ಬೆಂಗಳೂರು: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಹಿರಂಗ ಚರ್ಚೆಯ ಆಹ್ವಾನವನ್ನು ಸ್ವೀಕರಿಸಿದ್ದ ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದು, ಪಕ್ಷದ ಯುವ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಅಭಿನವ ಪ್ರಕಾಶ್ ಅವರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ತಮ್ಮ ದೃಷ್ಟಿಕೋನವನ್ನು ಸಾಮಾನ್ಯ ವೇದಿಕೆಯಲ್ಲಿ ಪ್ರಸ್ತುತಪಡಿಸಲು ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಕೆಲ ಗುಂಪು ಒತ್ತಾಯಿಸಿದ್ದವು.
ಈ ಆಹ್ವಾನವನ್ನು ಸ್ವೀಕರಿಸಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರೂ ಈ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಳ್ಳಲಿ ಎಂದು ಸವಾಲೆಸೆದಿದ್ದರು.
Dear Rahul Gandhi Ji,
— Tejasvi Surya (ಮೋದಿಯ ಪರಿವಾರ) (@Tejasvi_Surya) May 13, 2024
BJYM has deputed Sri @Abhina_Prakash, our VP, to debate with you.
He is a young and educated leader from the Pasi (SC) community, who are around 30%, in Rae Baraeli.
It will be an enriching debate between a political scion and a common youngster who… pic.twitter.com/8FarSmqrQe
‘ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಯ ದೃಷ್ಟಿಕೋನ ಮತ್ತು ನೀತಿಗಳ ಕುರಿತು ಬಹಿರಂಗ ಹಾಗೂ ಕ್ರಿಯಾತ್ಮಕ ಚರ್ಚೆಯ ಅಗತ್ಯವನ್ನು ಸ್ವಾಗತಿಸುತ್ತದೆ. ಇದರಿಂದ ದೇಶದ ಭವಿಷ್ಯವನ್ನು ರೂಪಿಸಲು ಹೆಚ್ಚು ಅನುಕೂಲವಾಗಲಿದೆ’ ಎಂದಿದ್ದಾರೆ.
‘ಈ ಕಾರ್ಯಕ್ಕೆ ಪಕ್ಷದ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಅಭಿನವ ಪ್ರಕಾಶ್ ಅವರನ್ನು ನಿಯೋಜಿಸಲಾಗುತ್ತಿದೆ. ಉತ್ತರ ಪ್ರದೇಶ ಮೂಲದವರಾದ ಇವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ರಾಯಬರೇಲಿ ಕ್ಷೇತ್ರದ ಶೇ 30ರಷ್ಟು ಜನಸಂಖ್ಯೆ ಹೊಂದಿರುವ ಪಾಸಿ ಸಮುದಾಯಕ್ಕೆ ಇವರು ಸೇರಿದ್ದಾರೆ. ಈ ಕ್ಷೇತ್ರವನ್ನು ನಿಮ್ಮ ಕುಟುಂಬ ಬಹಳ ದೀರ್ಘ ಕಾಲದವರೆಗೆ ಪ್ರತಿನಿಧಿಸಿದೆ’ ಎಂದಿದ್ದಾರೆ.
‘ಅಭಿನವ ಅವರು ಪಕ್ಷದ ಕ್ರಿಯಾಶೀಲ ಕಾರ್ಯಕರ್ತ ಕೂಡಾ ಹೌದು. ಜತೆಗೆ ಸರ್ಕಾರ ಜಾರಿಗೆ ತಂದಿರುವ ನೀತಿಗಳ ಕುರಿತು ಉತ್ತಮ ಜ್ಞಾನ ಹೊಂದಿದವರಾಗಿದ್ದಾರೆ. ಪಕ್ಷದ ವಕ್ತಾರರೂ ಆಗಿದ್ದಾರೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಇವರು, ಅರ್ಥಶಾಸ್ತ್ರ ವಿಷಯದ ಪ್ರಾಧ್ಯಾಪಕರಾಗಿದ್ದಾರೆ’ ಎಂದು ವಿವರಿಸಿದ್ದಾರೆ.
‘ಈ ಪಂಥಾಹ್ವಾನ ಸ್ವೀಕರಿಸಿದ್ದಕ್ಕೆ ನಿಮಗೂ ಧನ್ಯವಾದಗಳು. ಈ ದೇಶವನ್ನು ಹಲವು ವರ್ಷಗಳ ಕಾಲ ಆಳಿದ ವಂಶಾಡಳಿತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಅಭಿವೃದ್ಧಿಕಾರ್ಯಗಳ ಕುರಿತು ಚರ್ಚಿಸೋಣ’ ಎಂದು ತಮ್ಮ ಪತ್ರದಲ್ಲಿ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.