ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಕಾಡುಗಳ್ಳ ವೀರಪ್ಪನ್‌ ಪುತ್ರಿ ತಮಿಳುನಾಡಿನ ಕೃಷ್ಣಗಿರಿಯಿಂದ ಕಣಕ್ಕೆ

Published 24 ಮಾರ್ಚ್ 2024, 3:17 IST
Last Updated 24 ಮಾರ್ಚ್ 2024, 3:17 IST
ಅಕ್ಷರ ಗಾತ್ರ

ಚೆನ್ನೈ: ಕಾಡುಗಳ್ಳ ವೀರಪ್ಪನ್‌ ಪುತ್ರಿ ವಿದ್ಯಾ ರಾಣಿ ಅವರು 'ನಾಮ್‌ ತಮಿಳರ್‌ ಕಚ್ಚಿ' (ಎನ್‌ಟಿಕೆ) ಪಕ್ಷದ ಅಭ್ಯರ್ಥಿಯಾಗಿ ತಮಿಳುನಾಡಿನ ಕೃಷ್ಣಗಿರಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

2020ರ ಜುಲೈನಲ್ಲಿ ಬಿಜೆಪಿ ಸೇರಿದ್ದ ವಿದ್ಯಾ ರಾಣಿ, ರಾಜ್ಯ ಯುವ ಘಟಕದ ಉಪಾಧ್ಯಕ್ಷೆಯಾಗಿ ನೇಮಕಗೊಂಡಿದ್ದರು. ಆದರೆ, ಇತ್ತೀಚೆಗೆ ಆ ಪಕ್ಷವನ್ನು ತೊರೆದು ಎನ್‌ಟಿಕೆಗೆ ಸೇರಿದ್ದಾರೆ. ವಕೀಲೆಯಾಗಿರುವ ಅವರು, ಕೃಷ್ಣಗಿರಿಯಲ್ಲಿ ಶಾಲೆ ನಡೆಸುತ್ತಿದ್ದಾರೆ.

ಎಲ್‌ಟಿಟಿಇ ನಾಯಕ ವಿ.ಪ್ರಭಾಕರನ್‌ ಅವರ ವಿಚಾರಧಾರೆಗಳಿಂದ ಪ್ರಭಾವಿತವಾಗಿರುವ ಎನ್‌ಟಿಕೆ ಪಕ್ಷವನ್ನು ಚಿತ್ರನಟ ಹಾಗೂ ನಿರ್ದೇಶಕ ಸೀಮನ್‌ ಮುನ್ನಡೆಸುತ್ತಿದ್ದಾರೆ.

ತಮಿಳುನಾಡು ಹಾಗೂ ಪುದುಚೇರಿಯ ಒಟ್ಟು 40 ಕ್ಷೇತ್ರಗಳಲ್ಲಿ ಪಕ್ಷದಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿಯನ್ನು ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಪ್ರಕಟಿಸಿರುವ ಸೀಮನ್‌, 'ವಿದ್ಯಾ ರಾಣಿ ಕೃಷ್ಣಗಿರಿಯಿಂದ ಸ್ಪರ್ಧಿಸಲಿದ್ದಾರೆ' ಎಂದು ಘೋಷಿಸಿದ್ದಾರೆ.

ವಿದ್ಯಾ ರಾಣಿ 3ನೇ ತರಗತಿ ಓದುತ್ತಿದ್ದಾಗ, ಕರ್ನಾಟಕ ಮತ್ತು ತಮಿಳುನಾಡು ಗಡಿ ಗ್ರಾಮ ಗೋಪಿನಾಥಂನಲ್ಲಿರುವ ತಮ್ಮ ತಾತನ ಮನೆಯಲ್ಲಿ ತಂದೆಯನ್ನು ಭೇಟಿಯಾಗಿದ್ದರು. ನಂತರ ಪರಸ್ಪರ ಭೇಟಿ ಸಾಧ್ಯವಾಗಿರಲಿಲ್ಲ. ಆದರೂ, ತಂದೆಯೇ ತಮ್ಮ ಮಾರ್ಗದರ್ಶಕ ಎಂದು ವಿದ್ಯಾ ರಾಣಿ ಭಾವಿಸಿದ್ದಾರೆ.

'ತಂದೆಯನ್ನು ಭೇಟಿಯಾಗಿದ್ದು ಅದೇ ಮೊದಲು ಮತ್ತು ಕೊನೆ. ನಾವು 30 ನಿಮಿಷ ಮಾತನಾಡಿದ್ದೆವು. ಆ ಮಾತುಕತೆ ಈಗಲೂ ನನ್ನ ಮನಸ್ಸಿನಲ್ಲಿದೆ. ವೈದ್ಯೆಯಾಗಿ, ಜನರ ಸೇವೆ ಮಾಡು ಎಂದು ಅವರು ನನಗೆ ಹೇಳಿದ್ದರು. ಇಂದು ನಾನು ಏನಾಗಿದ್ದೇನೋ, ಅದಕ್ಕೆ ಆ ಸಂಭಾಷಣೆಯೇ ಕಾರಣ' ಎಂದು 2020ರಲ್ಲಿ ಪ್ರಜಾವಾಣಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

ದಂತಕ್ಕಾಗಿ ಆನೆಗಳ ಬೇಟೆ, ಗಂಧದ ಮರ ಕಳ್ಳಸಾಗಣೆ, ಖ್ಯಾತ ನಟ ರಾಜ್‌ಕುಮಾರ್‌ ಸೇರಿದಂತೆ ಗಣ್ಯ ವ್ಯಕ್ತಿಗಳ ಅಪಹರಣ ಕೃತ್ಯಗಳಲ್ಲಿ ತೊಡಗಿದ್ದ ವೀರಪ್ಪನ್‌, 2004ರ ಅಕ್ಟೋಬರ್‌ 18ರಂದು ತಮಿಳುನಾಡು ಎಸ್‌ಟಿಎಫ್‌ ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದ.

ವಿದ್ಯಾ ರಾಣಿ ಅವರ ತಾಯಿ ಮುತ್ತುಲಕ್ಷ್ಮಿ, ಶಾಸಕ ಟಿ.ವೇಲ್‌ಮುರುಗನ್‌ ನೇತೃತ್ವದ 'ತಮಿಳಗ ವಝ್ವಿರಿಮೈ ಕಚ್ಚಿ' ಪಕ್ಷದಲ್ಲಿದ್ದಾರೆ.

ಮತ ಗಳಿಕೆ ಏರಿಕೆ
ಎನ್‌ಟಿಕೆ ಮತ ಗಳಿಕೆ ಪ್ರಮಾಣ ಪ್ರತಿ ಚುನಾವಣೆಯಲ್ಲಿ ಏರಿಕೆಯಾಗುತ್ತಾ ಸಾಗಿದೆ. 2016ರ ವಿಧಾನಸಭೆ ಚುನಾವಣೆಯಲ್ಲಿ ಶೇ 1.1ರಷ್ಟು ಮತಗಳನ್ನು ಪಡೆದಿದ್ದ ಈ ಪಕ್ಷ, 2019ರ ಲೋಕಸಭೆ ಚುನಾವಣೆಯಲ್ಲಿ ಶೇ 4 ರಷ್ಟು ಮತ ಗಳಿಸಿತ್ತು.

2021ರ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ 234 ಕ್ಷೇತ್ರಗಳಲ್ಲೂ ಕಣಕ್ಕಿಳಿದಿದ್ದ ಎನ್‌ಟಿಕೆ, ಒಂದೂ ಸ್ಥಾನ ಗೆದ್ದಿಲ್ಲ. ಆದರೆ, ಮತ ಗಳಿಕೆ ಪ್ರಮಾಣವನ್ನು ಶೇ 6.7ಕ್ಕೆ ಏರಿಸಿಕೊಂಡಿದೆ. ಇದರೊಂದಿಗೆ ಅತಿಹೆಚ್ಚು ಮತ ಪಡೆದ ಮೂರನೇ ಪಕ್ಷವಾಗಿ ಹೊರಹೊಮ್ಮಿ, ಕಾಂಗ್ರೆಸ್‌ ಅನ್ನು ಹಿಂದಿಕ್ಕಿದೆ.

ಸದ್ಯ ಅಧಿಕಾರದಲ್ಲಿರುವ ಡಿಎಂಕೆ (ಶೇ 37.70) ಮತ್ತು ಎಐಡಿಎಂಕೆ (ಶೇ 33.29) ಮಾತ್ರವೇ ಎನ್‌ಟಿಕೆಗಿಂತ ಹೆಚ್ಚು ಮತ ಪಡೆದಿವೆ. ಕಾಂಗ್ರೆಸ್‌ ಕೇವಲ ಶೇ 4.27 ರಷ್ಟು ಮತಗಳನ್ನು ಪಡೆದಿತ್ತು ಎಂಬುದು ವಿಶೇಷ.

ತಮಿಳುನಾಡು ಹಾಗೂ ಪುದುಚೇರಿಯ ಲೋಕಸಭೆ ಸ್ಥಾನಗಳಿಗೆ ಏ‌ಪ್ರಿಲ್‌ 19ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT