ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಹೆಸರಲ್ಲಿ ಮತ ಕೇಳಲು ಭಯವೇ?: ಬಿ.ಎಸ್‌.ಯಡಿಯೂರಪ್ಪ ಪ್ರಶ್ನೆ

ಕೇಂದ್ರದಿಂದ 7 ಕೋಟಿ ಉದ್ಯೋಗ ಸೃಷ್ಟಿ
Published 11 ಏಪ್ರಿಲ್ 2024, 15:20 IST
Last Updated 11 ಏಪ್ರಿಲ್ 2024, 15:20 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್‌ ಪಕ್ಷ ರಾಹುಲ್‌ಗಾಂಧಿ ಹೆಸರಲ್ಲಿ ಏಕೆ ಮತ ಕೇಳುತ್ತಿಲ್ಲ? ಅದರ ಬದಲಿಗೆ ರಾಷ್ಟ್ರ ಮಟ್ಟದ ಚುನಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನಲ್ಲಿ ಮತ ಕೇಳುವ ವಿಚಿತ್ರ ಸ್ಥಿತಿಗೆ ಏಕೆ ತಲುಪಿದೆ. ಅವರಲ್ಲಿ ವಿಶ್ವಾಸಾರ್ಹ ನಾಯಕರಿಲ್ಲವೇ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಪ್ರಶ್ನಿಸಿದರು.

‘ಕಾಂಗ್ರೆಸ್‌ಗೆ ಮತ ಹಾಕುವುದು ಎಂದರೆ ದೇಶದ ಅಭದ್ರತೆಗೆ, ಅಸ್ಥಿರತೆಗೆ ಮತ್ತು ಅರಾಜಕತೆಗೆ ಮತ ಹಾಕಿದಂತೆ ಎಂಬುದನ್ನು ಮತದಾರರು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕುಟುಕಿದರು.

ಕಾಂಗ್ರೆಸ್‌ಗೆ ವಿಶ್ವಾಸಾರ್ಹ ನಾಯಕತ್ವವೇ ಇಲ್ಲ ಎಂಬುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ರಾಜ್ಯದಲ್ಲಿ ಸರ್ಕಾರದ ಸಾಧನೆಯ ಬೆಂಬಲವೂ ಇಲ್ಲದೇ ಕೇವಲ ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಜನರ ದಾರಿ ತಪ್ಪಿಸಿ, ವಿವಾದ ಸೃಷ್ಟಿಸಿ ಆ ಮೂಲಕ ಬೆಂಬಲಗಳಿಸಬಹುದು ಎಂಬ ಭ್ರಮೆಯಲ್ಲಿದ್ದಾರೆ ಎಂದು ಯಡಿಯೂರಪ್ಪ ಹರಿಹಾಯ್ದರು.

‘ನಾವು ನರೇಂದ್ರ ಮೋದಿಯವರ ಸರ್ಕಾರದ 10 ವರ್ಷಗಳ ಸಾಧನೆಯ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ. ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂಬುದನ್ನು ಕಾಂಗ್ರೆಸ್‌ ಪಕ್ಷ ಸಂಪೂರ್ಣವಾಗಿ ಮರೆತಂತಿದೆ. ವಿಫಲ ನಾಯಕ ರಾಹುಲ್‌ಗಾಂಧಿ ಹೆಸರು ಪ್ರಸ್ತಾಪಿಸಲೂ ಕಾಂಗ್ರೆಸ್‌ ಹಿಂಜರಿಯುತ್ತಿದೆ’ ಎಂದು ಅವರು ಲೇವಡಿ ಮಾಡಿದರು.

‘ಮಾತು ಮಾತಿಗೂ 2 ಕೋಟಿ ಉದ್ಯೋಗ ಕೊಟ್ಟಿದ್ದೀರಾ ಎಂದು ಕಾಂಗ್ರೆಸ್‌ನವರು ಪದೇ ಪದೇ ಪ್ರಶ್ನೆ ಮಾಡುತ್ತಿದ್ದಾರೆ. 2014 ರಲ್ಲಿ 15.54 ಕೋಟಿ ಭವಿಷ್ಯನಿಧಿ ಖಾತೆ ಇತ್ತು. 2022 ರಲ್ಲಿ ಇದರ ಸಂಖ್ಯೆ 22.5 ಕೋಟಿ ದಾಟಿದೆ. 7 ಕೋಟಿ ಹೊಸ ಉದ್ಯೋಗ ಸೇರ್ಪಡೆ ಆಗಿದೆ. 2014ರಲ್ಲಿ ಎಂಎಸ್‌ಎಂಇ 5 ಕೋಟಿ ಉದ್ಯೋಗ ನೀಡಿದ್ದವು. 2022ರಲ್ಲಿ ಅದರ ಸಂಖ್ಯೆ 6.3 ಕೋಟಿ ದಾಟಿದೆ ಎಂದು ವಿವರಿಸಿದರು.

ಬೆಂಗಳೂರಿನ ಎಚ್‌ಎಎಲ್‌ ಮುಚ್ಚುತ್ತಾರೆ ಎಂದು ರಾಹುಲ್‌ಗಾಂಧಿ ಕಳೆದ ಚುನಾವಣೆ ವೇಳೆ ಸುಳ್ಳು ಪ್ರಚಾರ ಮಾಡಿದ್ದರು. ಆದರೆ, ಇಂದು ಎಚ್‌ಎಎಲ್‌ ₹84 ಸಾವಿರ ಕೋಟಿ ಕಾರ್ಯಾದೇಶ ಪಡೆದಿದೆ. ಇನ್ನೂ ₹50 ಸಾವಿರ ಕೋಟಿ ಕಾರ್ಯಾದೇಶ ಪಡೆಯಲು ಮಾತುಕತೆಗಳು ನಡೆಯುತ್ತಿವೆ. 2023–24ರಲ್ಲಿ ₹29 ಸಾವಿರ ಕೋಟಿ ಆದಾಯಗಳಿಸಿದೆ. ಎಚ್ಎಎಲ್‌ ಬಗ್ಗೆ ಅಪಪ್ರಚಾರ ಮಾಡಿದ ರಾಹುಲ್‌ಗಾಂಧಿ ಕ್ಷಮೆ ಕೇಳುತ್ತಾರಾ? ಅವರಿಂದ ಡಿ.ಕೆ.ಶಿವಕುಮಾರ್‌ ಕ್ಷಮೆ ಕೇಳಿಸುತ್ತಾರಾ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಶಾಸಕ ಬೈರತಿ ಬಸವರಾಜು ಮತ್ತು ವಿ.ಸುನಿಲ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.

‘10 ತಿಂಗಳಲ್ಲಿ ಎಷ್ಟು ಉದ್ಯೋಗ ನೀಡಿದ್ದೀರಿ?’

ಸಿದ್ದರಾಮಯ್ಯ ಸರ್ಕಾರ ಕಳೆದ 10 ತಿಂಗಳಲ್ಲಿ ರಾಜ್ಯದಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು. ಸಚಿವರಾದ ಎಂ.ಬಿ.ಪಾಟೀಲ ಮತ್ತು ಪ್ರಿಯಾಂಕ ಖರ್ಗೆ ಅವರ ‘ಎಕ್ಸ್‌’ ಖಾತೆಗಳಲ್ಲಿ ಮಾತ್ರ ಉದ್ದಿಮೆ ಸ್ಥಾಪನೆ ಆಗಿದೆ. ಕಳೆದ 10 ತಿಂಗಳಿನಲ್ಲಿ ಒಂದೇ ಒಂದು ಉದ್ಯೋಗ ನೀಡದೆ ದಾಖಲೆ ಮಾಡಿರುವುದು ಕಾಂಗ್ರೆಸ್‌ ಸರ್ಕಾರದ ಸಾಧನೆ ಎಂದು ಅವರು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT