ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಲೋಕಸಭಾ ಕ್ಷೇತ್ರ: ಮೋದಿ ಅಲೆಯೋ, ಗ್ಯಾರಂಟಿ ಸೆಲೆಯೋ? 

Published 29 ಏಪ್ರಿಲ್ 2024, 0:37 IST
Last Updated 29 ಏಪ್ರಿಲ್ 2024, 0:37 IST
ಅಕ್ಷರ ಗಾತ್ರ

ಹಾವೇರಿ: ಹಿಂದಿನ ಮೂರು ಲೋಕಸಭಾ ಚುನಾವಣೆಗಳಲ್ಲಿ ‘ಹ್ಯಾಟ್ರಿಕ್‌ ಗೆಲುವು’ ಸಾಧಿಸಿರುವ ಬಿಜೆಪಿ ಪಾಲಿಗೆ ಹಾವೇರಿ ಲೋಕಸಭಾ ಕ್ಷೇತ್ರ ಭದ್ರಕೋಟೆ ಎನಿಸಿದೆ. ಈ ‘ಕೇಸರಿ ಕೋಟೆ’ಯಲ್ಲಿ ಗೆಲುವಿನ ಕಹಳೆ ಮೊಳಗಿಸಲು ಕಾಂಗ್ರೆಸ್‌ ನಾಯಕರು ರಣತಂತ್ರ ಹೆಣೆದಿದ್ದಾರೆ.

ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಹಾವೇರಿ ಜಿಲ್ಲೆಯು, 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದ ಬಳಿಕ ಹಾವೇರಿ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಮೂರು ಚುನಾವಣೆಗಳಲ್ಲೂ ಜಯಭೇರಿ ಬಾರಿಸಿದ್ದ ಶಿವಕುಮಾರ ಉದಾಸಿ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಪುತ್ರ ಕಾಂತೇಶಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್‌ ಕೊಡಿಸಲು ನಡೆಸಿದ ಪ್ರಯತ್ನ ಕೈಗೂಡಲಿಲ್ಲ.  

ಗೆಲುವಿನ ಓಟವನ್ನು ಮುಂದುವರಿಸಲು ಬಿಜೆಪಿಯು ಈ ಬಾರಿ ಹಾಲಿ ಶಾಸಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಿದೆ. 2008ರಿಂದ ಶಿಗ್ಗಾವಿ–ಸವಣೂರು ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿರುವ ಬೊಮ್ಮಾಯಿ ಅವರು ಸಚಿವರು ಮತ್ತು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಈಗ ರಾಜ್ಯ ರಾಜಕಾರಣದಿಂದ ಕೇಂದ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ.

ಎರಡು ಬಾರಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ಮತ್ತು ಒಮ್ಮೆ ನಾಮಧಾರಿ ರೆಡ್ಡಿ ಸಮುದಾಯಕ್ಕೆ ಟಿಕೆಟ್‌ ನೀಡಿ ಕೈ ಸುಟ್ಟುಕೊಂಡ ಕಾಂಗ್ರೆಸ್‌ ಈ ಬಾರಿ ಪ್ರಬಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಸ್ಪರ್ಧೆಗಿಳಿಸಿದೆ. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರ ಪುತ್ರ ಆನಂದಸ್ವಾಮಿ ಅವರು ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾರೆ. 

ಕಣದಲ್ಲಿ 14 ಅಭ್ಯರ್ಥಿಗಳಿದ್ದರೂ, ಬಿಜೆಪಿ–ಕಾಂಗ್ರೆಸ್‌ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬೊಮ್ಮಾಯಿ– ಆನಂದಸ್ವಾಮಿ ಇವರಿಬ್ಬರೂ ಪ‍ರಸ್ಪರ ಆರೋಪ, ನಿಂದನೆ, ವಾಗ್ದಾಳಿ ನಡೆಸದೆ, ತಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳ ಮೇಲೆ ಮತ ಕೇಳುತ್ತಿದ್ದಾರೆ.

‘ಕಾಂಗ್ರೆಸ್‌ ಗ್ಯಾರಂಟಿ’ ಮತ್ತು ‘ಮೋದಿ ಗ್ಯಾರಂಟಿ’ ನಡುವೆ ತುರುಸಿನ ಪೈಪೋಟಿ ಇದೆ. ‘ಕೇಸರಿ’ ಕಲಿಗಳು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯನ್ನು ಬಣ್ಣಿಸಿ ಮತ ಕೇಳಿದರೆ, ‘ಕೈ’ ನಾಯಕರು ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೇಲೆ ಮತ ಫಸಲು ಬಯಸಿದ್ದಾರೆ.

8 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ ಒಂದು ಕ್ಷೇತದಲ್ಲಿ ಬಿಜೆಪಿ ಗೆದ್ದಿದ್ದು, ಉಳಿದ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರ ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಲ್ಲದಿರುವುದು ಗಮನಾರ್ಹ. ಶಾಸಕರ ಸಂಖ್ಯಾಬಲ ಕಾಂಗ್ರೆಸ್‍ಗೆ ಅನುಕೂಲಕರ ವಾತಾವರಣ ಕಲ್ಪಿಸಿದೆ. ‘ಈ ಸಂಖ್ಯಾಬಲ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರುವುದಿಲ್ಲ’ ಎಂಬುದು ಬಿಜೆಪಿಯವರ ವಾದ. 

ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವಳಿ ಇಲ್ಲದ ಕಾರಣ ಮೈತ್ರಿಯಿಂದ ಬಿಜೆಪಿಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂಬಂತಾಗಿದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದಕ್ಕೆ‌ ಗದಗ ಜಿಲ್ಲೆಯ ಜೆಡಿಎಸ್‌ನ ಕೆಲ ನಿಷ್ಠಾವಂತ ಕಾರ್ಯಕರ್ತರು ಪಕ್ಷ ತೊರೆದಿದ್ದಾರೆ. ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಮತದಾರರೇ ನಿರ್ಣಾಯಕ. ಇದೇ ಕಾರಣಕ್ಕೆ ಎರಡೂ ಪಕ್ಷಗಳು ಅದೇ ಸಮುದಾಯದ ಅಭ್ಯರ್ಥಿಗೆ ಮಣೆ ಹಾಕಿವೆ. 

25 ವರ್ಷಗಳಿಂದ ಬೊಮ್ಮಾಯಿ ಅವರಿಗೆ ಕ್ಷೇತ್ರದ ಜತೆ ನಂಟಿದೆ. ಆನಂದಸ್ವಾಮಿ ಅವರು ಒಂದು ವರ್ಷದಿಂದ ಪಕ್ಷದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. 

‘ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ಬೊಮ್ಮಾಯಿಯವರ ಕೊಡುಗೆ ಶೂನ್ಯ’ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸುತ್ತಾರೆ. ಇದಕ್ಕೆ ಬೊಮ್ಮಾಯಿವರು, ‘ಏತ ನೀರಾವರಿ ಯೋಜನೆಯಿಂದ ಒಂದು ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿದೆ’ ಎಂದು ತಿರುಗೇಟು ನೀಡುತ್ತಾರೆ. ಬಿಜೆಪಿ– ಕಾಂಗ್ರೆಸ್‌ ನಡುವಿನ ಹಗ್ಗ–ಜಗ್ಗಾಟದಲ್ಲಿ ಗೆಲುವಿನ ಹೂ ಮಾಲೆ ಯಾರಿಗೆ ಎಂಬುದನ್ನು ಕಾದು ನೋಡಬೇಕಿದೆ. 

ಶಿಂಗಟಾಲೂರು ಏತ ನೀರಾವರಿ ಯೋಜನೆಯ ಹನಿ ನೀರಾವರಿ ಪದ್ಧತಿಗೆ ಅಳವಡಿಸುವ ಪೈಪ್‌ಗಳು ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ರೈತರೊಬ್ಬರ ಜಮೀನಿನಲ್ಲಿ ನಿರರ್ಥಕವಾಗಿ ಬಿದ್ದಿರುವ ದೃಶ್ಯ
ಶಿಂಗಟಾಲೂರು ಏತ ನೀರಾವರಿ ಯೋಜನೆಯ ಹನಿ ನೀರಾವರಿ ಪದ್ಧತಿಗೆ ಅಳವಡಿಸುವ ಪೈಪ್‌ಗಳು ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ರೈತರೊಬ್ಬರ ಜಮೀನಿನಲ್ಲಿ ನಿರರ್ಥಕವಾಗಿ ಬಿದ್ದಿರುವ ದೃಶ್ಯ
ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ಬೇಸಿಗೆಯಲ್ಲಿ ನೀರಿಲ್ಲದೆ ಬತ್ತಿರುವ ದೃಶ್ಯ 
ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ಬೇಸಿಗೆಯಲ್ಲಿ ನೀರಿಲ್ಲದೆ ಬತ್ತಿರುವ ದೃಶ್ಯ 
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹತ್ತು ವರ್ಷಗಳ ಸಾಧನೆ ಮತ್ತು ನಾನು ಮುಖ್ಯಮಂತ್ರಿ ಆಗಿದ್ದಾಗ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನ ಬಿಜೆಪಿಗೆ ಮತ ಹಾಕುವರು
ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ಹಾವೇರಿ ಲೋಕಸಭಾ ಕ್ಷೇತ್ರ
ಸರ್ವ ಸಮುದಾಯಗಳಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದು. ಕರ್ನಾಟಕಕ್ಕೆ ಅನ್ಯಾಯ ಮಾಡಿದ ಬಿಜೆಪಿಗೆ ತಕ್ಕ ಪಾಠ ಕಲಿಸಲು ಈ ಬಾರಿ ಮತದಾರರು ‘ಕೈ’ ಹಿಡಿಯುವರು
ಆನಂದಸ್ವಾಮಿ ಗಡ್ಡದೇವರಮಠ ಕಾಂಗ್ರೆಸ್ ಅಭ್ಯರ್ಥಿ ಹಾವೇರಿ ಲೋಕಸಭಾ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT