ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೇಠಿ, ರಾಯ್‌ಬರೇಲಿಯನ್ನು ಸಮಾನವಾಗಿ ನೋಡಿಕೊಳ್ಳುತ್ತೇನೆ: ರಾಹುಲ್ ಗಾಂಧಿ

Published 17 ಮೇ 2024, 10:23 IST
Last Updated 17 ಮೇ 2024, 10:23 IST
ಅಕ್ಷರ ಗಾತ್ರ

ಅಮೇಠಿ: ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಮೇಠಿ ಹಾಗೂ ರಾಯ್‌ಬರೇಲಿ ಕ್ಷೇತ್ರಗಳನ್ನು ಯಾವುದೇ ಭೇದಭಾವ ಇಲ್ಲದೇ ಸಮಾನವಾಗಿ ನೋಡಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡ್ ಜೊತೆಗೆ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದಲೂ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಈ ಪೈಕಿ ವಯನಾಡ್‌ನಲ್ಲಿ ಏಪ್ರಿಲ್ 26ರಂದು ಮತದಾನ ನಡೆದಿತ್ತು.

ಅಮೇಠಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಲ್. ಶರ್ಮಾ ಪರ ಪ್ರಚಾರ ನಡೆಸಿದ ರಾಹುಲ್, 'ಒಂದೊಮ್ಮೆ ಅಮೇಠಿಯ ಅಭಿವೃದ್ಧಿಗೆ ಹತ್ತು ರೂಪಾಯಿ ಖರ್ಚು ಮಾಡಿದರೆ, ಅಷ್ಟೇ ಮೊತ್ತವನ್ನು ರಾಯ್‌ಬರೇಲಿಗೂ ನೀಡಲಾಗುವುದು. ಇದು ನನ್ನ ವಾಗ್ದಾನ' ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸಹ ಉಪಸ್ಥಿತರಿದ್ದರು. ರಾಯ್‌ಬರೇಲಿಯಲ್ಲಿ ಇಂದೇ ಮಗದೊಂದು ಸಮಾವೇಶದಲ್ಲಿ ರಾಹುಲ್ ಹಾಗೂ ಅಖಿಲೇಶ್ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಹ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಈ ವೇಳೆ ಕಳೆದ 40 ವರ್ಷಗಳಲ್ಲಿ ಯಾವುದೇ ಸ್ವಾರ್ಥ ಭಾವನೆ ಇಲ್ಲದೆ ಅಮೇಠಿ ಜನರಿಗಾಗಿ ಸೇವೆ ಸಲ್ಲಿಸಿರುವುದಕ್ಕೆ ಶರ್ಮಾ ಅವರಿಗೆ ರಾಹುಲ್ ಗಾಂಧಿ ಧನ್ಯವಾದ ಸಲ್ಲಿಸಿದ್ದಾರೆ .

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಯುವಜನತೆಗೆ ಮಾಸಿಕ ₹8,500 ಹಾಗೂ ವಾರ್ಷಿಕ ₹1 ಲಕ್ಷ ನೀಡುವುದಾಗಿ ರಾಹುಲ್ ಪುನರುಚ್ಚರಿಸಿದ್ದಾರೆ. ಸೇನಾ ನೇಮಕಾತಿಯ 'ಅಗ್ನಿಪಥ' ಯೋಜನೆಯನ್ನು ರದ್ದುಗೊಳಿಸುವುದಾಗಿಯೂ ಅವರು ಹೇಳಿದ್ದಾರೆ.

ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆಲುವು ದಾಖಲಿಸಿದ್ದ ರಾಹುಲ್ ಗಾಂಧಿ, 2019ರಲ್ಲಿ ಸ್ಮೃತಿ ಇರಾನಿ ವಿರುದ್ಧ ಪರಾಭವಗೊಂಡಿದ್ದರು. ಆದರೆ ಈ ಬಾರಿ ಅಮೇಠಿ ಬಿಟ್ಟು ರಾಯ್‌ಬರೇಲಿಯಲ್ಲಿ ಸ್ಪರ್ಧಿಸುವ ತೀರ್ಮಾನ ತೆಗೆದುಕೊಂಡಿದ್ದರು. 2019ರಲ್ಲಿ ಕೇರಳದ ವಯನಾಡ್‌ ಕ್ಷೇತ್ರದಿಂದ ರಾಹುಲ್ ಸಂಸದರಾಗಿ ಆಯ್ಕೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT