ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈತ್ರಿಕೂಟ ಒಗ್ಗಟ್ಟಿಗಾಗಿ ಕಾಂಗ್ರೆಸ್ ಕಡಿಮೆ ಕ್ಷೇತ್ರದಲ್ಲಿ ಸ್ಪರ್ಧೆ: ಖರ್ಗೆ

Published 22 ಮೇ 2024, 5:43 IST
Last Updated 22 ಮೇ 2024, 5:43 IST
ಅಕ್ಷರ ಗಾತ್ರ

ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇದು 'ಇಂಡಿಯಾ' ಮೈತ್ರಿಕೂಟ ಒಗ್ಗಟ್ಟಿನಿಂದ ಸ್ಪರ್ಧಿಸಲು ಹಾಗೂ ಬಿಜೆಪಿಯನ್ನು ಸೋಲಿಸುವ ರಣನೀತಿಯ ಭಾಗವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಖರ್ಗೆ, 'ನಾವು ಪ್ರಜ್ಞಾಪೂರ್ವಕ ನಿರ್ಧಾರವನ್ನು ಕೈಗೊಂಡಿದ್ದೇವೆ. ದೇಶದ ವಿವಿಧಡೆಗಳಲ್ಲಿ ಪ್ರಬಲರಾಗಿರುವ ವಿರೋಧ ಪಕ್ಷಗಳ ಗೆಲುವು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ರಾಜಿ ಮಾಡಿಕೊಂಡಿದ್ದೇವೆ' ಎಂದು ಹೇಳಿದ್ದಾರೆ.

ಈ ಬಾರಿಯ ಲೋಕಸಭೆಯಲ್ಲಿ ಕಾಂಗ್ರೆಸ್ ಅತಿ ಕಡಿಮೆ 328 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, 200ಕ್ಕೂ ಹೆಚ್ಚು ಸ್ಥಾನಗಳನ್ನು 'ಇಂಡಿಯಾ' ಮೈತ್ರಿಕೂಟಕ್ಕೆ ಬಿಟ್ಟುಕೊಟ್ಟಿದೆ.

ಕೇರಳ, ಬಂಗಾಳ ಮತ್ತು ಪಂಜಾಬ್‌ನಂತಹ ರಾಜ್ಯಗಳಲ್ಲಿ ಮೈತ್ರಿಕೂಟದ ಪಕ್ಷಗಳ ನಡುವಣ ಸ್ಪರ್ಧೆಯ ಕುರಿತು ಪ್ರತಿಕ್ರಿಯಿಸಿದ ಖರ್ಗೆ, 'ಕೇಂದ್ರ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೆಲವು ರಾಜ್ಯಗಳಲ್ಲಿ ಎರಡು ಪ್ರಮುಖ ಪಕ್ಷಗಳು ಆಗಿರುವುದರಿಂದ ಪರಸ್ಪರ ಸ್ಪರ್ಧಿಸುತ್ತಿದ್ದೇವೆ. ಇಲ್ಲದಿದ್ದರೆ ಬಿಜೆಪಿಗೆ ಲಾಭವಾಗಲಿದೆ' ಎಂದು ಹೇಳಿದ್ದಾರೆ.

'ಪ್ರತಿ ರಾಜ್ಯವೂ ವಿಭಿನ್ನ ಮೈತ್ರಿಯನ್ನು ಹೊಂದಿದ್ದೇವೆ. ಆದರೆ ನಾವೆಲ್ಲರೂ ಮೋದಿಯ ಸಿದ್ದಾಂತದ ವಿರುದ್ಧ ಹೋರಾಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, 'ಚುನಾವಣೆಯಲ್ಲಿ ಸ್ಪರ್ಧಿಸದಿರುವ ನಿರ್ಧಾರವನ್ನು ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಇದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾಳ ನಿರ್ಧಾರ' ಎಂದು ಅವರು ಹೇಳಿದರು.

'ಪ್ರಿಯಾಂಕಾ ಪಕ್ಷದ ತಾರಾ ಪ್ರಚಾರಕಿ ಆಗಿದ್ದಾರೆ. ಅವರಿಬ್ಬರೂ (ರಾಹುಲ್ ಹಾಗೂ ಪ್ರಿಯಾಂಕಾ) ಪಕ್ಷದ ಆಸ್ತಿಗಳು. ನಮ್ಮೆಲ್ಲ ಆಸ್ತಿಗಳನ್ನು ಒಂದೇ ಕಡೆ ಹೂಡಿಕೆ ಮಾಡಿದರೆ ಹೇಗೆ? ಅವರಿಗೆ ಬೇಡಿಕೆಯಿದ್ದು, ಸಾವಿರಾರು ಮಂದಿ ಬರುತ್ತಾರೆ. ಅವರಿಗೂ ಸಹಾಯ ಮಾಡಬೇಕಾಗುತ್ತದೆ. ಸೋನಿಯಾ ಗಾಂಧಿ ಆರೋಗ್ಯ ಸ್ಥಿತಿ ಕೂಡ ಉತ್ತಮವಾಗಿಲ್ಲ. ಅವರ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ' ಎಂದು ಹೇಳಿದ್ದಾರೆ.

ವಯನಾಡ್ ಹಾಗೂ ರಾಯ್‌ಬರೇಲಿ ಎರಡೂ ಲೋಕಸಭೆ ಕ್ಷೇತಗಳಲ್ಲಿ ರಾಹುಲ್ ಗಾಂಧಿ ಗೆದ್ದರೆ ಯಾವುದನ್ನು ಉಳಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಖರ್ಗೆ, 'ಇದು ರಾಹುಲ್ ಅವರ ವೈಯಕ್ತಿಕ ನಿರ್ಧಾರವಾಗಿದ್ದು, ಅವರೇ ಅಂತಿಮ ನಿರ್ಣಯ ಕೈಗೊಳ್ಳುತ್ತಾರೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT