ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬದ ವಿವರ ಮರೆಮಾಚಿದ ಸುನಿಲ್‌ ಬೋಸ್‌: ಬಿಜೆಪಿ ದೂರು

Published 5 ಏಪ್ರಿಲ್ 2024, 14:56 IST
Last Updated 5 ಏಪ್ರಿಲ್ 2024, 14:56 IST
ಅಕ್ಷರ ಗಾತ್ರ

ಚಾಮರಾಜನಗರ: ‘ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಸುನಿಲ್‌ ಬೋಸ್‌ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಮ್ಮ ಕುಟುಂಬದ ಸದಸ್ಯರು, ಅವರು ಹೊಂದಿರುವ ಆಸ್ತಿಯ ವಿವರಗಳನ್ನು ನೀಡಿಲ್ಲ. ಹೀಗಾಗಿ, ಅವರ ನಾಮಪತ್ರ ತಿರಸ್ಕರಿಸಬೇಕು’ ಎಂದು ಬಿಜೆಪಿಯು ಜಿಲ್ಲಾ ಚುನಾವಣಾ ಅಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಅವರಿಗೆ ಶುಕ್ರವಾರ ಸಂಜೆ ದೂರು ನೀಡಿದೆ. 

ಬಿಜೆಪಿ ಅಭ್ಯರ್ಥಿ ಎಸ್‌.ಬಾಲರಾಜು ಅವರ ಚುನಾವಣಾ ಏಜೆಂಟ್‌ ಆಗಿರುವ ಜಿ.ನಾರಾಯಣ ಪ್ರಸಾದ್‌ ಈ ದೂರು ನೀಡಿದ್ದಾರೆ. 

ದೂರಿನಲ್ಲೇನಿದೆ?: ‘ಸುನಿಲ್ ಬೋಸ್ ಅವರು ಎಂ.ಕೆ.ಸವಿತಾ ಅವರನ್ನು ಮದುವೆಯಾಗಿ ವೈವಾಹಿಕ ಜೀವನವನ್ನು ನಡೆಸುತ್ತಿದ್ದು, ಭುವಿ ಎಂಬ ಮಗಳು ಇದ್ದಾಳೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಲ್ಲಿಸಬೇಕಾದ ಪ್ರಮಾಣ ಪತ್ರದಲ್ಲಿ (ನಮೂನೆ 26) ಅವರು ಈ ಮಾಹಿತಿ ನೀಡಿಲ್ಲ. ಹೆಂಡತಿ ಮಕ್ಕಳ ಹಾಗೂ ಹಿಂದೂ ಅವಿಭಕ್ತ ಕುಟುಂಬದವರ ಬಗ್ಗೆ (ತಂದೆ-ತಾಯಿ) ಪ್ರಮುಖವಾದ ಮಾಹಿತಿ ಮರೆಮಾಚಿ ಸುಳ್ಳು ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಹೆಂಡತಿ, ಮಕ್ಕಳ ಹಾಗೂ ತಂದೆ ತಾಯಿಯವರ ಚರ-ಸ್ಥಿರ ಆಸ್ತಿಗಳ ಬಗ್ಗೆ ಪೋಷಣೆ ಮಾಡಿಲ್ಲ. ಹೀಗಾಗಿ, ಪ್ರಮಾಣ ಪತ್ರವು ಅಸಿಂಧುವಾಗಿದೆ. ಹಾಗಾಗಿ, ಸುನಿಲ್‌ ಬೋಸ್‌ ನಾಮಪತ್ರವನ್ನು ತಿರಸ್ಕರಿಸಬೇಕು’ ಎಂದು ನಾರಾಯಣ ಪ್ರಸಾದ್‌ ಮನವಿಯಲ್ಲಿ ತಿಳಿಸಿದ್ದಾರೆ. 

ತಮ್ಮ ಹೇಳಿಕೆಗೆ ಪೂರಕವಾದ ಫೋಟೊಗಳನ್ನೂ ದೂರಿನೊಂದಿಗೆ ಅವರು ಸಲ್ಲಿಸಿದ್ದಾರೆ. 

ನಾಮಪತ್ರ ಪರಿಶೀಲನೆ ಕಾರ್ಯ ಮಧ್ಯಾಹ್ನ 3 ಗಂಟೆಗೆ ಮುಕ್ತಾಯಗೊಂಡಿದ್ದು, ನಾರಾಯಣ ಪ್ರಸಾದ್‌  ಅವರು ಸಂಜೆ ದೂರು ನೀಡಿದ್ದಾರೆ. 

ಪ್ರತಿಕ್ರಿಯೆ ಪಡೆಯಲು ಸುನಿಲ್‌ ಬೋಸ್‌ ಅವರಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ. 

22 ನಾಮಪತ್ರಗಳು ಸ್ವೀಕೃತ: ಕ್ಷೇತ್ರದಲ್ಲಿ 25 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಮೂವರ ನಾಮಪತ್ರ ತಿರಸ್ಕೃತವಾಗಿದ್ದು, ಸುನಿಲ್‌ ಬೋಸ್‌, ಎಸ್‌.ಬಾಲರಾಜು ಸೇರಿದಂತೆ 22 ಮಂದಿಯ ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT