ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನಾಭಿ‍ಪ್ರಾಯ ಬಿಡಿ, ಯದುವೀರ್‌ ಬಗ್ಗೆ ಮಾತನಾಡಬೇಡಿ: ಸಿಎಂ ಸೂಚನೆ

Published 24 ಮಾರ್ಚ್ 2024, 16:50 IST
Last Updated 24 ಮಾರ್ಚ್ 2024, 16:50 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು–ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವುದು ನನಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಭಿನ್ನಾಭಿ‍ಪ್ರಾಯಗಳನ್ನು ಬದಿಗಿಟ್ಟು ಪಕ್ಷಕ್ಕೋಸ್ಕರ ಕೆಲಸ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಮುಖಂಡರಿಗೆ ತಾಕೀತು ಮಾಡಿದ್ದಾರೆ.

ಇಲ್ಲಿ ಭಾನುವಾರ ಸಭೆ ನಡೆಸಿದ ಅವರು, ‘ಪಕ್ಷಕ್ಕಾಗಿ ಕೆಲಸ ಮಾಡಿದವರಿಗೆ ತಕ್ಕುದಾದ ಗೌರವ ದೊರೆಯಲಿದೆ. ಯಾರೂ ಮೈಮರೆಯಬಾರದು’ ಎಂದು ಸೂಚಿಸಿದ್ದಾರೆ.

‘ಬಿಜೆಪಿ–ಜೆಡಿಎಸ್‌ ಮೈತ್ರಿಯಿಂದ ಅಸಮಾಧಾನಗೊಂಡಿರುವವರನ್ನು ಪಕ್ಷಕ್ಕೆ ಕರೆತನ್ನಿ. ಅವರ ಶಕ್ತಿಯನ್ನೂ ಬಳಸಿಕೊಳ್ಳಿ. ಹಲವರಿಗೆ ಪಕ್ಷದಲ್ಲಿ, ನಿಗಮ–ಮಂಡಳಿಗಳಲ್ಲಿ ಅವಕಾಶ ಸಿಕ್ಕಿದೆ. ಅವರೆಲ್ಲರೂ ಶ್ರಮ ಹಾಕಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು; ಅದರಿಂದ ಆಗಿರುವ ಅನುಕೂಲವನ್ನು ಮನೆ ಮನೆಗೆ ಮುಟ್ಟಿಸಬೇಕು. ಮತದಾರರಿಗೆ ಮನವರಿಕೆ ಮಾಡಿಕೊಡಬೇಕೆಂದು ನಿರ್ದೇಶನ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಬಿಜೆಪಿಯಷ್ಟೇ ನಮ್ಮ ಗುರಿ. ಪ್ರಚಾರ ಮಾಡುವಾಗ ಬಳಸುವ ಪದಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಪ್ರತಿಸ್ಪರ್ಧಿ ಯದುವೀರ್‌ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಭಾವನಾತ್ಮಕ ಸಂಗತಿಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವಲ್ಲಿ ಬಿಜೆಪಿಯವರು ನಿಸ್ಸೀಮರು. ಅದಕ್ಕೆ ಅವಕಾಶ ಕೊಡಬೇಡಿ’ ಎಂದು ಸೂಚ್ಯವಾಗಿ ತಿಳಿಸಿದರು ಎಂದು ಗೊತ್ತಾಗಿದೆ.

‘ನಮ್ಮ ಸರ್ಕಾರ ಮೈಸೂರಿಗೆ ನೀಡಿರುವ ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಕೇಂದ್ರ ಸರ್ಕಾರದ ದುರಾಡಳಿತವನ್ನು ಹೆಚ್ಚು ಹೆಚ್ಚು ತಿಳಿಸಬೇಕು. ಇದಕ್ಕಾಗಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಬೇಕು. ಹೆಚ್ಚು ಹೆಚ್ಚು ಜನರನ್ನು ತಲುಪಲು ಅಗತ್ಯವಾದ ಕಾರ್ಯಯೋಜನೆ ರೂಪಿಸಿಕೊಳ್ಳಬೇಕು’ ಎಂದು ಟಾಸ್ಕ್‌ ನೀಡಿದರು.

‘ನಾವು ಗೆದ್ದಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ನಮಗೆ ಲೀಡ್ ಬರುವಂತೆ ನೋಡಿಕೊಳ್ಳಬೇಕು’ ಎಂದು ಶಾಸಕರಿಗೆ ಗುರಿ ನೀಡಿದರು ಎಂದು ತಿಳಿದುಬಂದಿದೆ.

ಎಚ್‌.ಡಿ. ಕೋಟೆ ತಾಲ್ಲೂಕಿನ ಖಾಸಗಿ ರೆಸಾರ್ಟ್‌ನಲ್ಲಿ ಅವರು ವಾಸ್ತವ್ಯ ಹೂಡಿದರು. ಅಲ್ಲಿಯೂ ತಮ್ಮ ಆಪ್ತರೊಂದಿಗೆ ಚುನಾವಣಾ ರಣತಂತ್ರದ ಕುರಿತು ಚರ್ಚಿಸಿದರು. ತವರಿನಲ್ಲಿ ಮೂರು ದಿನಗಳವರೆಗೆ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆ ಎಚ್‌.ಡಿ. ಕೋಟೆಯ ರೆಸಾರ್ಟ್‌ನಲ್ಲಿ ಭಾನುವಾರ ವಾಸ್ತವ್ಯ ಹೂಡಿದರು. ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಶಾಸಕ ಅನಿಲ್ ಚಿಕ್ಕಮಾದು ಮೊದಲಾದವರು ಜೊತೆಗಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT