ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಹೆಸರಲ್ಲಿ ರಾಜ್ಯ ದಿವಾಳಿ; ಆರ್ಥಿಕ ಕುಸಿತ: ಬೊಮ್ಮಾಯಿ ವಾಗ್ದಾಳಿ

Published 21 ಏಪ್ರಿಲ್ 2024, 11:30 IST
Last Updated 21 ಏಪ್ರಿಲ್ 2024, 11:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಪೂರ್ವ ಸಿದ್ದತೆ ಇಲ್ಲದ ಗ್ಯಾರಂಟಿ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡಿದ್ದು, ಆರ್ಥಿಕ ವಿಚಾರದಲ್ಲಿ ಹತಾಶರಾಗಿ ತೀರ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕಳೆದ ಹತ್ತು ವರ್ಷದ ಎನ್ ಡಿ ಎ ಆಡಳಿತದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ವಿಪತ್ತು ನಿರ್ವಹಣಾ ಮಾನದಂಡ ಬದಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆ ಪಾಲಿನ‌ ಹಣ ಹೆಚ್ಚಿಗೆ ಬಂದಿದೆ. ಇದೆಲ್ಲವನ್ನೂ ರಾಜ್ಯ ಸರ್ಕಾರ ಮರೆಮಾಚಿದೆ. ತನ್ನ ತಪ್ಪು ಮುಚ್ಚಿಕೊಳ್ಳಲು ತೀರ ತಳಮಟ್ಟಕ್ಕೆ ಹೋಗಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಹಣಕಾಸು ವಿಚಾರದಲ್ಲಿ ಹತಾಶರಾಗಿ ಕಾಂಗ್ರೆಸ್ ನಾಯಕರು ತೀರಾ ಕೆಳಮಟ್ಟದ ಭಾಷೆ ಬಳಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ‌ನವರು ಕೇವಲ ಆರೋಪ ಮಾಡುವ ಬದಲು ಯುಪಿಎ ಅವಧಿ ಹಾಗೂ ಎನ್ ಡಿಎ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ಹಾಗೂ ತೆರಿಗೆ ಪಾಲಿನ‌ ಹಣ ಬಂದಿದೆ ಎಂದು ಹೋಲಿಕೆ ಮಾಡಿ ನೋಡಲಿ. 2004-2014 ರ ಯುಪಿಎ ಅವಧಿಯಲ್ಲಿ ₹81,795 ಕೋಟಿ ತೆರಿಗೆ ಪಾಲಿನ ಹಣ ಬಂದಿದೆ. 2014-2024 ರ ಎನ್ ಡಿಎ ಅವಧಿಯಲ್ಲಿ₹2,82,791 ಕೋಟಿ  ರಾಜ್ಯಕ್ಕೆ ಬಂದಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ 4 ಪೈಸೆ ರಾಜ್ಯಕ್ಕೆ ಬರುತ್ತಿತ್ತು ಈಗ ₹13 ಸಿಗುತ್ತಿದೆ ಎಂದು ಬೊಬ್ಬೆ ಹೊಡಿತ್ತಿದ್ದಾರೆ 2004-2014 ರ ಯುಪಿಎ ಅವಧಿಯಲ್ಲಿ ಕೇಂದ್ರದ ಅನುದಾನ ₹60,799 ಕೋಟಿ ಬಂದಿದೆ. 2014-24 ರ ವರೆಗಿನ ಪ್ರಧಾನ ನರೇಂದ್ರ ಮೋದಿ ಅವಧಿಯಲ್ಲಿ ₹2,33,93 ಕೋಟಿ ಅನುದಾನ ಬಂದಿದೆ.

ರಾಜ್ಯಕ್ಕೆ ಕೇಂದ್ರ ಅಭಿವೃದ್ದಿ ಕಾರ್ಯ ಕೈಗೊಳ್ಳಲು ಕರ್ನಾಟಕಕ್ಕೆ‌ ₹6012 ಕೋಟಿ  ಬಡ್ಡಿ ರಹಿತ ಸಾಲ‌ ನೀಡಿದ್ದು, 50 ವರ್ಷಗಳ ಬಳಿಕ ಸಾಲ ಮರಳಿಸಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಎಲ್ಲ ರಾಜ್ಯ ಸರ್ಕಾರಗಳಿಗೆ ಶೇ 27 ತೆರಿಗೆ ಪಾಲು ಬರುತ್ತಿತ್ತು. ಅದನ್ನು ಯುಪಿಎ ಅವಧಿಯಲ್ಲಿ ಶೇ 37 ಹೆಚ್ಚಿಸಬೇಕೆಂದು ಎಲ್ಲ ರಾಜ್ಯಗಳು ಒತ್ತಾಯ ಮಾಡಿದ್ದವು. ಕಾಂಗ್ರೆಸ್ ಸರ್ಕಾರ ಹೆಚ್ಚಳ ಮಾಡಲಿಲ್ಲ. ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಅದನ್ನು ಶೇ 40ಕ್ಕೆ ಏರಿಸಿದ್ದಾರೆ ಎಂದು ಹೇಳಿದರು.

ಗ್ಯಾರಂಟಿಗಾಗಿ ದಿವಾಳಿ...

ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿ ಆಗಿದೆ ಹಣಕಾಸು ವೆಚ್ಚದ ಮೇಲೆ‌ ಹಿಡಿತ ಇಲ್ಲ ಗ್ಯಾರಂಟಿ ಯೋಜನೆಗಳಿಗೆ ₹54 ಸಾವಿರ ಕೋಟಿ ವೆಚ್ಚ ಆಗತ್ತದೆ. ಅದಕ್ಕೆ ಬೇಕಾದ ಸಿದ್ದತೆ ಮಾಡಿಕೊಂಡಿಲ್ಲ. ಜನರ ತೆರಿಗೆ ಹಣವನ್ನು ಗ್ಯಾರಂಟಿ ಗಳಿಗೆ ವೆಚ್ಚ ಮಾಡುತ್ತಿದ್ದಾರೆ. ಇದರಿಂದ ಆರ್ಥಿಕ ಸಂಕಷ್ಟ ಉಂಟಾಗಿದೆ. ಅದನ್ನು ಮರೆ ಮಾಚಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಬರ ಬಂದಿದೆ. ಇದುವರೆಗೂ ರಾಜ್ಯ ಸರ್ಕಾರದಿಂದ ಬರ ಪರಿಹಾರ ಕೊಟ್ಟಿಲ್ಲ ಕೇಂದ್ರದ ಅನುದಾನದಲ್ಲೇ ರೈತರಿಗೆ ₹2 ಸಾವಿರ ಪರಿಹಾರ ಹಾಕಿದ್ದಾರೆ. ಅದನ್ನೂ ಕೆಲವರಿಗೆ ಕೊಟ್ಟಿದ್ದಾರೆ. ಇನ್ನೂ ಕೆಲವರಿಗೆ ಕೊಟ್ಟಿಲ್ಲ. ರಾಜ್ಯ ಸರ್ಕಾರ ತನ್ನ ಕರ್ತವ್ಯ ಮಾಡಲಿ

ಕೇಂದ್ರದ ಕಡೆ ನೋಡುವುದಲ್ಲ. ಜನ ಸಂಕಷ್ಟದಲ್ಲಿದ್ದಾಗ ಸರ್ಕಾರ ಹೇಗೆ ನಡೆದುಕೊಳ್ಳುತ್ತದೆ ಎನ್ನುವುದು ಮುಖ್ಯ. ರಾಜ್ಯ ಸರ್ಕಾರ ಇದರಲ್ಲಿ ವಿಫಲವಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಜನರಿಗೆ ಚೊಂಬು ಕೊಟ್ಟಿದೆ...

ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಜೊತೆಗೆ ರಾಜ್ಯ ಸರ್ಕಾರವೂ ರೈತರಿಗೆ ₹4,000 ನೀಡುತ್ತಿತ್ತು. ರಾಜ್ಯ ಸರ್ಕಾರ ಅದನ್ನು ಕಡಿತ ಮಾಡಿ, ರೈತರಿಗೆ ಚೊಂಬು ಕೊಟ್ಟಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ 13 ಲಕ್ಷ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡಲಾಗಿತ್ತು, ಅದನ್ನು ನಿಲ್ಲಿಸಿದ್ದಾರೆ. ದಲಿತ ಸಮುದಾಯಕ್ಕೆ ಮೀಸಲಿಟ್ಟಿದ್ದ ಎಸ್ಸಿಪಿ ಟಿಎಸ್ಪಿಯ ₹11,380 ಕೋಟಿ ಎಸ್ಸಿಎಸ್ಟಿ ಅನುದಾನವನ್ನು ಗ್ಯಾರಂಟಿಗೆ ಬಳಕೆ ಮಾಡಿಕೊಂಡಿದ್ದಾರೆ. ಇದೆಲ್ಲ ಮಾಡಿ ರಾಜ್ಯದ ಜನತೆಗೆ ಚೊಂಬು ಕೊಟ್ಟಿದ್ದು ಕಾಂಗ್ರೆಸ್‌ ಸರ್ಕಾರ ಎಂದು ಆರೋಪಿಸಿದರು.

ಮೋದಿಯವರದು ಅಕ್ಷಯಪಾತ್ರೆ...

ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ ಶಾಶ್ವತ ಯೋಜನೆಗಳನ್ನು ಕೊಟ್ಟಿದ್ದಾರೆ. ಈ ಮೂಲಕ ಮೋದಿಯವರು ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ. 6 ಲಕ್ಷ ಬೀದಿಬದಿ ವ್ಯಾಪಾರಸ್ಥರಿಗೆ ಅನುದಾನ ನೀಡಿದ್ದಾರೆ. 9 ಲಕ್ಷ ಮನೆಗಳಿಗೆ ಉಜ್ವಲ ಗ್ಯಾಸ್ ಸಂಪರ್ಕ ಕಲ್ಪಿಸಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 4 ಲಕ್ಷ ಮನೆ, 12 ಲಕ್ಷ ಶೌಚಾಲಯ, ಕೊವಿಡ್ ಸಂದರ್ಭದಲ್ಲಿ ಹತ್ತು ಕೆಜಿ ಉಚಿತ ಅಕ್ಕಿ ಕೊಟ್ಟಿದ್ದು ನರೇಂದ್ರ ಮೋದಿ, ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದು ನರೇಂದ್ರ ಮೋದಿ. ಕಾಂಗ್ರೆಸ್ ಒಂದು ಕಾಳು ಅಕ್ಕಿ ಕೊಟ್ಟಿಲ್ಲ, ಇದನ್ನು ಕಾಂಗ್ರೆಸ್ ಚೊಂಬಿಗೆ ಸೇರಿಸಿಕೊಳ್ಳಲಿ ಎಂದರು.

ಕಾಂಗ್ರೆಸ್ ನವರಿಗೆ ಮೋದಿ ಶನಿನೇ...

ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಆಡಿರುವ ಮಾತಿಗೆ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ, ರಮೇಶ್ ಕುಮಾರ್ ಅವರು ಎಷ್ಟು ಸತ್ಯವಂತರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೋದಿಯವರು ರಮೇಶ್ ಕುಮಾರ್ ಮತ್ತು ಕಾಂಗ್ರೆಸ್ ಗೆ ಶನಿಯಾಗಿದ್ದಾರೆ. ಯಾರು ಭಷ್ಟಾಚಾರ ಮಾಡುತ್ತಾರೆ, ಯಾರು ದೇಶವಿರೊಧಿ ಚಟುವಟಿಕೆ ಮಾಡುತ್ತಾರೆ. ಯಾರು ಜನವಿರೋಧಿ ಕೆಲಸ ಮಾಡುತ್ತಾರೆ ಅವರಿಗೆ ಮೋದಿಯವರು ಶನಿಯಾಗಿ ಕಾಡುತ್ತಾರೆ. ದೇಶಭಕ್ತರಿಗೆ, ಯುವಕರಿಗೆ, ಹೆಣ್ಣುಮಕ್ಕಳಿಗೆ ಅವರು ವರವನ್ನು ಕೊಡುತ್ತಾರೆ. ರಮೇಶ್ ಕುಮಾರ್ ಅವರಿಗೆ ಅದರ ಒಳ ಮರ್ಮ ಗೊತ್ತಿದೆ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT