ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಅಲೆ ಇಲ್ಲದ ಹೊತ್ತಲ್ಲಿ ಕಾಂಗ್ರೆಸ್‌ ತೊಳಲಾಟ: ಟಿಕೆಟ್‌ ಹಂಚಿಕೆ ವಿಳಂಬ

Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

‘ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ನಮ್ಮ ರಾಷ್ಟ್ರೀಯ ನಾಯಕರ ಒಲವು ದಕ್ಷಿಣದ ಕಡೆಗೆ ಹೆಚ್ಚಾಗಿದೆ. ಬರೀ ದಕ್ಷಿಣ ಭಾರತವನ್ನು ನೆಚ್ಚಿಕೊಂಡರೆ ಸಾಲದು. ಹಿಂದಿ ಬಾಹುಳ್ಯದ ರಾಜ್ಯಗಳ ಕಡೆಗೆ ಗಮನ ಹರಿಸದಿದ್ದರೆ ಮೂರಂಕಿ ದಾಟಲು ಸಾಧ್ಯವೇ’ ಎಂಬುದು ಕಾಂಗ್ರೆಸ್‌ ನಾಯಕರೊಬ್ಬರ ಪ್ರಶ್ನೆ.

***

ನವದೆಹಲಿ: ‘2014ರಲ್ಲಿ ಸರ್ಕಾರದ ವಿರುದ್ಧದ ಅಲೆ ಇತ್ತು. 2019ರಲ್ಲಿ ಸರ್ಜಿಕಲ್‌ ಸ್ಟ್ರೈಕ್‌ನಿಂದಾಗಿ ಜನರಲ್ಲಿ ರಾಷ್ಟ್ರಾಭಿಮಾನ ಉಕ್ಕಿ ಹರಿದಿತ್ತು. ಈ ಸಲ ಅಂತಹ ಯಾವುದೇ ಅಲೆ ಇಲ್ಲ. ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಮತವನ್ನಾಗಿ ಪರಿವರ್ತಿಸುವ ರಣೋತ್ಸಾಹ ನಮ್ಮಲ್ಲಿ ಕಾಣುತ್ತಿಲ್ಲ. ಗೆಲ್ಲಲು ಅವಕಾಶ ಇರುವ ರಾಜ್ಯಗಳಲ್ಲೇ ಟಿಕೆಟ್‌ ಹಂಚಿಕೆ ಪ್ರಕ್ರಿಯೆಯನ್ನು ಇನ್ನೂ ಪೂರ್ಣಗೊಳಿಸಿಲ್ಲ’. 

–ಕಾಂಗ್ರೆಸ್‌ನ ಕೆಲವು ನಾಯಕರ ಬೇಸರದ ನುಡಿಗಳಿವು. ಮೊದಲ ಹಂತದ ಲೋಕಸಭಾ ಚುನಾವಣೆಗೆ ಒಂದು ವಾರವಷ್ಟೇ ಉಳಿದಿದೆ. ಬಿಜೆಪಿ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಖೈರುಗೊಳಿಸಿದೆ. ಕಾಂಗ್ರೆಸ್‌ ಈ ವರೆಗೆ 240 ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಅಂತಿಮಗೊಳಿಸಿದೆ. ದೆಹಲಿ, ಹರಿಯಾಣ, ಪಂಜಾಬ್‌, ಹಿಮಾಚಲ ಪ್ರದೇಶದಂತಹ ಹಲವು ರಾಜ್ಯಗಳಿಗೆ ಅಭ್ಯರ್ಥಿಗಳ ಹೆಸರನ್ನೇ ಅಂತಿಮಗೊಳಿಸಿಲ್ಲ. ‘ದೆಹಲಿ, ಹರಿಯಾಣ, ಜಾರ್ಖಂಡ್‌, ಹಿಮಾಚಲ ಪ್ರದೇಶದಲ್ಲಿ ಪಕ್ಷದ ಪರ ಅಲೆ ಇದೆ. ಆದರೆ, ಅಭ್ಯರ್ಥಿಗಳ ಆಯ್ಕೆಗೆ ಮೀನಮೇಷ ಎಣಿಸಲಾಗುತ್ತಿದೆ. ಈ ರಾಜ್ಯಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಒಂದು ಸುತ್ತಿನ ಪ್ರಚಾರ ಪೂರ್ಣಗೊಳಿಸಿದ್ದಾರೆ. ಕೊನೆ ಕ್ಷಣದಲ್ಲಿ ಟಿಕೆಟ್‌ ಘೋಷಿಸಿದರೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವೇ’ ಎಂದು ಪ್ರಶ್ನಿಸುತ್ತಾರೆ ಟಿಕೆಟ್‌ ಆಕಾಂಕ್ಷಿಗಳು. 

‘ಹರಿಯಾಣದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಗೆದ್ದುಕೊಂಡಿತ್ತು. ಈ ಸಲ ಪರಿಸ್ಥಿತಿ ಭಿನ್ನವಾಗಿದೆ. ಬಿಜೆಪಿ ವಿರುದ್ಧ ರೈತರು ಮುನಿಸಿಕೊಂಡಿದ್ದಾರೆ. ಜಾಟರ ಮತಗಳು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಬರುವ ಸಾಧ್ಯತೆ ಇದೆ. ಆರೇಳು ಕ್ಷೇತ್ರಗಳಲ್ಲಿ ಗೆಲ್ಲುವ ವಾತಾವರಣ ಇದೆ. ಆದರೆ, ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲು ಹೈಕಮಾಂಡ್‌ ಮನಸ್ಸು ಮಾಡುತ್ತಿಲ್ಲವಲ್ಲ’ ಎಂದು ಹರಿಯಾಣದ ನಾಯಕರೊಬ್ಬರು ಬೇಸರ ವ್ಯಕ್ತಪಡಿಸಿದರು. 

‘ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ನಮ್ಮ ರಾಷ್ಟ್ರೀಯ ನಾಯಕರ ಒಲವು ದಕ್ಷಿಣದ ಕಡೆಗೆ ಹೆಚ್ಚಾಗಿದೆ. ಬರೀ ದಕ್ಷಿಣ ಭಾರತವನ್ನು ನೆಚ್ಚಿಕೊಂಡರೆ ಸಾಲದು. ಹಿಂದಿ ಬಾಹುಳ್ಯದ ರಾಜ್ಯಗಳ ಕಡೆಗೆ ಗಮನ ಹರಿಸದಿದ್ದರೆ ಮೂರಂಕಿ ದಾಟಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು. 

‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬಂಧನದ ಬಳಿಕ ಕಾಂಗ್ರೆಸ್‌–ಎಎಪಿ ಮೈತ್ರಿ ಮತ್ತಷ್ಟು ಗಟ್ಟಿಯಾಗಿದೆ. ದೆಹಲಿಯಲ್ಲಿ ಎರಡೂ ಪಕ್ಷಗಳ ನಾಯಕರು ವೈಮನಸ್ಸು ಮರೆತು ಬಿಜೆಪಿ ವಿರುದ್ಧ ಹೋರಾಟಕ್ಕೆ ಅಣಿಯಾಗಿದ್ದಾರೆ. ಬಿಜೆಪಿ ಎಲ್ಲ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಎಎಪಿ ನಾಲ್ಕು ಕ್ಷೇತ್ರಗಳಿಗೆ ಹುರಿಯಾಳುಗಳ ಪಟ್ಟಿ ಪ್ರಕಟಿಸಿ ಎರಡು ತಿಂಗಳು ಮೇಲಾಯಿತು. ನಮ್ಮ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ನಿತ್ಯ ಎಐಸಿಸಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಇನ್ನೆಷ್ಟು ದಿನ ಅಲೆದಾಡಬೇಕೋ ಗೊತ್ತಿಲ್ಲ’ ಎಂದು ದೆಹಲಿಯ ನಾಯಕರೊಬ್ಬರು ಹೇಳಿದರು. 

‘ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಬಂಧನದ ಬಳಿಕ ಬುಡಕಟ್ಟು ಸಮುದಾಯದವರು ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ರಾಜ್ಯದಲ್ಲಿ ಈ ಸಮುದಾಯವರು ಶೇ 26ರಷ್ಟು ಇದ್ದಾರೆ. ಮುಸ್ಲಿಂ ಜನಸಂಖ್ಯೆ ಶೇ 18ರಷ್ಟು ಇದೆ. ಸೊರೇನ್‌ ಬಂಧನವನ್ನು ನಮ್ಮ ನಾಯಕರು ಗಟ್ಟಿ ಧ್ವನಿಯಲ್ಲಿ ಖಂಡಿಸಿಲ್ಲ. ಬಂಧನ ವಿರೋಧಿಸಿ ದೊಡ್ಡ ಮಟ್ಟದ ಹೋರಾಟ ನಡೆಸಿಲ್ಲ. ಈಗ ರ‍್ಯಾಲಿ ನಡೆಸಲು ಮುಂದಾಗಿದ್ದಾರೆ. ಹೀಗಾದರೆ, ಬಿಜೆಪಿ ವಿರುದ್ಧ ಹೋರಾಟ ಮಾಡಲು ಸಾಧ್ಯವೇ. ಅನುಕೂಲಕರ ವಾತಾವರಣವನ್ನು ಕೈಚೆಲ್ಲುವುದರಲ್ಲಿ ನಮ್ಮಷ್ಟು ನಿಷ್ಠಾತರು ಬೇರೆ ಯಾರೂ ಇಲ್ಲ’ ಎಂದು ಜಾರ್ಖಂಡ್‌ನ ನಾಯಕರೊಬ್ಬರು ಬೇಸರದಿಂದ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT