ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ ಅನುಪಸ್ಥಿತಿ ಕಾಡದಂತೆ ರಾಹುಲ್ ನಿಮ್ಮೊಂದಿಗೆ ಇರಲಿದ್ದಾರೆ: ಬಿಜೆಪಿ ಅಭ್ಯರ್ಥಿ

Published 6 ಜೂನ್ 2024, 6:06 IST
Last Updated 6 ಜೂನ್ 2024, 6:06 IST
ಅಕ್ಷರ ಗಾತ್ರ

ರಾಯ್‌ಬರೇಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪ್ರತಿ ವಾರಾಂತ್ಯದಲ್ಲಿ ರಾಯ್‌ಬರೇಲಿ ಜನರೊಂದಿಗೆ ಇರಲಿದ್ದಾರೆ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ದಿನೇಶ್‌ ಪ್ರತಾಪ್‌ ಸಿಂಗ್ ಹೇಳಿದ್ದಾರೆ.

ಉತ್ತರ ಪ್ರದೇಶ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಗಾಂಧಿ ಎದುರು ಪರಾಭವಗೊಂಡಿರುವ ದಿನೇಶ್‌, ಒಂದು ವರ್ಷದವರೆಗೆ ತಾವು ಶನಿವಾರ ಮತ್ತು ಭಾನುವಾರ ಭಾಗಶಃ ರಜೆಯಲ್ಲಿರುತ್ತೇನೆ ಎಂದು ತಿಳಿಸಿದ್ದಾರೆ.

ದಿನೇಶ್‌ ಅವರು ರಾಹುಲ್‌ ಎದುರು ಬರೋಬ್ಬರಿ 3,90,030 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ರಾಹುಲ್‌ 6,87,649 ಮತಗಳನ್ನು ಪಡೆದಿದ್ದರೆ, ದಿನೇಶ್‌ 2,97,619 ಮತಗಳನ್ನು ಗಿಟ್ಟಿಸಿದ್ದಾರೆ.

ಚುನಾವಣಾ ಫಲಿತಾಂಶದ ಕುರಿತು ಮಾತನಾಡಿರುವ ದಿನೇಶ್‌, '2019ರಿಂದ 2024ರ ವರೆಗೆ ನಾನು ಅವಿರತವಾಗಿ ನಿಮ್ಮ ಸೇವೆ ಮಾಡಿದ್ದೇನೆ. ಈ ಅವಧಿಯಲ್ಲಿ ನನ್ನ ಕುಟುಂಬದ ಜವಾಬ್ದಾರಿಗಳು ಹಿಂದೆ ಬಿದ್ದಿವೆ. ನನ್ನ ಮಗ, ಮಗಳು ಮದುವೆಗೆ ಬಂದಿದ್ದಾರೆ. ಆ ಜವಾಬ್ದಾರಿಗಳನ್ನೂ ನಿಭಾಯಿಸಬೇಕಿದೆ. ಸರ್ಕಾರ ಮತ್ತು ಪಕ್ಷದ ಸೇವೆ ಬಳಿಕ ಶನಿವಾರ ಮತ್ತು ಭಾನುವಾರ ಮಾತ್ರ ನಮಗೆ ರಜೆ ಸಿಗುತ್ತದೆ. ಆದ್ದರಿಂದ, ನನ್ನ ಕುಟುಂಬದ ಜವಾಬ್ದಾರಿಗಳನ್ನು ಪೂರೈಸುವುದಕ್ಕಾಗಿ ನಾನು ಒಂದು ವರ್ಷದ ಅವಧಿಗೆ ಶನಿವಾರ ಮತ್ತು ಭಾನುವಾರದಂದು ಮಾತ್ರ ಭಾಗಶಃ ರಜೆ ಕೇಳುತ್ತಿದ್ದೇನೆ. ಉಳಿದ ದಿನಗಳಲ್ಲಿ ಎಂದಿನಂತೆ ನಿಮ್ಮ ಸೇವೆ ಮಾಡುತ್ತೇನೆ. ನಿಮ್ಮ ಸುಖ–ದುಃಖದಲ್ಲಿ ಭಾಗಿಯಾಗುತ್ತೇನೆ' ಎಂದು ಹೇಳಿದ್ದಾರೆ.

ಈ ಅವಧಿಯಲ್ಲಿ ನನ್ನ ಅನುಪಸ್ಥಿತಿ ಕಾಡದಂತೆ ರಾಹುಲ್ ಗಾಂಧಿಯವರು ಪ್ರತಿ ಶನಿವಾರ, ಭಾನುವಾರ ನಿಮ್ಮೊಂದಿಗೆ ಇರಲಿದ್ದಾರೆ ಎಂದಿದ್ದಾರೆ.

'ಮದುವೆಯಿರಲಿ ಅಥವಾ ಇನ್ಯಾವುದೇ ವಿಚಾರವಿರಲಿ ನಿಮ್ಮ ಸುಖ–ದುಃಖಗಳಲ್ಲಿ ಅವರು (ರಾಹುಲ್‌ ಗಾಂಧಿ) ಜೊತೆಗಿರಲಿದ್ದಾರೆ' ಎಂದು ಹೇಳಿದ್ದಾರೆ.

ಇದೇವೇಳೆ ಅವರು ತಮಗೆ ಮತ ನೀಡಿದ ಜನರಿಗೂ ಧನ್ಯವಾದ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT