ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬಂಡಾಯದ ಕಿಚ್ಚು: 2ನೇ ಹಂತದ 3 ಕ್ಷೇತ್ರಗಳಲ್ಲಿ ನಾಯಕರು ರೊಚ್ಚು

ಬಿಎಸ್‌ವೈ ವಿರುದ್ಧ ಅತೃಪ್ತಿ
Published 16 ಏಪ್ರಿಲ್ 2024, 20:25 IST
Last Updated 16 ಏಪ್ರಿಲ್ 2024, 20:25 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಎರಡನೇ ಹಂತದ ನಾಮಪತ್ರ ಸಲ್ಲಿಕೆಗೆ ಎರಡು ದಿನ ಇರುವ ಮುನ್ನವೇ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ. ಟಿಕೆಟ್ ಸಿಗದೇ ಇರುವ ಕಾರಣಕ್ಕೆ ಮುನಿಸಿಕೊಂಡಿದ್ದ ಕೊಪ್ಪಳ ಸಂಸದ ಸಂಗಣ್ಣ ಕರಡಿ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೂಲಕ, ತಮ್ಮ ಆಕ್ರೋಶ ಹೊರಹಾಕಿದ್ದಾರೆ. ತನ್ನ ತಮ್ಮನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಸಿಟ್ಟಿಗೆದ್ದಿರುವ ಕಲಬುರಗಿಯ ಪ್ರಭಾವಿ ನಾಯಕ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಅವರೂ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ. ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದ ಬಿ.ವೈ.ವಿಜಯೇಂದ್ರ ವಿರುದ್ಧ ಕೆ.ಎಸ್. ಈಶ್ವರಪ್ಪ ಆಕ್ರೋಶ ಹೊರಹಾಕಿದ್ದು, ಸವಾಲು ಎಸೆದಿದ್ದಾರೆ.

..........

ಸಂಸದ ಸ್ಥಾನಕ್ಕೆ ಸಂಗಣ್ಣ ರಾಜೀನಾಮೆ

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್‌ ಸಿಗದ ಕಾರಣಕ್ಕೆ ಬೇಸರಗೊಂಡಿದ್ದ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ಸಂಸದ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ.

‘ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಇ–ಮೇಲ್‌ ಮೂಲಕ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಕೊಟ್ಟಿದ್ದೇನೆ’ ಎಂದು ಸಂಗಣ್ಣ ಕರಡಿ ತಿಳಿಸಿದ್ದಾರೆ.‌

‘ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣ ರಾಜೀನಾಮೆ ನೀಡಿದ್ದೇನೆ. ನನಗೆ ಟಿಕೆಟ್ ತಪ್ಪಿಸಿದ ಮಹಾನಾಯಕರಿಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆ ಅವರಿಗೆ ಇದೆ. ಆದರೆ ಅವರಿಗೂ ನನ್ನ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದು ಅವರು ಹೇಳಿದ್ದಾರೆ.

2011ರಲ್ಲಿ ಬಿಜೆಪಿಗೆ ಸೇರಿದ್ದರು. ಹಿಂದಿನ ಎರಡು ಅವಧಿಗೆ ಸತತವಾಗಿ ಸಂಸದರಾಗಿದ್ದ ಅವರು, ಟಿಕೆಟ್ ಸಿಗದ ಕಾರಣಕ್ಕೆ ಅಸಮಾಧಾನಗೊಂಡಿದ್ದರಲ್ಲದೇ, ಪಕ್ಷದ ರಾಜ್ಯ ನಾಯಕರ ವಿರುದ್ಧ ಆಕ್ರೋಶಗೊಂಡಿದ್ದರು. ಅವರನ್ನು ಬಿ.ಎಸ್‌. ಯಡಿಯೂರಪ್ಪ, ಪ್ರಲ್ಹಾದ ಜೋಶಿ, ಬಸವರಾಜ ಬೊಮ್ಮಾಯಿ, ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಬೆಂಗಳೂರಿಗೆ ಕರೆಯಿಸಿ ಸಮಾಧಾನಪಡಿಸಿದ್ದರು. ಪಕ್ಷ ಘೋಷಿಸಿದ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್‌ ಪರ ಪ್ರಚಾರ ಮಾಡುವಂತೆ ಹೇಳಿದ್ದರು.

ಬೆಂಗಳೂರಿನ ಸಭೆ ಬಳಿಕ ಕ್ಷೇತ್ರಕ್ಕೆ ಮರಳಿ ಬಿಜೆಪಿ ಅಭ್ಯರ್ಥಿ ಪರ ಕುಷ್ಟಗಿ ಮತ್ತು ಕೊಪ್ಪಳದಲ್ಲಿ ನಡೆದಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ‘ಮೋದಿ ಮತ್ತೆ ಪ್ರಧಾನಿಯಾಗಲು ಬಸವರಾಜ ಅವರಿಗೆ ಮತ ನೀಡಿ’ ಎಂದು ಕೋರಿದ್ದರು. ಅದಾದ ಬಳಿಕ ಬಿಜೆಪಿಯ ಎಲ್ಲ ಚಟುವಟಿಕೆಯಿಂದ ಅವರು ಅಂತರ ಕಾಯ್ದುಕೊಂಡಿದ್ದರು.

ಕಾಂಗ್ರೆಸ್‌ನತ್ತ ಹೆಜ್ಜೆ: ಸ್ನೇಹಿತರೂ ಆಗಿರುವ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ಅವರು ಸಂಗಣ್ಣ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆಯಾಗುವಂತೆ ಮನವೊಲಿಸಿದ್ದರು. ಮಂಗಳವಾರ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಕೂಡ ಸಂಗಣ್ಣ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದರು.

ಸಂಗಣ್ಣ ಅವರ ಆಪ್ತ ಮೂಲಗಳ ಮಾಹಿತಿ ಪ್ರಕಾರ, ‘ಬುಧವಾರವೇ ಅವರು ಪಕ್ಷ ಸೇರ್ಪಡೆಯಾಗುತ್ತಾರೆ’ ಎಂದು ಗೊತ್ತಾಗಿದೆ.

..............

ಕುಟುಂಬ ಒಡೆದ ವಿಜಯೇಂದ್ರ: ಮಾಲೀಕಯ್ಯ

ಕಲಬುರಗಿ: ‘ವಿಜಯೇಂದ್ರ ಹಾಗೂ ಸಿ.ಟಿ. ರವಿಯಂತಹ ನಾಯಕರು ‌ರಾಜ್ಯದಲ್ಲಿ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ. ಪಕ್ಷಕ್ಕೆ ದುಡಿದ ಸಂಸದರಾದ ಸಂಗಣ್ಣ ಕರಡಿ, ಪ್ರತಾಪ ಸಿಂಹ ಅವರಿಗೆ ಉದ್ದೇಶಪೂರ್ವಕವಾಗಿ ಟಿಕೆಟ್ ತಪ್ಪಿಸಲಾಗಿದೆ. ನನ್ನ ಕುಟುಂಬವನ್ನೂ ಒಡೆದಿದ್ದಾರೆ’ ಎಂದು ಮಾಲೀಕಯ್ಯ ಗುತ್ತೇದಾರ ಅವರು ಕಿಡಿಕಾರಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಹಿತೈಷಿಗಳ ಹಾಗೂ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ತೊರೆಯುವ ಸುಳಿವು ನೀಡಿದರು. ಇದೇ 19ರಂದು ತಮ್ಮ ಅಂತಿಮ ನಿರ್ಧಾರ ತಿಳಿಸುವುದಾಗಿ ಸ್ಪಷ್ಟಪಡಿಸಿದರು.

‘ನನ್ನ ತಮ್ಮ ನಿತಿನ್‌ನನ್ನು ಮರಳಿ ಪಕ್ಷಕ್ಕೆ ‌ಸೇರಿಸಿಕೊಳ್ಳಲು ವಿಜಯೇಂದ್ರ, ಸಿ.ಟಿ. ರವಿ, ಪಿ.ರಾಜೀವ್ ಎಷ್ಟು ಹಣ ಪಡೆದಿದ್ದಾರೆ' ಎಂದೂ ಪ್ರಶ್ನಿಸಿದರು.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ವಿಪರೀತ ಭ್ರಷ್ಟಾಚಾರ ಇತ್ತು. ಈ ಬಗ್ಗೆ ರಾಜ್ಯ ಉಸ್ತುವಾರಿಯಾಗಿದ್ದ ಅರುಣ್ ಸಿಂಗ್ ಅವರ ಗಮನಕ್ಕೆ ತಂದಿದ್ದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಗ್ಯಾರಂಟಿ ಯೋಜನೆಗಳಿಂದಲ್ಲ. ಬದಲಾಗಿ ಬಿಜೆಪಿಯ ಭ್ರಷ್ಟಾಚಾರದಿಂದ’ ಎಂದು ಆರೋಪಿಸಿದರು.

‘ಯಡಿಯೂರಪ್ಪ ಅವರು ಕರೆ ಮಾಡಿ ಮನೆಗೆ ಬಾ ಮಾತಾಡೋಣ ಎಂದರು. ನಾನು ಅವರನ್ನು ತಂದೆ ಸಮಾನರೆಂದು ಪರಿಗಣಿಸಿದ್ದೆ. ಆದರೆ, ನನ್ನ ಗಮನಕ್ಕೆ ತಾರದೇ ನಿತಿನ್‌ನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಹೀಗಾಗಿ ಮಾತನಾಡುವುದು ಏನೂ ಉಳಿದಿಲ್ಲ’ ಎಂದರು.

‘ನನ್ನ ತಮ್ಮ ಬಿಜೆಪಿಗೆ ಬಂದರೆ ನಾನು ಇರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ಇದೀಗ ನಿತಿನ್‌ನನ್ನು ಸೇರಿಸಿಕೊಳ್ಳುವ ಮೂಲಕ ನಾನು ಪಕ್ಷಕ್ಕೆ ಬೇಕಿಲ್ಲ ಎಂದು ವರಿಷ್ಠರು ಹೇಳಿದಂತಾಗಿದೆ’ ಎಂದು  ಮಾಲೀಕಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT