಟರು ಶೇ 15ರಿಂದ 20ರಷ್ಟು ಇದ್ದಾರೆ. ರಜಪೂತರ ಸಂಖ್ಯೆ ಶೇ 10ರಿಂದ ಶೇ 13ರಷ್ಟಿದೆ. ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಕ್ಷೇತ್ರಗಳಲ್ಲಿ ಗೆಲುವಿನ ದಡ ಮುಟ್ಟಲು ಬಿಜೆಪಿ ಈ ಸಲವೂ ಧ್ರುವೀಕರಣ ರಾಜಕಾರಣದ ಮೊರೆ ಹೋಗಿದೆ. ಚುನಾವಣೆಯ ಹೊತ್ತಲ್ಲಿ ಮಾಡಿಕೊಂಡ ‘ಹೊಂದಾಣಿಕೆ’ಯಿಂದ ಜಾಟರ ಮುನಿಸು ಮರೆಯಾಗಿ ಪಕ್ಷಕ್ಕೆ ಉತ್ತಮ ಮತ ಫಸಲು ಸಿಗಲಿದೆ ಎಂಬ ಅಮಿತ ವಿಶ್ವಾಸ ಕಮಲ ಪಾಳಯದ ನಾಯಕರದ್ದು. ರಜಪೂತರ ಒಡಕು ಧ್ವನಿಯಿಂದ ಅಲ್ಪ ಹೊಡೆತ ಬೀಳಬಹುದು ಎಂಬ ಆತಂಕವೂ ಅವರಿಗೆ ಇದೆ. ಮೋದಿ–ಯೋಗಿ ಚರಿಷ್ಮಾ ಹಾಗೂ ರಾಮಮಂದಿರದ ಪ್ರಭಾವಳಿ ಮುಂದೆ ಇಂತಹ ಕೂಗೆಲ್ಲ ಗಂಗೆಯಲ್ಲಿ ತೇಲಿ ಹೋಗಲಿದೆ ಎಂದೂ ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸುತ್ತಾರೆ. 

ನಿರ್ಲಕ್ಷ್ಯದ ವಿರುದ್ಧ ರಜಪೂತರ ಮಹಾ ಪಂಚಾಯಿತಿ

ಪಶ್ಚಿಮ ಉತ್ತರ ಪ್ರದೇಶದಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ರಜಪೂತರಿಗೆ ಟಿಕೆಟ್‌ ನೀಡಲಾಗಿದೆ. ಗಾಜಿಯಾಬಾದ್‌ನಲ್ಲಿ ಎರಡು ಸಲ ಗೆದ್ದಿದ್ದ ಕೇಂದ್ರ ಸಚಿವ ವಿ.ಕೆ. ಸಿಂಗ್ ಅವರಿಗೆ ಈ ಸಲ ಟಿಕೆಟ್‌ ನಿರಾಕರಿಸಲಾಗಿದೆ. ಈ ಬೆಳವಣಿಗೆಗಳಿಂದ ರಜಪೂತರು ಕುಪಿತಗೊಂಡಿದ್ದಾರೆ. ಬಿಜೆಪಿ ತಮ್ಮನ್ನು ಕಡೆಗಣಿಸುತ್ತಿದೆ ಎಂಬುದು ಅವರ ಕೋಪಕ್ಕೆ ಕಾರಣ. ಕೇಸರಿ ಪಾಳಯದ ಕೆಲವು ಸಂಸದರ ಹಾಗೂ ಶಾಸಕರ ಹೇಳಿಕೆಗಳಿಂದ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂಬುದು ಅವರ ಆರೋಪ. ಬಿಜೆಪಿ ನಡೆಯನ್ನು ವಿರೋಧಿಸಿ ಸಹರಾನ್‌ಪುರ, ಮೀರಠ್‌, ಗಾಜಿಯಾಬಾದ್‌, ಮುಜಾಫರ್‌ನಗರ ಮತ್ತಿತರ ಕಡೆಗಳಲ್ಲಿ ಮಹಾ ಪಂಚಾಯಿತಿಗಳನ್ನು ನಡೆಸಿದ್ದಾರೆ. ಮುಜಾಫರ್‌ನಗರದ ಅಭ್ಯರ್ಥಿಯೂ ಆಗಿರುವ ಕೇಂದ್ರ ಸಚಿವ ಸಂಜೀವ್‌ ಬಲ್ಯಾನ್‌ ಅವರ ‍ಪ್ರಚಾರದ ರ‍್ಯಾಲಿಯ ಸಂದರ್ಭದಲ್ಲಿ ಠಾಕೂರರು ತಮ್ಮ ಕೋಪತಾಪ ಪ್ರದರ್ಶಿಸಿದ್ದಾರೆ. ಠಾಕೂರರ ಈ ನಡೆಯಿಂದಾಗಿ ಬಿಜೆಪಿಯ ಮತ ಬ್ಯಾಂಕ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ರಜಪೂತರ ಮತಗಳನ್ನು ಸೆಳೆಯಲು ಸಮಾಜವಾದಿ ಪಕ್ಷ ಕಸರತ್ತು ಆರಂಭಿಸಿದೆ. 

ಜಾಟರು ಮತ್ತೆ ಒಲಿಯುವರೇ? 

ಜಾಟರು ಮೊದಲಿನಿಂದಲೂ ಆರ್‌ಎಲ್‌ಡಿಯ ಸಾಂಪ್ರದಾಯಿಕ ಮತ ಬ್ಯಾಂಕ್‌. 2013ರ ಮುಜಾಫರ್‌ ನಗರದ ಕೋಮು ದಂಗೆಯ ಬಳಿಕ ಜಾಟರ ಒಲವು ಬಿಜೆಪಿ ಕಡೆಗೆ ವರ್ಗಾವಣೆಯಾಗಿತ್ತು. ಲೋಕದಳದ ವರಿಷ್ಠ ನಾಯಕರಾದ ಅಜಿತ್‌ ಸಿಂಗ್‌ ಹಾಗೂ ಜಯಂತ್‌ ಚೌಧರಿ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದರು. 2019ರಲ್ಲಿ ಕ್ಷೇತ್ರ ಬದಲಿಸಿದರೂ ಗೆಲುವಿನ ಸಿಹಿ ಸಿಗಲಿಲ್ಲ. ದಶಕದಲ್ಲಿ ಪಕ್ಷದ ಮತ ಪ್ರಮಾಣವೂ ಗಣನೀಯ ಕುಸಿತ ಕಂಡಿತ್ತು. ಈ ನಡುವೆ, ಎಸ್‌ಪಿ ಜತೆಗೆ ಆರ್‌ಎಲ್‌ಡಿ ಮೈತ್ರಿ ಮಾಡಿಕೊಂಡಿತ್ತು. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತಾಪಿಗಳು 2021ರಲ್ಲಿ ಆಂದೋಲನ ನಡೆಸಿದ್ದರು. ಈ ಹೋರಾಟದ ಮುಂಚೂಣಿಯಲ್ಲಿದ್ದವರು ಜಾಟರು. 2022ರ ಪಂಚ ರಾಜ್ಯಗಳ ಚುನಾವಣೆಗೆ ಮೊದಲು ಕಾಯಕ ಜೀವಿಗಳ ಹೋರಾಟಕ್ಕೆ ಕೇಂದ್ರ ಸರ್ಕಾರ ತಲೆಬಾಗಿತ್ತು. ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ರೈತರು ಲೋಕಸಭಾ ಚುನಾವಣೆಗೆ ಮುನ್ನ ಬೀದಿಗಿಳಿದಿದ್ದರು.

ಉತ್ತರ ಪ್ರದೇಶದಲ್ಲಿ ಜಾಟರ ಮತಗಳು ಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟದ ಪಾಲಾಗಬಹುದು ಎಂಬ ಆತಂಕ ಬಿಜೆಪಿ ವರಿಷ್ಠರನ್ನು ಕಾಡಿದ್ದಂತೂ ಸತ್ಯ. ಲೋಕಸಭಾ ಚುನಾವಣೆಗೆ ಮುನ್ನ ಚರಣ್‌ ಸಿಂಗ್ ಅವರಿಗೆ ‘ಭಾರತರತ್ನ’ ಘೋಷಣೆ ಮಾಡುವ ಮೂಲಕ ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ಬಿಜೆಪಿ ಏರುಪೇರು ಮಾಡಿತು. ಎನ್‌ಡಿಎ ಮೈತ್ರಿಕೂಟಕ್ಕೆ ಆರ್‌ಎಲ್‌ಡಿ ಸೇರಿಕೊಂಡಿತು. ‘ಬಿಜೆಪಿ ಜತೆಗೆ ಕೈಜೋಡಿಸಿದ್ದರಿಂದ ಮುಸ್ಲಿಮರು ಪಕ್ಷದಿಂದ ದೂರ ಸರಿಯಬಹುದು. ಆದರೆ, ಹಿಂದೂ ಮತಗಳ ಧ್ರುವೀಕರಣದಿಂದ ಪಕ್ಷಕ್ಕೆ ಅನುಕೂಲವಾಗಲಿದೆ’ ಎಂಬುದು ಆರ್‌ಎಲ್‌ಡಿ ನಾಯಕರ ಲೆಕ್ಕಾಚಾರ. ಜಾಟರ ಮತಗಳು ಗಣನೀಯ ಪ್ರಮಾಣದಲ್ಲಿ ಸಿಕ್ಕರೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಭಾರಿ ಅನುಕೂಲವಾಗಲಿದೆ ಎಂಬುದು ಬಿಜೆಪಿ ನಾಯಕರ ಆಲೋಚನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT