ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಹಂಚಿಕೆ ಆರೋಪ: ಯದುವೀರ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

Published 21 ಏಪ್ರಿಲ್ 2024, 10:40 IST
Last Updated 21 ಏಪ್ರಿಲ್ 2024, 10:40 IST
ಅಕ್ಷರ ಗಾತ್ರ

ಬೆಂಗಳೂರು: ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕೊಡುಗು–ಮೈಸೂರು ಲೋಕಸಭಾ ಕ್ಷೇತ್ರದ ಬಿಜೆ‍ಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ವಿರುದ್ಧ ಚುನಾವಣಾ ಆಯೋಗಕ್ಕೆ ಕೆಪಿಸಿಸಿ ದೂರು ನೀಡಿದೆ.

ಈ ಬಗ್ಗೆ ಶನಿವಾರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದ್ದು, ಚುನಾವಣಾ ಪ್ರಕ್ರಿಯೆಯ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಗೆ ತೀವ್ರ ಅಪಾಯವನ್ನುಂಟುಮಾಡುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಕಾರ್ಯದಲ್ಲಿ ಒಡೆಯರ್ ತೊಡಗಿದ್ದಾರೆ’ ಎಂದು ಹೇಳಿದೆ.

‘ತಮ್ಮ ಚುನಾವಣಾ ಪ್ರಚಾರಕ್ಕೆ ಬೆಂಬಲ ಕೋರಲು ಹಾಗೂ ಪ್ರಭಾವ ಬೀರಲು ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಿಗಳಾಗಿರುವ ಹಲವು ಮಂದಿಯೊಂದಿಗೆ ಒಡೆಯರ್‌ ರಹಸ್ಯ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ, ನೋಟ್‌ಬುಕ್‌, ಪೆನ್, ಚಾಕೊಲೇಟ್‌, ಸೀರೆ ಹಾಗೂ ಸಿಹಿತಿಂಡಿಗಳನ್ನು ಹಂಚುವ ಮೂಲಕ ಸಾಮಾಜಿಕ ಜಾಲತಾಣ ಇನ್‌ಫ್ಲುವೆನ್ಸರ್‌ಗಳನ್ನು ಓಲೈಕೆ ಮಾಡುವ ಪ್ರಯತ್ನ ಮಾಡಿದ್ದಾರೆ’ ಎಂದು ಕಾಂಗ್ರೆಸ್ ದೂರಿದೆ.‌

ತಮ್ಮ ಬಗ್ಗೆ ಪ್ರಚಾರ ನಡೆಸಲು ಗಣನೀಯ ಪ್ರಮಾಣದ ಹಣವನ್ನೂ ಹಂಚಲಾಗಿದೆ ಎಂದು ಕಾಂಗ್ರೆಸ್‌ ದೂರಿನಲ್ಲಿ ಆರೋಪಿಸಿದೆ.

ಪ್ರಭಾವ ಬೀರಲು ಹಣ ಹಂಚುವುದು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯ ಮೂಲಭೂತ ತತ್ವಗಳನ್ನು ಉಲ್ಲಂಘಿಸುವುದಲ್ಲದೇ, ಭಾರತೀಯ ದಂಡ ಸಂಹಿತೆಯ ಜನಪ್ರತಿನಿಧಿ ಕಾಯ್ದೆ 1951ರಡಿ ಗಂಭೀರ ಅಪರಾಧವಾಗಿದೆ ಎಂದು ಕಾಂಗ್ರೆಸ್‌ ಪತ್ರದಲ್ಲಿ ಉಲ್ಲೇಖಿಸಿದೆ.

ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದೇ ಆದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ. ಅಲ್ಲದೇ ಚುನಾವಣೆ ಪ್ರಕ್ರಿಯೆಯು ಮುಕ್ತ, ನ್ಯಾಯಯುತ, ಮತ್ತು ಭ್ರಷ್ಟ ಆಚರಣೆಗಳಿಂದ ಹೊರತಾಗಿರಬೇಕು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT