ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls | ಮೈಸೂರು: ಸಾರ್ವಜನಿಕರ ಆಕರ್ಷಿಸುತ್ತಿವೆ ಗೋಡೆ ಬರಹ

ಮತದಾನದ ಜಾಗೃತಿಗೆ ಆಕರ್ಷಕ ಬರಹ, ಘೋಷಣೆಯ ಚಿತ್ರ
Published 20 ಏಪ್ರಿಲ್ 2024, 15:19 IST
Last Updated 20 ಏಪ್ರಿಲ್ 2024, 15:19 IST
ಅಕ್ಷರ ಗಾತ್ರ

ಮೈಸೂರು: ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಆಕರ್ಷಕ ಗೋಡೆ ಬರಹ ಹಾಗೂ ಚಿತ್ರಗಳ ಮೂಲಕ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ.

ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಮತದಾನದ ಮಹತ್ವ ಹಾಗೂ ಕಡ್ಡಾಯವಾಗಿ ತಮ್ಮ ಹಕ್ಕು ಚಲಾಯಿಸುವಂತೆ ಜಿಲ್ಲಾ ಸ್ವೀಪ್‌ ಸಮಿತಿ, ನಗರ ಪಾಲಿಕೆಯಿಂದ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಚಾಮರಾಜನಗರ, ನರಸಿಂಹರಾಜ ಹಾಗೂ ಕೃಷ್ಣರಾಜನಗರ ಕೇತ್ರಗಳಲ್ಲಿನ ವಾರ್ಡ್‌ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ಆವರಣ ಗೋಡೆಗಳ ಮೇಲೆ ಚುನಾವಣೆಗೆ ಸಂಬಂಧಪಟ್ಟ ಸುಂದರ ಚಿತ್ರಗಳನ್ನು ಬಿಡಿಸಲಾಗಿದೆ. ಆಕರ್ಷಕ ಬರಹ ಬರೆಸಲಾಗಿದ್ದು, ಎಲ್ಲರನ್ನು ಸೆಳೆಯುತ್ತಿವೆ.

ವಿವಿಧೆಡೆ ವಾಲ್‌ ಪೇಂಟಿಂಗ್: ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಜಾನಪದ ಕಲೆ, ಕೈ ಗುರುತು, ಚಿಟ್ಟೆ, ಯಕ್ಷಗಾನ– ಡೊಳ್ಳು ಕುಣಿತ, ತ್ರಿವರ್ಣ ಧ್ವಜ, ಅಶೋಕ ಚಕ್ರ, ಹೂಗಳನ್ನು ಒಳಗೊಂಡ ಚಿತ್ರಗಳನ್ನು ಗೋಡೆಗಳ ಮೇಲೆ ಬಿಡಿಸಲಾಗಿದೆ.

ಆಕರ್ಷಕ ಬರಹಗಳು: ‘ನಿಮ್ಮ ಅಮೂಲ್ಯವಾದ ಮತ ಚಲಾಯಿಸಿ’, ‘ಬನ್ನಿ ಮತ ಚಲಾಯಿಸಿ, ಚಲಾಯಿಸುವ ಹಕ್ಕು ನಿಮ್ಮ ಕೈಯಲ್ಲಿದೆ’, ‘ನಮ್ಮ ದೇಶ ನಮ್ಮ ಹೆಮ್ಮೆ’, ‘ದೇಶದ ಭವಿಷ್ಯಕ್ಕಾಗಿ ಮತ ಹಾಕಿ, ನಮ್ಮ ಮತದಾನ ಮಹತ್ವದ್ದು’, ‘ಮತದಾನದ ದಿನ ಏಪ್ರಿಲ್‌ 26’, ‘ಲೋಸಭಾ ಚುನಾವಣೆ–2024, ಮತದಾನಕ್ಕಿಂತ ಇನ್ನೊಂದಿಲ್ಲ, ಮತ ಹಾಕಿ’, ‘ಕೇಳ್ರಪ್ಪೊ ಕೇಳಿ ನಿಮ್ಮ ಮತ ತಪ್ಪದೆ ಚಲಾಯಿಸಿ’, ‘ನನ್ನ ಮತ ನನ್ನ ಭವಿಷ್ಯ’, ನಮ್ಮ ಮತ ಅಮೂಲ್ಯವಾದದ್ದು, ಬನ್ನಿ ಮತದಾನ ಕೇಂದ್ರಕ್ಕೆ’, ‘ನಿಮ್ಮ ಪ್ರತಿಯೊಂದು ಮತ–ದೇಶಕ್ಕೆ ಹಿತ’, ‘ತಪ್ಪದೇ ಮತದಾನ ಮಾಡಿ’, ‘ಮತದಾನ ಒಂದು ಶಕ್ತಿ’, ‘ನಿಮ್ಮ ಮತ ರಾಷ್ಟ್ರಕ್ಕೆ ಹಿತ’ ಎಂಬ ಅನೇಕ ಬರಹಗಳನ್ನು ಬರೆಯಲಾಗಿದೆ.

ಮತಗಟ್ಟೆಯಲ್ಲಿಯೂ ಮತಗಟ್ಟೆ ಹಾಗೂ ಸರತಿ ಸಾಲಿನಲ್ಲಿ ನಿಂತಿರುವ ಮತದಾರರು, ವಿವಿಧ ಸಮುದಾಯಗಳ ಜನರ ಚಿತ್ರಗಳನ್ನೂ ಬಿಡಿಸಲಾಗಿದೆ. ಜಾಗೃತಿ ಬರಹ ಬರೆಯಲಾಗಿದೆ.

ಮೈಸೂರಿನ ಶೇಷಾದ್ರಿ ಅಯ್ಯರ ರಸ್ತೆಯಲ್ಲಿನ ನಗರ ಪಾಲಿಕೆ ವಲಯ– 6 ಕಚೇರಿ ಕಾಂಪೌಂಡ್‌ ಮೇಲೆ ಮತದಾನ ಜಾಗೃತಿಗಾಗಿ ರಚಿಸಲಾಗಿರುವ ಚಿತ್ತಾಕರ್ಷಕ ಬರಹ
ಮೈಸೂರಿನ ಶೇಷಾದ್ರಿ ಅಯ್ಯರ ರಸ್ತೆಯಲ್ಲಿನ ನಗರ ಪಾಲಿಕೆ ವಲಯ– 6 ಕಚೇರಿ ಕಾಂಪೌಂಡ್‌ ಮೇಲೆ ಮತದಾನ ಜಾಗೃತಿಗಾಗಿ ರಚಿಸಲಾಗಿರುವ ಚಿತ್ತಾಕರ್ಷಕ ಬರಹ

‘ಶೇ 100ರಷ್ಟು ಮತದಾನ ಉದ್ದೇಶ’

‘ಯಾರೊಬ್ಬರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಶೇ 100ರಷ್ಟು ಮತದಾನ ಚಲಾಯಿಸಬೇಕು ಎನ್ನುವ ಉದ್ದೇಶ ನಮ್ಮದು. ಇದಕ್ಕಾಗಿ ಬೀದಿನಾಟಕ ರಂಗೋಲಿ ಸ್ಪರ್ಧೆ ಚಿತ್ರಕಲಾ ಸ್ಪರ್ಧೆ ಜಾಥಾ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸ್ವೀಪ್‌ ವತಿಯಿಂದ ಹಮ್ಮಿಕೊಳ್ಳಲಾಗಿದೆ’ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ವೆಂಕಟರಾಜು ಹೇಳಿದರು. ‘ಚಾಮರಾಜ ಕೇತ್ರದ 3 4 5 6 ಮತ್ತು 7ರ ವಲಯದಲ್ಲಿ ಮತದಾನ ಜಾಗೃತಿಗಾಗಿ ವಿಶೇಷ ಆಕರ್ಷಕ ಚಿತ್ರಗಳನ್ನು ಕಲಾವಿದರಿಂದ ರಚಿಸಲಾಗಿದೆ. ವಲಯ 6ರಲ್ಲಿ ಸೆಲ್ಫೀ ಪಾಯಿಂಟ್‌ ಮಾಡಲಾಗಿದ್ದು ಹಸ್ತಾಕ್ಷರ ಸಂಗ್ರಹಕ್ಕೆ ಈಗಾಗಲೇ ಚಾಲನೆಯೂ ನೀಡಲಾಗಿದೆ. ಇಲ್ಲಿನ ಸ್ವಾಗತ ಕಮಾನು ಸಹ ಎಲ್ಲರನ್ನೂ ಸೆಳೆಯುತ್ತಿದೆ’ ಎಂದರು.

ಬಿರು ಬಿಸಿಲಿನಲ್ಲಿ ಚಿತ್ರ ರಚನೆ

‘ಮತದಾನ ಜಾಗೃತಿಗಾಗಿ ಬಿರು ಬಿಸಿಲಿನಲ್ಲಿ ಚಿತ್ರ ಬಿಡಿಸಿರುವುದು ಸವಾಲಿನ ಕೆಲಸ. ಒಂದು ವಾರದಲ್ಲಿ 7–8 ಜನರ ತಂಡದಿಂದ ಗೋಡೆಗಳ ಮೇಲೆ ಆಕರ್ಷಿತವಾಗಿ ಚಿತ್ರಗಳನ್ನು ಬಿಡಿಸಿದ್ದೇವೆ’ ಎಂದು ನಗರದ ಈಗಲ್‌ ಆರ್ಟ್ಸ್‌ನ ಕಲಾವಿದ ಅಶ್ವತ್ಥ ನಾರಾಯಣ ತಿಳಿಸಿದರು. ‘ಮತದಾನದ ಬಗ್ಗೆ ಜನರಲ್ಲಿ ತಾತ್ಸಾರ ಮನೋಭಾವ ಹೆಚ್ಚಿದೆ. ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ. ವಿಶ್ವದಲ್ಲಿ ಜನಸಂಖ್ಯೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಾಗೂ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ಅದರಲ್ಲಿ ನಮ್ಮದು ಒಂದು ಅಳಿಲು ಸೇವೆಯಾಗಿದೆ. ಈ ಚಿತ್ರಗಳನ್ನು ನೋಡಿದವರು ಮತದಾನದಂದು ಮನೆಯಿಂದ ಹೊರಬಂದು ಮತ ಚಲಾಯಿಸಬೇಕು ಎನ್ನುವ ಹೆಬ್ಬಯಿಕೆ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT