ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಪಶ್ಚಿಮ ಬಂಗಾಳ: ಹಲವೆಡೆ ಹಿಂಸಾಚಾರ

Published 19 ಏಪ್ರಿಲ್ 2024, 15:26 IST
Last Updated 19 ಏಪ್ರಿಲ್ 2024, 15:26 IST
ಅಕ್ಷರ ಗಾತ್ರ

ಕೂಚ್‌ಬಿಹಾರ್‌/ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನದ ವೇಳೆ, ಹಲವೆಡೆ ಹಿಂಸಾಚಾರ ನಡೆದಿದೆ.

ಕೂಚ್‌ ಬಿಹಾರ್‌ ಕ್ಷೇತ್ರದಲ್ಲಿ ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದೆ.

ಮತದಾನದ ವೇಳೆ ಹಿಂಸಾಚಾರ, ಮತದಾರರಿಗೆ ಬೆದರಿಕೆ ಒಡ್ಡಿರುವುದು ಹಾಗೂ ಏಜೆಂಟರ ಮೇಲೆ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿ ಟಿಎಂಸಿ ಹಾಗೂ ಬಿಜೆಪಿ ಕ್ರಮವಾಗಿ 80 ಹಾಗೂ 30 ದೂರುಗಳನ್ನು ದಾಖಲಿಸಿವೆ ಎಂದು ಎರಡೂ ಪಕ್ಷಗಳ ಮೂಲಗಳು ಹೇಳಿವೆ.

ಕೂಚ್‌ಬಿಹಾರ್‌ ಹಾಗೂ ಅಲಿಪುರ್ದೌರ್ ಕ್ಷೇತ್ರಗಳಲ್ಲಿ ಅಧಿಕ ಸಂಖ್ಯೆಯ ದೂರುಗಳು ದಾಖಲಾಗಿವೆ.

‘ಹಲವು ದೂರುಗಳನ್ನು ಸ್ವೀಕರಿಸಿದ್ದೇವೆ. ಆದರೆ, ಹಿಂಸಾಚಾರ ನಡೆದ ಬಗ್ಗೆ ಈವರೆಗೆ ನಮಗೆ ಯಾವುದೇ ವರದಿಗಳು ಬಂದಿಲ್ಲ’ ಎಂದು ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ನಿಸಿತ್‌ ಪ್ರಾಮಾಣಿಕ್ (ಕೂಚ್‌ ಬಿಹಾರ್‌ದಿಂದ ಸ್ಪರ್ಧೆ) ಸೇರಿದಂತೆ 37 ಅಭ್ಯರ್ಥಿಗಳು ಈ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ.

ಆರೋಪ–ಪ್ರತ್ಯಾರೋಪ: ‘ಕೂಚ್‌ಬಿಹಾರ್‌ ಕ್ಷೇತ್ರದ ಸೀತಲಕುಚಿಯಲ್ಲಿ ಪಕ್ಷದ ಏಜೆಂಟರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಮತದಾರರು ಕೆಲ ಮತಗಟ್ಟೆಗಳ ಪ್ರವೇಶಿಸುವುದನ್ನು ತಡೆದಿದ್ದಾರೆ ’ ಎಂದು ಟಿಎಂಸಿ ಆರೋಪಿಸಿದೆ.

ಈ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ, ಟಿಎಂಸಿ ಕಾರ್ಯಕರ್ತರೇ ಮತದಾರರನ್ನು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿದ್ದಾರೆ.

ಕೂಚ್‌ಬಿಹಾರ್‌ ಜಿಲ್ಲೆಯ ಮಾಥಾಭಾಂಗಾ ಎಂಬಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಿರುವ ದೃಶ್ಯಗಳು ಕೆಲ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿವೆ.

ಅಮಿತ್‌ ಶಾ ಪೋಸ್ಟ್‌: ಮೊದಲ ಹಂತದ ಮತದಾನದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್‌ ಮಾಡಿ,‘ಒಳನುಸುಳುವಿಕೆ ಹಾಗೂ ಭ್ರಷ್ಟಾಚಾರ ತಡೆಗಟ್ಟುವುದಕ್ಕಾಗಿ ಮತದಾರರು ತಮ್ಮ ಹಕ್ಕು ಚಲಾಯಿಸಬೇಕು’ ಎಂದು ಒತ್ತಾಯಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಟಿಎಂಸಿ ಮುಖಂಡ ಕುನಾಲ್‌ ಘೋಷ್‌, ‘ಅಕ್ರಮವಾಗಿ ದೇಶದೊಳಗೆ ನುಸುಳುವುದನ್ನು ತಡೆಗಟ್ಟುವುದು ಕೇಂದ್ರ ಗೃಹ ಸಚಿವರ ಕಚೇರಿ ಹಾಗೂ ಬಿಎಸ್‌ಎಫ್‌ನ ಕೆಲಸ’ ಎಂದು ಹೇಳಿದ್ದಾರೆ.

ಮತದಾನದ ಸುತ್ತ...

* ಅಕ್ರಮವಾಗಿ ಮತ ಚಲಾವಣೆ ಮಾಡುವುದಕ್ಕೆ ಕೇಂದ್ರೀಯ ಪಡೆಗಳು ಬಿಜೆಪಿ ಕಾರ್ಯಕರ್ತರಿಗೆ ನೆರವು ನೀಡುತ್ತಿದ್ದಾರೆ ಎಂದು ಆರೋಪಿಸಿ ಮಾಥಾಭಾಂಗಾದಲ್ಲಿ ಟಿಎಂಸಿ ಕಾರ್ಯಕರ್ತರಿಂದ ಪ್ರತಿಭಟನೆ

* ಟಿಎಂಸಿಯ ಬೇಥಗುರಿ ಬ್ಲಾಕ್‌ ಅಧ್ಯಕ್ಷ ಅನಂತ ಬರ್ಮನ್‌ ಅವರನ್ನು ಬಿಜೆಪಿ ಕಾರ್ಯಕರ್ತರು ಥಳಿಸಿದ ಆರೋಪ. ಅನಂತರ ಆಸ್ಪತ್ರೆಗೆ ದಾಖಲು

* ಕೂಚ್‌ಬಿಹಾರ್‌ ದಕ್ಷಿಣ ಭಾಗದಲ್ಲಿ ಪಕ್ಷದ ಕಾರ್ಯಕರ್ತರನ್ನು ಟಿಎಂಸಿ ಅಪಹರಿಸಿದೆ. ಏಜೆಂಟರು ಮತಗಟ್ಟೆ ಪ್ರವೇಶಿಸದಂತೆ ತಡೆದಿದೆ ಎಂದು ಬಿಜೆಪಿ ಆರೋಪ

ಚುನಾವಣಾ ಅಕ್ರಮ ನಡೆಸುವುದಕ್ಕಾಗಿ ಬಿಜೆಪಿಯು ಕೇಂದ್ರೀಯ ಪಡೆಗಳ ಜೊತೆ ಸೇರಿ ಭಯದ ವಾತಾವರಣ ನಿರ್ಮಿಸಿದೆ. ಟಿಎಂಸಿ ಕಾರ್ಯಕರ್ತರನ್ನು ಥಳಿಸಲಾಗಿದೆ

-ಉದಯನ್ ಗುಹಾ ಉತ್ತರ ಬಂಗಾಳ ಅಭಿವೃದ್ಧಿ ಸಚಿವ

ತಾನು ಸೋಲುವುದನ್ನು ಮನಗಂಡಿರುವ ಟಿಎಂಸಿ ಮತದಾರರನ್ನು ಬೆದರಿಸಲು ಯತ್ನಿಸಿದೆ. ಉದಯನ್‌ ಗುಹಾ ತಾವು ಹೋದಲ್ಲೆಲ್ಲಾ ಜನರನ್ನು ಪ್ರಚೋದಿಸಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಾರೆ

-ನಿಸಿತ್‌ ಪ್ರಾಮಾಣಿಕ್ ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT