ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ನಾಯಕನಿಗೆ ಕಾಂಗ್ರೆಸ್‌ ಟಿಕೆಟ್‌

ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಗ ಸಾಗರ್‌ ಖಂಡ್ರೆಗೆ ಬೀದರ್‌ ಎಂಪಿ ಟಿಕೆಟ್‌ ಘೋಷಣೆ
Published 22 ಮಾರ್ಚ್ 2024, 6:09 IST
Last Updated 22 ಮಾರ್ಚ್ 2024, 6:09 IST
ಅಕ್ಷರ ಗಾತ್ರ

ಬೀದರ್‌: ಸಾಕಷ್ಟು ಅಳೆದು ತೂಗಿದ ನಂತರ ಕಾಂಗ್ರೆಸ್‌ ಪಕ್ಷವು ಬೀದರ್‌ ಲೋಕಸಭಾ ಕ್ಷೇತ್ರದ ಟಿಕೆಟ್‌ ಪಕ್ಷದ ಯುವ ನಾಯಕ ಸಾಗರ್‌ ಖಂಡ್ರೆಯವರಿಗೆ ಘೋಷಿಸಿದೆ.

ಆರಂಭದಿಂದಲೂ ಸಾಗರ್‌ ಖಂಡ್ರೆಯವರ ಹೆಸರು ಕೇಳಿ ಬರುತ್ತಿತ್ತು. ಅದಕ್ಕೆ ಪೂರಕವಾಗಿ ಜಿಲ್ಲೆಯಾದ್ಯಂತ ಪ್ರಚಾರ ಕೂಡ ಕೈಗೊಳ್ಳಲಾಗಿತ್ತು. ಪ್ರತಿಯೊಂದು ಹಬ್ಬ, ಹರಿದಿನ ಹಾಗೂ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರು ಜಿಲ್ಲಾ ಪ್ರವಾಸ ಕೈಗೊಂಡಾಗ ಜಿಲ್ಲೆಯಾದ್ಯಂತ ಸಾಗರ್‌ ಖಂಡ್ರೆಯವರ ಫ್ಲೆಕ್ಸ್‌, ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಈಗ ಅಂತಿಮವಾಗಿ ಸಾಗರ್‌ ಅವರಿಗೆ ಟಿಕೆಟ್‌ ಸಿಕ್ಕಿರುವುದರಿಂದ ಪಕ್ಷದ ಕಾರ್ಯಕರ್ತರು, ಅವರ ಬೆಂಬಲಿಗರಲ್ಲಿ ಸಂಭ್ರಮ ಮನೆ ಮಾಡಿದೆ.

ಸಾಗರ್‌ ಖಂಡ್ರೆಯವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರ ಮಗ. ಸಾಗರ್‌, ಸದ್ಯ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಹೋದ ವರ್ಷವಷ್ಟೇ ಕಾಂಗ್ರೆಸ್‌ ವಿದ್ಯಾರ್ಥಿ ಒಕ್ಕೂಟದ ಜವಾಬ್ದಾರಿ ವಹಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಡಿಸೆಂಬರ್‌ನಲ್ಲಿ ಭಾಲ್ಕಿಯಲ್ಲಿ ಏರ್ಪಡಿಸಿದ್ದ ಭೀಮಣ್ಣ ಖಂಡ್ರೆಯವರ ಜನ್ಮ ಶತಮಾನೋತ್ಸವ ಹಾಗೂ ಬಸವಕಲ್ಯಾಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮುಖ್ಯಮಂತ್ರಿ ಅಭಿನಂದನಾ ಸಮಾರಂಭದ ಯಶಸ್ಸಿನಲ್ಲಿ ಸಾಗರ್‌ ಖಂಡ್ರೆ ಪ್ರಮುಖ ಪಾತ್ರ ವಹಿಸಿದ್ದರು. 26 ವಯಸ್ಸಿನ ಚಿಗುರು ಮೀಸೆಯ ಸಾಗರ್‌ ಖಂಡ್ರೆಯವರಿಗೆ ಟಿಕೆಟ್‌ ದೊರಕಿಸಿಕೊಡುವಲ್ಲಿ ಅವರ ತಂದೆ, ಸಚಿವ ಈಶ್ವರ ಬಿ. ಖಂಡ್ರೆಯವರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ಸಾಗರ್‌ ಖಂಡ್ರೆ
ಸಾಗರ್‌ ಖಂಡ್ರೆ

Cut-off box - ಆರಂಭದಿಂದಲೂ ಎರಡೇ ಹೆಸರು ಬೀದರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಸ್ಪರ್ಧೆಯಲ್ಲಿ ಆರಂಭದಿಂದಲೂ ಸಾಗರ್‌ ಖಂಡ್ರೆ ಹಾಗೂ ಮಾಜಿಸಚಿವ ರಾಜಶೇಖರ ಪಾಟೀಲ ಹುಮನಾಬಾದ್‌ ಅವರ ಹೆಸರುಗಳಷ್ಟೇ ಕೇಳಿ ಬಂದಿವೆ. ಕೆಲ ಸ್ಥಳೀಯ ಮುಖಂಡರು ‘ನಾವು ಕೂಡ ಟಿಕೆಟ್ ಆಕಾಂಕ್ಷಿಗಳು’ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಆದರೆ ಜಿಲ್ಲೆಯ ಆಚೆಗೆ ಅವರ ಹೆಸರುಗಳು ಚರ್ಚೆಗೆ ಬರಲೇ ಇಲ್ಲ. ಹೋದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜಶೇಖರ ಪಾಟೀಲ ಅವರು ಸೋಲು ಕಂಡ ನಂತರ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇವರನ್ನೇ ಅಭ್ಯರ್ಥಿ ಮಾಡಬೇಕೆನ್ನುವುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಲವು ಹೊಂದಿದ್ದರು. ಆದರೆ ರಾಜಶೇಖರ ಪಾಟೀಲ ಅವರು ಆರಂಭದಿಂದಲೂ ಲೋಕಸಭೆಗೆ ಸ್ಪರ್ಧಿಸುವುದರ ಬಗ್ಗೆ ಹೆಚ್ಚು ಒಲವು ತೋರಲಿಲ್ಲ. ಇತರೆ ಕೆಲ ಮುಖಂಡರಿದ್ದರೂ ಹೇಳಿಕೊಳ್ಳುವಂತಹ ವರ್ಚಸ್ಸು ಇರಲಿಲ್ಲ. ಅವರು ಕೂಡ ಗಂಭೀರವಾಗಿ ಟಿಕೆಟ್‌ಗಾಗಿ ಪ್ರಯತ್ನಿಸಲಿಲ್ಲ. ಹೀಗಾಗಿಯೇ ಈಶ್ವರ ಬಿ. ಖಂಡ್ರೆಯವರು ಚುನಾವಣೆಗೆ ಮಗನನ್ನು ಸಿದ್ಧಗೊಳಿಸಿದರು. ಅದು ಈಗ ಫಲ ಕೊಟ್ಟಿದೆ ಎಂದು ಕಾಂಗ್ರೆಸ್‌ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

Cut-off box - ವಯಸ್ಸು 26 ಓದಿದ್ದು ಎಲ್‌ಎಲ್‌ಬಿ ಸಾಗರ್‌ ಖಂಡ್ರೆಯವರಿಗೆ ಈಗ 26 ವರ್ಷ. ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಬಿಬಿಎ ಎಲ್‌ಎಲ್‌ಬಿ ಪದವಿ ಪೂರೈಸಿದ್ದಾರೆ. ಪ್ರತಿಷ್ಠಿತ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆಗಿದ್ದಾರೆ. ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಕಾಂಗ್ರೆಸ್‌ ಪಕ್ಷದಿಂದ ಬೀದರ್‌ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅದೃಷ್ಟ ಒಲಿದು ಬಂದಿದೆ.

Cut-off box - ಖಂಡ್ರೆ ಪರಿವಾರದ ಮೂರನೇ ತಲೆಮಾರು ಸಾಗರ್‌ ಖಂಡ್ರೆಯವರು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ರಾಜ್ಯ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿ ವಹಿಸಿಕೊಂಡ ದಿನವೇ ಅವರ ಪರಿವಾರದ ಮೂರನೇ ತಲೆಮಾರು ರಾಜಕೀಯಕ್ಕೆ ಪ್ರವೇಶ ಕೊಟ್ಟಿತು. ಈಗ ಕಿರಿಯ ವಯಸ್ಸಿನಲ್ಲೇ ಬೀದರ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿದೆ. ಭೀಮಣ್ಣ ಖಂಡ್ರೆಯವರು ದೀರ್ಘಕಾಲ ಕಾಂಗ್ರೆಸ್‌ ಪಕ್ಷದಲ್ಲಿದ್ದು ರಾಜಕೀಯ ಮಾಡಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಹಕಾರ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದರು. ಅವರ ಬಳಿಕ ಅವರ ಮಕ್ಕಳಾದ ವಿಜಯಕುಮಾರ ಖಂಡ್ರೆ ಈಶ್ವರ ಬಿ. ಖಂಡ್ರೆ ರಾಜಕೀಯ ಪ್ರವೇಶಿಸಿದರು. ಅಮರ್‌ಕುಮಾರ್‌ ಖಂಡ್ರೆಯವರು ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಅಧ್ಯಕ್ಷರಾಗಿದ್ದಾರೆ. ಈಗ ಸಾಗರ್‌ ಖಂಡ್ರೆ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Cut-off box - ಖೂಬಾ–ಸಾಗರ್‌ ನೇರ ಸ್ಪರ್ಧೆ? ಬೀದರ್‌ ಲೋಕಸಭಾ ಕ್ಷೇತ್ರದ ಹಾಲಿ ಸಂಸದರೂ ಆದ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ನಡುವೆ ಬರುವ ಚುನಾವಣೆಯಲ್ಲಿ ನೇರ ಸ್ಪರ್ಧೆ ನಡೆಯುವುದು ಬಹುತೇಕ ಖಚಿತ. ಬಿಜೆಪಿಯಿಂದ ಖೂಬಾ ಅವರ ಹೆಸರು ಘೋಷಣೆಯಾದ ನಂತರ ಆ ಪಕ್ಷದಲ್ಲಿ ಯಾರೂ ಅದಕ್ಕೆ ಅಪಸ್ವರ ಎತ್ತಿಲ್ಲ. ಕಾಂಗ್ರೆಸ್‌ನಲ್ಲೂ ಇದೇ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಬಿಟ್ಟರೆ ಅನ್ಯ ಪಕ್ಷಗಳಿಗೆ ಹೇಳಿಕೊಳ್ಳುವಂತಹ ನೆಲೆ ಇಲ್ಲ. ಇದುವರೆಗೆ ನಡೆದ ಚುನಾವಣೆಗಳಲ್ಲಿ ಎರಡು ಪಕ್ಷಗಳ ಅಭ್ಯರ್ಥಿಗಳ ನಡುವೆಯೇ ನೇರ ಸ್ಪರ್ಧೆ ಏರ್ಪಡುತ್ತ ಬಂದಿದೆ. ಈ ಸಲವೂ ಅದು ಪುನರಾವರ್ತನೆ ಆಗುವ ಸಾಧ್ಯತೆ ಹೆಚ್ಚಿದೆ. ಖೂಬಾ ಅವರು ಈ ಹಿಂದಿನ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ ವಿರುದ್ಧ ಜಯ ಗಳಿಸಿದ್ಧಾರೆ. 2014ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ 2019ರಲ್ಲಿ ಸಚಿವ ಈಶ್ವರ ಬಿ. ಖಂಡ್ರೆಯವರನ್ನು ಪರಾಭವಗೊಳಿಸಿದ್ದರು. ‘ಹ್ಯಾಟ್ರಿಕ್‌’ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಈಶ್ವರ ಖಂಡ್ರೆಯವರಿಗೆ ಇದು ಪ್ರತಿಷ್ಠೆಯ ಚುನಾವಣೆ ಆಗಿರುವುದರಿಂದ ಖೂಬಾ ಅವರ ಹಾದಿ ಅಷ್ಟು ಸುಗಮವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT