ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿಯನಿಗೆ ಟಿಕೆಟ್‌ ಸಿಗದೆ ಮುನಿಸಿಕೊಂಡ ‘ಕೈ’ ಮುಖಂಡ ಶಫಿ ಅಹ್ಮದ್‌ ಭೇಟಿಯಾದ ಇಬ್ರಾಹಿಂ

Published 25 ಏಪ್ರಿಲ್ 2023, 12:49 IST
Last Updated 25 ಏಪ್ರಿಲ್ 2023, 12:49 IST
ಅಕ್ಷರ ಗಾತ್ರ

ತುಮಕೂರು: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ತುಮಕೂರು ನಗರ ಕ್ಷೇತ್ರದಿಂದ ತಮ್ಮ ಅಳಿಯನಿಗೆ ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಶಫಿ ಅಹ್ಮದ್ ಮನೆಗೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮಂಗಳವಾರ ಭೇಟಿನೀಡಿ ಚರ್ಚಿಸಿರುವುದು ರಾಜಕೀಯವಾಗಿ ತೀವ್ರ ಕುತೂಹಲ ಮೂಡಿಸಿದೆ.

ನಗರದಲ್ಲಿರುವ ಶಫಿ ಅಹ್ಮದ್ ಮನೆಗೆ ಭೇಟಿನೀಡಿ ಕೆಲಹೊತ್ತು ರಾಜಕೀಯವಾಗಿ ಚರ್ಚೆ ನಡೆಸಿದರು. ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು. ಆದರೆ ಶಫಿ ಅವರು ಯಾವುದೇ ನಿರ್ಧಾರ ತಿಳಿಸಿಲ್ಲ. ಮುಂದೆ ನೋಡೋಣ ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬಳಿಕ ಶಫಿ ಅಹ್ಮದ್ ಹಾಗೂ ಅಳಿಯ, ಮಾಜಿ ಶಾಸಕ ರಫಿಕ್ ಅಹ್ಮದ್ ಪಕ್ಷದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಇಕ್ಬಾಲ್ ಅಹ್ಮದ್ ಅವರು ಇಬ್ಬರು ನಾಯಕರನ್ನು ಭೇಟಿಯಾಗಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೂ ಸ್ಪಂದನೆ ಸಿಕ್ಕಿರಲಿಲ್ಲ. ನಾಮಪತ್ರ ಸಲ್ಲಿಕೆ ಸಮಯದಲ್ಲೂ ಕಾಣಿಸಿಕೊಳ್ಳಲಿಲ್ಲ. ಅವರ ಬೆಂಬಲಿಗರ ಚಟುವಟಿಕೆಗಳೂ ಕಂಡುಬರುತ್ತಿಲ್ಲ. ಜತೆಗೆ ಪಕ್ಷದ ಜಿಲ್ಲೆಯ ಇತರೆ ನಾಯಕರ ಜತೆಗೂ ಮುನಿಸಿಕೊಂಡಿದ್ದು, ಎಲ್ಲರಿಂದ ದೂರವೇ ಉಳಿದಿದ್ದಾರೆ.

ಟಿಕೆಟ್ ಸಿಗದೆ ಅಸಮಾಧಾನಗೊಂಡು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಶಫಿ ಅಹ್ಮದ್ ರಾಜೀನಾಮೆ ನೀಡಿದ್ದರು. ನಂತರ ರಾಜ್ಯಮಟ್ಟದ ನಾಯಕರು ಬಂದು ಮನವೊಲಿಸಿದ್ದರು. ಕೊನೆಗೆ ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭೇಟಿಯಾಗಿ ಸಮಾಧಾನ ಪಡಿಸಿದ್ದರು. ಇಕ್ಬಾಲ್ ಅಹ್ಮದ್ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ನೀಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಕ್ರಮ ಕೈಗೊಳ್ಳುವ ಬಗ್ಗೆಯೂ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಂತರವೂ ರಾಜಕೀಯ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು. ಯಾವ ನಾಯಕರ ಮಾತಿಗೂ ಸ್ಪಂದಿಸಿದಂತೆ ಕಾಣುತ್ತಿಲ್ಲ. ಈ ಮರ್ಮವನ್ನು ಅರಿತಿದ್ದ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಅವರು ರಂಜಾನ್ ಶುಭಾಶಯ ಕೋರುವ ನೆಪದಲ್ಲಿ ರಫಿಕ್ ಅಹ್ಮದ್ ಮನೆಗೆ ಭೇಟಿ ನೀಡಿ ಬೆಂಬಲ ಕೋರಿದ್ದರು. ಈ ಇಬ್ಬರೂ ನಾಯಕರು ಕಳೆದ ಹಲವು ದಶಕಗಳ ಕಾಲ ರಾಜಕೀಯವಾಗಿ ಬದ್ಧ ವೈರಿಗಳಾಗಿ ಕ್ಷೇತ್ರದಲ್ಲಿ ಸೆಣೆಸಿಕೊಂಡು ಬಂದಿದ್ದರು. ಅದೆಲ್ಲವನ್ನೂ ಮರೆತು ಶಿವಣ್ಣ ಭೇಟಿ ನೀಡಿದ್ದು ಮಹತ್ವ ಪಡೆದುಕೊಂಡಿತ್ತು. ಈಗ ಇಬ್ರಾಹಿಂ ಭೇಟಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ಕಾಂಗ್ರೆಸ್ ತೊರೆದು ಜೆಡಿಎಸ್ ಕೆಡೆಗೆ ಮುಖ ಮಾಡುವುದೆ? ಇಲ್ಲ ಪಕ್ಷದಲ್ಲೇ ಇದ್ದುಕೊಂಡು ಇಕ್ಬಾಲ್ ಅಹ್ಮದ್ ಪರ ಪ್ರಚಾರ ಮಾಡದೆ ತಟಸ್ಥವಾಗಿ ಉಳಿಯಬೇಕೆ? ಎಂಬ ಬಗ್ಗೆ ಚಿಂತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT