ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂರನೇ ಬಾರಿ ಎನ್‌ಡಿಎ ಪಕ್ಷ ಗೆಲ್ಲಿಸಿದ್ದಕ್ಕೆ ಧನ್ಯವಾದ: ಪ್ರಧಾನಿ ಮೋದಿ

Published 4 ಜೂನ್ 2024, 14:49 IST
Last Updated 4 ಜೂನ್ 2024, 14:49 IST
ಅಕ್ಷರ ಗಾತ್ರ

ನವದೆಹಲಿ: ಸತತ ಮೂರನೇ ಬಾರಿ ಎನ್‌ಡಿಎ ಪಕ್ಷವನ್ನು ಗೆಲ್ಲಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ಜನರು ಸತತ ಮೂರನೇ ಬಾರಿಗೆ ಎನ್‌ಡಿಎ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದು ಭಾರತದ ಇತಿಹಾಸದಲ್ಲಿ ಒಂದು ಐತಿಹಾಸಿಕ ಸಾಧನೆಯಾಗಿದೆ. ಈ ಪ್ರೀತಿಗಾಗಿ ಜನತಾ ಜನಾರ್ದನ್‌ಗೆ ವಂದನೆಗಳು. ಜನರ ಆಶೋತ್ತರಗಳನ್ನು ಈಡೇರಿಸಲು ಕಳೆದ ದಶಕದಲ್ಲಿ ಮಾಡಿದ ಉತ್ತಮ ಕೆಲಸವನ್ನು ನಾವು ಮುಂದುವರಿಸುತ್ತೇವೆ ಎಂದು ಅವರಿಗೆ ಭರವಸೆ ನೀಡುತ್ತೇನೆ. ನಮ್ಮ ಎಲ್ಲಾ ಕಾರ್ಯಕರ್ತರ ಶ್ರಮಕ್ಕಾಗಿ ನಾನು ಅಭಿನಂದಿಸುತ್ತೇನೆ. ಅವರ ಅಸಾಧಾರಣ ಪ್ರಯತ್ನಗಳನ್ನು ವಿವರಿಸಲು ಪದಗಳು ಎಂದಿಗೂ ಸಾಲುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ. 

ಪ್ರಧಾನಿ ಮೋದಿ ಅವರು ವಾರಣಾಸಿ ಕ್ಷೇತ್ರದಿಂದ 1.5 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

ಟ್ರೆಂಡ್‌ಗಳ ಪ್ರಕಾರ ಎನ್‌ಡಿಎ ಗೆಲುವಿನತ್ತ ಹೆಜ್ಜೆ ಹಾಕಿದೆ. 290 ಸ್ಥಾನಗಳನ್ನು ಗೆದ್ದಿದೆ. ಪ್ರತಿಪಕ್ಷ ಇಂಡಿಯಾ ಒಕ್ಕೂಟ ಕೂಡ 234 ಸ್ಥಾನಗಳನ್ನು ಗೆಲ್ಲುವ ಮೂಲಕ ಒಂದು ರೀತಿಯ ಪುನರಾಗಮನವನ್ನು ಮಾಡಿದೆ. 2019 ಚುನಾವಣೆಗಿಂತ ಈ ಬಾರಿ ಸುಧಾರಣೆ ಕಂಡಿದೆ.

ಆಂಧ್ರ ಜನತೆಗೆ ಧನ್ಯವಾದ

‘ಎನ್‌ಡಿಎಗೆ ಆಂಧ್ರಪ್ರದೇಶ ಅಚ್ಚರಿಯ ಜನಾದೇಶ ನೀಡಿದೆ. ಆಶೀರ್ವಾದ ನೀಡಿದಕ್ಕೆ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ಚಂದ್ರಬಾಬು ನಾಯ್ಡು ಅವರಿಗೆ ಅಭಿನಂದನೆಗಳು.
ಪವನ್‌ಕಲ್ಯಾಣ್‌, ತೆಲುಗು ದೇಶಂ ಪಕ್ಷದ ಕಾರ್ಯಕರ್ತರು, ಜನಸೇನಾ ಪಕ್ಷ, ಆಂಧ್ರದ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ಆಂಧ್ರಪ್ರದೇಶದ ಸರ್ವತೋಮುಖ ಪ್ರಗತಿಗಾಗಿ ಕೆಲಸ ಮಾಡುತ್ತೇವೆ’ ಎಂದು ಪ್ರಧಾನಿ ಮೋದಿ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 ಒಡಿಶಾ ಜನತೆಗೆ ಆಭಾರಿ

‘ಧನ್ಯವಾದಗಳು ಒಡಿಶಾ. ಇದು ಉತ್ತಮ ಆಡಳಿತಕ್ಕೆ ಮತ್ತು ಒಡಿಶಾದ ವಿಶಿಷ್ಟ ಸಂಸ್ಕೃತಿಗೆ ಸಂದ ಜಯವಾಗಿದೆ. ಜನರ ಕನಸುಗಳನ್ನು ನನಸು ಮಾಡಿ ಒಡಿಶಾವನ್ನು ಪ್ರಗತಿಯ ಹೊಸ ಎತ್ತರಕ್ಕೆ ಬಿಜೆಪಿ ಕೊಂಡೊಯ್ಯಲಿದೆ. ನಮ್ಮ ಎಲ್ಲಾ ಕಾರ್ಯಕರ್ತರ ಪ್ರಯತ್ನಕ್ಕಾಗಿ ನಾನು ತುಂಬಾ ಹೆಮ್ಮೆಪಡುತ್ತೇನೆ’ ಎಂದು ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT