ಇಟಾನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 'ಭಾರತ ಜೋಡೊ ನ್ಯಾಯ ಯಾತ್ರೆ' ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಜನವರಿ 14ರಂದು ಮಣಿಪುರದಿಂದ ಆರಂಭವಾಗಿದ್ದ ಭಾರತ ಜೋಡೊ ನ್ಯಾಯ ಯಾತ್ರೆ ಮಾರ್ಚ್ 16ರಂದು ಮುಂಬೈಯಲ್ಲಿ ಮುಕ್ತಾಯಗೊಂಡಿತ್ತು. ಒಟ್ಟು 6,700 ಕಿ.ಮೀ. ದೂರವನ್ನು ಕ್ರಮಿಸಿತ್ತು.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ರಿಜಿಜು, ರಾಹುಲ್ ಗಾಂಧಿ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಹಾಗಾಗಿ ಯಾತ್ರೆ ಹೋದಲೆಲ್ಲ ಸೋಲು ಎದುರಾಗಲಿದೆ. ಕಾಂಗ್ರೆಸ್ ಎಲ್ಲ ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಒಂದು ವೇಳೆ ಪ್ರಚಾರದಿಂದ ಹೊರಗುಳಿಯುತ್ತಿದ್ದರೆ ಕಾಂಗ್ರೆಸ್ ಕೆಲವು ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಯಿತ್ತು ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಹೃದಯವು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ದ್ವೇಷದಿಂದ ತುಂಬಿಕೊಂಡಿದೆ. ಇದು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಮೋದಿ ಬಡ ಕುಟುಂಬದಿಂದ ಬಂದವರಾಗಿದ್ದರಿಂದ ಅವರನ್ನು ರಾಹುಲ್ ಗಾಂಧಿ ಇಷ್ಟಪಡುವುದಿಲ್ಲ. ಬಡ ಕುಟುಂಬದಿಂದ ಬಂದ ಸಾಮಾನ್ಯ ವ್ಯಕ್ತಿ ಪ್ರಧಾನಿಯಾಗಬಹುದು ಎಂಬ ಸತ್ಯವನ್ನು ರಾಹುಲ್ ಗಾಂಧಿ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಜನರ ಪ್ರೀತಿ, ಆಶೀರ್ವಾದ ಹಾಗೂ ಸಾಮರ್ಥ್ಯದಿಂದ ಮೋದಿ ಅವರು ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ದಾಖಲಿಸದ್ದು, ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಅವರು ಹೇಳಿದ್ದಾರೆ.