ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರದ್ ಬಣಕ್ಕೆ ‘ಕಹಳೆ ಊದುತ್ತಿರುವ ಮನುಷ್ಯ’ನ ಚಿಹ್ನೆ ಬಳಸಲು ‘ಸುಪ್ರೀಂ’ ಸಮ್ಮತಿ

Published 19 ಮಾರ್ಚ್ 2024, 11:44 IST
Last Updated 19 ಮಾರ್ಚ್ 2024, 11:44 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ‘ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ– ಶರದ್‌ಚಂದ್ರ ಪವಾರ್’ ಅನ್ನು ಹೆಸರಾಗಿ ಮತ್ತು ‘ಕಹಳೆ ಊದುತ್ತಿರುವ ಮನುಷ್ಯ’ನ ಗುರುತನ್ನು ಚಿಹ್ನೆಯಾಗಿ ಬಳಸಲು ಶರದ್‌ ಪವಾರ್‌ ಬಣಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಅನುಮತಿ ನೀಡಿದೆ.

ಚುನಾವಣಾ ಆಯೋಗವು ಅಜಿತ್‌ ಪವಾರ್‌ ಬಣಕ್ಕೆ ‘ಗಡಿಯಾರ’ ಚಿಹ್ನೆಯನ್ನು ನಿಗದಿಪಡಿಸಿ ಫೆಬ್ರುವರಿ 6ರಂದು ಆದೇಶಿಸಿತ್ತು. ಆ ಚಿಹ್ನೆಯನ್ನು ಅಜಿತ್‌ ಬಣ ಚುನಾವಣೆಗೆ ಬಳಸದಂತೆ ತಡೆ ನೀಡಬೇಕು ಎಂದು ಕೋರಿ ಶರದ್‌ ಪವಾರ್‌ ಬಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ ಮತ್ತು ಕೆ.ವಿ. ವಿಶ್ವನಾಥನ್‌ ಅವರ ಪೀಠವು ಈ ಕುರಿತು ಆದೇಶ ನೀಡಿತು.

ಶರದ್‌ ಪವಾರ್‌ ಅವರು ಸ್ಥಾಪಿಸಿದ್ದ ಎನ್‌ಸಿಪಿ ವಿಭಜನೆಗೂ ಮುನ್ನ ‘ಗಡಿಯಾರ’ವನ್ನು ಚುನಾವಣಾ ಚಿಹ್ನೆಯಾಗಿ ಹೊಂದಿತ್ತು. ಈಗ ಆ ಚಿಹ್ನೆಯು ಅಜಿತ್‌ ಬಣದಲ್ಲಿದೆ.

‘ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ– ಶರದ್‌ಚಂದ್ರ ಪವಾರ್’ ಮತ್ತು ಅದರ ಚಿಹ್ನೆ ‘ಕಹಳೆ ಊದುತ್ತಿರುವ ಮನುಷ್ಯ’ನನ್ನು ಗುರುತಿಸುವಂತೆ ಪೀಠವು ಚುನಾವಣಾ ಆಯೋಗ (ಇಸಿ) ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್‌ಇಸಿ) ಸೂಚಿಸಿದೆ.  ‘ಕಹಳೆ ಊದುತ್ತಿರುವ ಮನುಷ್ಯ’ ಚಿಹ್ನೆಯನ್ನು ಯಾವುದೇ ಪಕ್ಷ ಅಥವಾ ಪಕ್ಷೇತರ ಅಭ್ಯರ್ಥಿಗಳಿಗೆ ಹಂಚಬಾರದು ಎಂದೂ ಪೀಠ ಆಯೋಗಕ್ಕೆ ಸೂಚನೆ ನೀಡಿದೆ. ‌

‘ಗಡಿಯಾರ’ ಚಿಹ್ನೆಯ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಅದರ ಬಳಕೆಯು ನ್ಯಾಯಾಲಯದ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಇಂಗ್ಲಿಷ್‌, ಹಿಂದಿ ಮತ್ತು ಮರಾಠಿ ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸುವಂತೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ನೇತೃತ್ವದ ಬಣಕ್ಕೆ ಪೀಠ ತಿಳಿಸಿದೆ.

ಚುನಾವಣೆ ಕುರಿತು ಎಲ್ಲ ರೀತಿಯ ಜಾಹೀರಾತುಗಳು, ಬ್ಯಾನರ್‌ಗಳು, ಪೋಸ್ಟರ್‌ಗಳಂತಹ ಪ್ರಚಾರ ಸಾಮಗ್ರಿಗಳಲ್ಲಿ ಅಜಿತ್‌ ಬಣವು ಇದೇ ರೀತಿಯ ಘೋಷಣೆಗಳನ್ನು ಮಾಡಬೇಕು ಎಂದು ಪೀಠ ಹೇಳೀದೆ.

ಚುನಾವಣಾ ಆಯೋಗದ ಫೆಬ್ರುವರಿ 6ರ ಆದೇಶದ ವಿರುದ್ಧ ಶರದ್ ಪವಾರ್‌ ಬಣ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ ತನ್ನ ಪ್ರತಿಕ್ರಿಯೆ ಸಲ್ಲಿಸುವಂತೆ ಪೀಠವು ಅಜಿತ್‌ ಬಣಕ್ಕೆ ಸೂಚಿಸಿದೆ.

ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣಕ್ಕೆ ಚುನಾವಣಾ ಆಯೋಗವು ನೀಡಿರುವ ‘ಎನ್‌ಸಿಪಿ – ಶರದ್‌ಚಂದ್ರ ಪವಾರ್’ ಹೆಸರನ್ನು ಮುಂದಿನ ಆದೇಶದವರೆಗೆ ಬಳಸಬೇಕು ಎಂದು ಸುಪ್ರೀಂ ಕೋರ್ಟ್‌ ಫೆಬ್ರುವರಿ 18ರಂದು ನಿರ್ದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT