ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಪ್ರಮಾಣದ ವಿವರ: ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ನಕಾರ

ಮತದಾನದ ವಿವರವನ್ನು 48 ಗಂಟೆಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಲು ಎಡಿಆರ್ ಮನವಿ
Published 24 ಮೇ 2024, 15:37 IST
Last Updated 24 ಮೇ 2024, 15:37 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರತಿ ಮತಗಟ್ಟೆಯಲ್ಲಿ ಆಗಿರುವ ಮತದಾನ ಪ್ರಮಾಣದ ವಿವರವನ್ನು (ಫಾರ್ಮ್‌ 17ಸಿ) ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಬೇಕು ಎಂದು ಕೋರಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್) ಸಲ್ಲಿಸಿದ್ದ ಅರ್ಜಿಯನ್ನು ಈ ಹಂತದಲ್ಲಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಚುನಾವಣೆಯ ಸಂದರ್ಭದಲ್ಲಿ ತಾನು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತ ಮತ್ತು ಸತೀಶ್ ಚಂದ್ರ ಶರ್ಮ ಅವರು ಇದ್ದ ವಿಭಾಗೀಯ ಪೀಠವು, ಐದು ಹಂತಗಳ ಮತದಾನವು ಪೂರ್ಣಗೊಂಡಿರುವ ಕಾರಣ ಈಗ ತನಗೆ ಅಂತಹ ನಿರ್ದೇಶನ ನೀಡಲಾಗದು ಎಂದು ತಿಳಿಸಿದೆ. ಈ ಕೆಲಸಕ್ಕೆ ಮಾನವ ಸಂಪನ್ಮೂಲವನ್ನು ಒಗ್ಗೂಡಿಸುವುದು ಚುನಾವಣಾ ಆಯೋಗಕ್ಕೆ ಕಷ್ಟವಾಗುತ್ತದೆ ಎಂದು ಕೂಡ ಹೇಳಿದೆ.

ಸರ್ಕಾರೇತರ ಸಂಘಟನೆಯಾಗಿರುವ ಎಡಿಆರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದೂಡಿದ ರಜಾಕಾಲದ ಈ ಪೀಠವು, 2019ರಿಂದ ಬಾಕಿ ಇರುವ ಇನ್ನೊಂದು ಅರ್ಜಿಯಲ್ಲಿ ಇರುವ ಕೋರಿಕೆಗಳನ್ನೇ ಇದೂ ಹೊಂದಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಿದೆ. ಅರ್ಜಿಯನ್ನು ಬಲವಾಗಿ ವಿರೋಧಿಸಿದ್ದ ಚುನಾವಣಾ ಆಯೋಗವು, ಅನುಮಾನ ಹಾಗೂ ಆತಂಕಗಳನ್ನು ಆಧರಿಸಿ ಈ ಅರ್ಜಿ ಸಿದ್ಧಪಡಿಸಲಾಗಿದೆ ಎಂದು ಹೇಳಿತ್ತು.

‘ಅರ್ಜಿಯಲ್ಲಿನ ವಿಷಯಗಳ ಬಗ್ಗೆ ನಾವು ಏನನ್ನೂ ಹೇಳುವುದಿಲ್ಲ. ಆದರೆ ಈಗ ನಿಮ್ಮ ವಾದ ಬಲವಾಗಿಲ್ಲ’ ಎಂದು ಪೀಠವು ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಹೇಳಿತು. ‘ಮಧ್ಯಂತರ ಅರ್ಜಿಯನ್ನು ನಾವು ಬಾಕಿ ಇರಿಸುತ್ತೇವೆ. ಇದನ್ನು ಸೂಕ್ತ ಸಮಯದಲ್ಲಿ ಪರಿಶೀಲಿಸುತ್ತೇವೆ’ ಎಂದು ಅದು ಹೇಳಿತು.

ಚುನಾವಣಾ ಪ್ರಕ್ರಿಯೆಯು ಈಗಾಗಲೇ ಚಾಲ್ತಿಯಲ್ಲಿ ಇರುವಾಗ ಮಧ್ಯಂತರ ಅರ್ಜಿಯನ್ನು ಸಲ್ಲಿಸಲಾಗಿದೆ. ಇದು ಪ್ರಕ್ರಿಯೆಯನ್ನು ದುರುಪಯೋಗ ಮಾಡಿಕೊಳ್ಳುವುದಕ್ಕೆ ಒಂದು ಉತ್ತಮ ಉದಾಹರಣೆ ಎಂದು ಆಯೋಗದ ಪರ ವಕೀಲ ಮಣಿಂದರ್ ಸಿಂಗ್ ವಾದಿಸಿದರು.

ಚುನಾವಣಾ ಪ್ರಕ್ರಿಯೆಯ ಕುರಿತಾಗಿ ತಪ್ಪು ಆರೋಪಗಳನ್ನು ಆಧರಿಸಿ ಈ ಅರ್ಜಿ ಸಿದ್ಧಪಡಿಸಲಾಗಿದೆ. ಅರ್ಜಿದಾರರಿಗೆ ಭಾರಿ ಮೊತ್ತದ ದಂಡ ವಿಧಿಸಬೇಕು ಎಂದು ಸಿಂಗ್ ಕೋರಿದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರದಲ್ಲಿ ನಿಯಮಗಳು ಹಾಗೂ ಪ್ರಕ್ರಿಯೆಗಳ ಪಾಲನೆಯನ್ನು ತೀರಾ ಕಟ್ಟುನಿಟ್ಟು ಮಾಡುವಂತಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠವು, ‘ಪಿಐಎಲ್‌ಗಳು ಇಂದು ಪ್ರಚಾರದ, ಖಾಸಗಿ ಆಯಾಮ ಹೊಂದಿರುವ, ಹಣದ ಹಿತಾಸಕ್ತಿ ಇರುವ ಅರ್ಜಿಗಳಾಗಿವೆ’ ಎಂದು ಖೇದ ವ್ಯಕ್ತಪಡಿಸಿತು. 

ಚುನಾವಣಾ ದಿನಾಂಕವನ್ನು ಘೋಷಿಸಿದ ದಿನವಾದ ಮಾರ್ಚ್‌ 16ಕ್ಕಿಂತ ಮೊದಲು ಕೋರ್ಟ್‌ಗೆ ಬರದೆ ಇದ್ದುದು ಏಕೆ ಎಂದು ಪೀಠವು ಅರ್ಜಿದಾರರನ್ನು ಪ್ರಶ್ನಿಸಿತು. ಚುನಾವಣಾ ಆಯೋಗದಿಂದ ಮತದಾನ ಪ್ರಮಾಣದ ಕುರಿತು ಮಾಹಿತಿ ಪ್ರಕಟವಾದ ನಂತರವಷ್ಟೇ ಈ ಮಧ್ಯಂತರ ಅರ್ಜಿ ಸಲ್ಲಿಸಲು ಸಾಧ್ಯವಿತ್ತು ಎಂದು ಅರ್ಜಿದಾರರ ಪರ ವಕೀಲ ದುಷ್ಯಂತ್ ದವೆ ತಿಳಿಸಿದರು.

ಮೊದಲ ಎರಡು ಹಂತಗಳ ಮತದಾನದ ಪ್ರಮಾಣದ ವಿವರವನ್ನು ಆಯೋಗವೇ ಪರಿಷ್ಕರಿಸಿದೆ ಎಂದು ಅವರು ಪೀಠದ ಗಮನಕ್ಕೆ ತಂದರು. ಮೊದಲು ಪ್ರಕಟಿಸುವ ಮತದಾನದ ಪ್ರಮಾಣದ ವಿವರವು ತಾತ್ಕಾಲಿಕ ಎಂದು ಸಿಂಗ್ ಸ್ಪಷ್ಟಪಡಿಸಿದರು.‌

‘ವ್ಯಾಪಕ ಅಪನಂಬಿಕೆ ಸೃಷ್ಟಿಯಾಗಬಹುದು’

ಮೇ 22ರಂದು ಕೋರ್ಟ್‌ಗೆ ವಿವರಣೆಯೊಂದನ್ನು ಸಲ್ಲಿಸಿದ್ದ ಆಯೋಗವು ‘ಫಾರ್ಮ್‌ 17ಸಿ’ಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದರಿಂದ ಕಿಡಿಗೇಡಿತನದ ಕೃತ್ಯಗಳಿಗೆ ಅವಕಾಶ ಕಲ್ಪಿಸಿದಂತಾಗಬಹುದು, ಚಿತ್ರಗಳನ್ನು ತಿರುಚುವ ಕೆಲಸ ಆಗಬಹುದು, ಅದರಿಂದ ವ್ಯಾಪಕವಾಗಿ ಅಪನಂಬಿಕೆ ಉಂಟಾಗಬಹುದು’ ಎಂದು ಹೇಳಿತ್ತು.

ಮೊದಲ ಎರಡು ಹಂತಗಳ ಮತದಾನದ ‍ಪ್ರಮಾಣವನ್ನು ಶೇ 5ರಿಂದ ಶೇ 6ರಷ್ಟು ಹೆಚ್ಚಿಸಲಾಗಿದೆ ಎಂಬುದು ತಪ್ಪುದಾರಿಗೆ ಎಳೆಯುವ ಹಾಗೂ ಆಧಾರರಹಿತವಾದ ಆರೋಪ ಎಂದು ಕೂಡ ಆಯೋಗ ಹೇಳಿತ್ತು.

(ಚುನಾವಣಾ) ಪ್ರಕ್ರಿಯೆ ನಡೆಯುತ್ತಿರುವಾಗ ಇಂತಹ ಪಟ್ಟಭದ್ರ ಹಿತಾಸಕ್ತಿಗಳಿಗೆ ಪ್ರಶ್ನೆಗಳನ್ನು ಎತ್ತಲು ಕೋರ್ಟ್‌ ಅನುಮತಿ ನೀಡುತ್ತಲೇಹೋಯಿತು. ಇಂತಹ ಅರ್ಜಿಗಳನ್ನು ಪರಿಗಣಿಸುವುದಕ್ಕೆ ಸಂಪೂರ್ಣ ನಿರ್ಬಂಧ ಇದೆ.

ಮಣಿಂದರ್ ಸಿಂಗ್, ಚುನಾವಣಾ ಆಯೋಗದ ಪರ ವಕೀಲ (ಕೋರ್ಟ್‌ನಲ್ಲಿ ಆಡಿದ ಮಾತು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT