ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಲಿನ ಭಯ ಸಚಿವರ ಸ್ಪರ್ಧೆ ಇಲ್ಲ: ಬಿ.ವೈ. ವಿಜಯೇಂದ್ರ

Published 23 ಮಾರ್ಚ್ 2024, 22:36 IST
Last Updated 23 ಮಾರ್ಚ್ 2024, 22:36 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಸಚಿವರನ್ನೇ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್‌ ಮುಂದಾಗಿತ್ತು. ಆದರೆ, ಸೋಲಿನ ಭಯದ ಕಾರಣದಿಂದ ಒಬ್ಬ ಸಚಿವರೂ ಸ್ಪರ್ಧಿಸಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಅರಮನೆ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ರಾಜ್ಯ ಮಟ್ಟದ ಚುನಾವಣಾ ನಿರ್ವಹಣಾ ಸಮಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಸಾಮಾನ್ಯವಾಗಿ ಹತ್ತು ವರ್ಷಗಳ ಕಾಲ ನಿರಂತರವಾಗಿ ಅಧಿಕಾರದಲ್ಲಿರುವ ಪಕ್ಷಕ್ಕೆ ಆಡಳಿತ ವಿರೋಧಿ ಅಲೆಯ ಬಿಸಿ ತಟ್ಟುತ್ತದೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಈಗಲೂ ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿದೆ’ ಎಂದರು.

ಮುಂದಿನ 60 ದಿನಗಳು ಸವಾಲಿನ ಕಾಲ. ರಾಜ್ಯ, ಜಿಲ್ಲೆ, ಮಂಡಲ ಮತ್ತು ಮತಗಟ್ಟೆ ಹಂತದ ಚುನಾವಣಾ ನಿರ್ವಹಣಾ ಸಮಿತಿಯ ಸದಸ್ಯರು ಸಮಯ ವ್ಯರ್ಥ ಮಾಡದೇ ಕೆಲಸ ಮಾಡಬೇಕು ಎಂದರು.

ರಾಜ್ಯದಲ್ಲಿ ಬಿಜೆಪಿಯ ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ ದಾಸ್‌ ಅಗರ್‌ವಾಲ್‌ ಮಾತನಾಡಿ, ‘ಒಂದು ತಿಂಗಳಿನಿಂದ ಕರ್ನಾಟಕದಲ್ಲಿದ್ದೇನೆ. ಇಲ್ಲಿನ ಕಾರ್ಯಕರ್ತರಲ್ಲಿ ಚುನಾವಣೆಯ ಉತ್ಸಾಹ ಜೋರಾಗಿದೆ. ಸಣ್ಣಪುಟ್ಟ ವೈಮನಸ್ಸುಗಳನ್ನು ಮರೆತು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವತ್ತ ಗಮನಹರಿಸಬೇಕು’ ಎಂದು ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ವಿ. ಸುನಿಲ್‌ ಕುಮಾರ್, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಪ್ರೀತಂ ಗೌಡ, ಪಿ.ರಾಜೀವ್, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಭಾರತಿ ಶೆಟ್ಟಿ, ಕೇಶವ ಪ್ರಸಾದ್ ಉಪಸ್ಥಿತರಿದ್ದರು.

‘ನಮ್ಮದು ಕುಟುಂಬ ರಾಜಕಾರಣವಲ್ಲ’

‘ನಮ್ಮದು ಕುಟುಂಬ ರಾಜಕಾರಣ ಅಲ್ಲ. ನನ್ನನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನನ್ನಾಗಿ ನೇಮಿಸಿರುವುದರ ಹಿಂದಿನ ಕಾರಣವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೇ ಹೇಳಿದ್ದಾರಲ್ಲ’ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಲೋಕಸಭಾ ಚುನಾವಣೆಗಾಗಿ ಆರಂಭಿಸಿರುವ ಮಾಧ್ಯಮ ಕೇಂದ್ರವನ್ನು ಶನಿವಾರ ಉದ್ಘಾಟಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯಲ್ಲಿನ ಕುಟುಂಬ ರಾಜಕಾರಣದ ಬಗ್ಗೆ ಪಕ್ಷದ ನಾಯಕರ ಟೀಕೆಗಳಿಗೆ ಉತ್ತರಿಸಿದರು.

‘ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದೆ. ಆಗ, ಪಕ್ಷದ ವರಿಷ್ಠರು ಒಪ್ಪಿಗೆ ಸೂಚಿಸಲಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಪಕ್ಷದ ‘ಕೋರ್‌ ಕಮಿಟಿ’ಯು ನನ್ನನ್ನು ವಿಧಾನ ಪರಿಷತ್‌ ಸದಸ್ಯನನ್ನಾಗಿ ಮಾಡಲು ತೀರ್ಮಾನಿಸಿತ್ತು. ಆಗಲೂ ವರಿಷ್ಠರು ಒಪ್ಪಿರಲಿಲ್ಲ’ ಎಂದರು.

‘ಎರಡೂ ಸಂದರ್ಭಗಳಲ್ಲಿ ಪಕ್ಷದ ತೀರ್ಮಾನವನ್ನು ಒಪ್ಪಿಕೊಂಡಿದ್ದೆ. ನಂತರದಲ್ಲೂ ಪಕ್ಷದ ತೀರ್ಮಾನದಂತೆ ನಡೆದುಕೊಂಡಿದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT