ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ತಯಾರಕರಿಂದಲೂ ದೇಣಿಗೆ ಪಡೆದ ಬಿಜೆಪಿ: ಪ್ರಿಯಾಂಕಾ ವಾಗ್ದಾಳಿ

ಉದ್ಯಮಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ; ರೈತರ ಸಮಸ್ಯೆಗೆ ಸ್ಪಂದಿಸದ ಪ್ರಧಾನಿ: ಪ್ರಿಯಾಂಕಾ ವಾಗ್ದಾಳಿ
Published 4 ಮೇ 2024, 22:58 IST
Last Updated 4 ಮೇ 2024, 22:58 IST
ಅಕ್ಷರ ಗಾತ್ರ

ದಾವಣಗೆರೆ: ‘ಬಿಜೆಪಿಯು ದೊಡ್ಡ ದೊಡ್ಡ ಉದ್ಯಮಿಗಳಿಂದ ದೇಣಿಗೆ ಪಡೆದು ಜಗತ್ತಿನ ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ಹೃದಯಾಘಾತ ಉಂಟುಮಾಡುತ್ತಿರುವ ಕೋವಿಡ್‌ ಲಸಿಕೆಯನ್ನು ತಯಾರಿಸಿರುವ ಕಂಪನಿಯಿಂದಲೂ ಬಿಜೆಪಿ ₹ 52 ಕೋಟಿ ದೇಣಿಗೆ ಪಡೆದುಕೊಂಡಿದೆ’ ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದೂರಿದರು.

ಶನಿವಾರ ಇಲ್ಲಿ ನಡೆದ ಪಕ್ಷದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿಗೆ ದೇಣಿಗೆ ನೀಡಿರುವ ಕಂಪನಿಯು ತಯಾರಿಸಿರುವ ಲಸಿಕೆ ಹಾಕಿಸಿಕೊಂಡು ದೇಶದ ಸಾವಿರಾರು ಜನ, ಅದರಲ್ಲೂ ವಿಶೇಷವಾಗಿ ಗಟ್ಟಿಮುಟ್ಟಾದ ಯುವಕರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕೆಲ ತಿಂಗಳ ಹಿಂದೆ ಗುಜರಾತ್‌ನಲ್ಲಿ ತೂಗು ಸೇತುವೆಯೊಂದು ಕುಸಿದು ಅನೇಕರು ಪ್ರಾಣ ಕಳೆದುಕೊಂಡರು. ಆ ಸೇತುವೆ ನಿರ್ಮಿಸಿದ್ದ ಗುತ್ತಿಗೆದಾರನೂ ಬಿಜೆಪಿಗೆ ದೇಣಿಗೆ ನೀಡಿದ್ದ. ಅದೇ ರೀತಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ಶ್ರೀಮಂತ ಉದ್ಯಮಿಗಳಿಂದ ₹ 7,000 ಕೋಟಿ ಮೊತ್ತವನ್ನು ದೇಣಿಗೆ ರೂಪದಲ್ಲಿ ಪಡೆದು ಅತ್ಯಂತ ಶ್ರೀಮಂತ ಪಕ್ಷವೆಂದು ಹೆಸರಾಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ವಿಪಕ್ಷಕ್ಕೆ ಸೇರಿರುವ ಅನೇಕ ರಾಜಕಾರಣಿಗಳ ಮನೆಗಳ ಮೇಲೆ ಆದಾಯ ತೆರಿಗೆ, ಇ.ಡಿ. ದಾಳಿ ನಡೆಸಿ, ಅವರನ್ನು ತನ್ನತ್ತ ಸೆಳೆಯುತ್ತಿರುವ ಬಿಜೆಪಿ, ಅವರಿಂದಲೂ ದೇಣಿಗೆ ಸಂಗ್ರಹಿಸಿದೆ. ಇದು ನಿಜಕ್ಕೂ ದೊಡ್ಡ ಭ್ರಷ್ಟಾಚಾರ’ ಎಂದು ಆರೋಪಿಸಿದರು.

‘ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು ದೇಣಿಗೆ ಸಂಗ್ರಹಿಸಲು ಅವಕಾಶ ನೀಡಿದ್ದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ. ಆದರೆ, ಬಾಂಡ್‌ ಮೂಲಕವೇ ದೇಣಿಗೆ ಸಂಗ್ರಹಿಸಿದ ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಯನ್ನು ಚುನಾವಣೆಯ ಸಂದರ್ಭವೇ ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಖರ್ಚು ಮಾಡಲೂ ಹಣವಿಲ್ಲದಂತೆ ಮಾಡಿತು’ ಎಂದು ದೂರಿದರು. 

‘ದೇಶದ ಅರ್ಥ ವ್ಯವಸ್ಥೆ ಹದಗೆಡಲಿದೆ ಎಂಬ ಸಬೂಬು ಹೇಳುತ್ತ ರೈತರ ಸಾಲಮನ್ನಾ ಮಾಡಲು ಹಿಂದೇಟು ಹಾಕುತ್ತಿರುವ ಪ್ರಧಾನಿ, ತನ್ನ ಉದ್ಯಮಿ ಸ್ನೇಹಿತರ ₹ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಕೇವಲ ₹ 10,000ದಷ್ಟು ಸಾಲ ಭರಿಸಲಾಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಅವರ ಸಾಲವನ್ನು ಮನ್ನಾ ಮಾಡದವರು ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿದರೆ ಅರ್ಥ ವ್ಯವಸ್ಥೆ ಹಾಳಾಗುವುದಿಲ್ಲವೇ?’ ಎಂದು ಪ್ರಶ್ನಿಸಿದ ಅವರು, ಇದು ಅತ್ಯಂತ ದೊಡ್ಡ  ಭ್ರಷ್ಟಾಚಾರ’ ಎಂದು ದೂರಿದರು.

‘ಖಾಸಗಿಯವರಿಗೆ ನೆರವಾಗುವ ನಿಟ್ಟಿನಲ್ಲಿ ಸಾರ್ವಜನಿಕ ವಲಯದ ಉದ್ಯಮಗಳನ್ನು ಬಂದ್‌ ಮಾಡಲಾಗಿದೆ. ಹೆದ್ದಾರಿ, ಬಂದರು, ಕಲ್ಲಿದ್ದಲು, ವಿದ್ಯುತ್‌, ವಿಮಾನ ನಿಲ್ದಾಣ ಮತ್ತಿತರ ವಲಯದ ಉದ್ಯಮಗಳನ್ನು ಖಾಸಗಿಯವರಿಗೆ ವಹಿಸಲಾಗುತ್ತಿದೆ. ಉದ್ಯೋಗ ಕ್ಷೇತ್ರವು ಖಾಸಗಿಯವರ ವಶದಲ್ಲಿದೆ. ಆದರೆ, ಖಾಸಗಿ ವಲಯದಲ್ಲಿ ಮೀಸಲಾತಿ ದೊರೆಯುತ್ತಿಲ್ಲ’ ಎಂದು ವಿವರಿಸಿದರು.

‘ಚುನಾವಣೆಯ ಸಂದರ್ಭದಲ್ಲೇ ಎರಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಈ ಕುರಿತು ಧ್ವನಿ ಎತ್ತುವವರನ್ನು ಹತ್ತಿಕ್ಕಲಾಗುತ್ತಿದೆ. ಶ್ರೀಮಂತ ಉದ್ಯಮಿಗಳು ಮಾಧ್ಯಮಗಳನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿರುವುದರಿಂದ ಇಂಥ ವ್ಯವಸ್ಥೆಯ ವಿರುದ್ಧ ಮಾಧ್ಯಮಗಳೂ ಧ್ವನಿ ಎತ್ತದಂತಾಗಿದ್ದು ವಿಷಾದನೀಯ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹಾಜರಿದ್ದರು.

ದಾವಣಗೆರೆಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪಕ್ಷದ ಐದು ಗ್ಯಾರಂಟಿ ಯೋಜನೆಗಳ ಕುರಿತು ವಿವರಿಸಿದರು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್
ದಾವಣಗೆರೆಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪಕ್ಷದ ಐದು ಗ್ಯಾರಂಟಿ ಯೋಜನೆಗಳ ಕುರಿತು ವಿವರಿಸಿದರು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT