ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆಗೆ ಕಲ್ಲೇಟು ಬಿದ್ದಿದ್ದಕ್ಕೆ ಹೆದರಿ ಓಡಿ ಹೋಗಲ್ಲ: ಜಿ. ಪರಮೇಶ್ವರ

ಭದ್ರತೆ ಬೇಕಾಗಿಲ್ಲ; ಪ್ರಚಾರಕ್ಕೆ ಹೊರಡುತ್ತೇನೆ– ಪರಮೇಶ್ವರ
Published 29 ಏಪ್ರಿಲ್ 2023, 15:12 IST
Last Updated 29 ಏಪ್ರಿಲ್ 2023, 15:12 IST
ಅಕ್ಷರ ಗಾತ್ರ

ತುಮಕೂರು: ‘ಯಾರು ಏನೇ ತೊಂದರೆ ಕೊಟ್ಟರೂ, ತಲೆ ಮೇಲೆ ಕಲ್ಲು ಎತ್ತಿ ಹಾಕಿದರೂ ಹೆದರಿ ರಾಜಕೀಯದಿಂದ ಓಡಿ ಹೋಗುವುದಿಲ್ಲ. ಹೆಚ್ಚಿನ ಭದ್ರತೆಯ ಅಗತ್ಯವೂ ಇಲ್ಲ. ಒಂದೆರಡು ದಿನಗಳಲ್ಲಿ ಮತ್ತೆ ಪ್ರಚಾರಕ್ಕೆ ಹೋಗುತ್ತೇನೆ’ ಎಂದು ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ ಹೇಳಿದರು.

‘ಕೊರಟಗೆರೆ ಕ್ಷೇತ್ರದ ಬೈರೇನಹಳ್ಳಿಯಲ್ಲಿ ಶುಕ್ರವಾರ ಪ್ರಚಾರದ ವೇಳೆ ಹೂವಿನ ಜತೆ ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಹಾಕಿದ್ದಾರೆ. ಇದು ಉದ್ದೇಶಪೂರ್ವಕ ಕೃತ್ಯ. ದುಷ್ಕರ್ಮಿಗಳ ಉದ್ದೇಶ ಗೊತ್ತಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಒತ್ತಾಯಿಸಿದ್ದೇನೆ’ ಎಂದು ತಿಳಿಸಿದರು.  

‘ಪರಮೇಶ್ವರ ನಾಟಕ ಮಾಡುತ್ತಿದ್ದಾರೆ’ ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಶನಿವಾರ ಗೊಲ್ಲಹಳ್ಳಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಅವರಿಗೆ ನಾಟಕ ಮಾಡಿ ಅಭ್ಯಾಸವಿದೆ. ಅವರಂತೆ ಕಣ್ಣಲ್ಲಿ ನೀರು ಹಾಕಿ, ಅತ್ತು, ಕರೆಯುವುದಿಲ್ಲ’ ಎಂದು ತಿರುಗೇಟು ನೀಡಿದರು.

‘ಏಟು ತಿಂದವನು ನಾನು. ಅದರ ನೋವೆಷ್ಟಿದೆ ಎಂಬುದು ನನಗೆ ಗೊತ್ತು. ನಾಟಕ ಮಾಡುವ ಅಗತ್ಯವಿಲ್ಲ. ಜನರ ಮುಂದೆ ಹೋಗುತ್ತೇನೆ. ಮತದಾರರೇ ತೀರ್ಪು ಕೊಡುತ್ತಾರೆ’ ಎಂದು ಹೇಳಿದರು.

‘ನನ್ನ ಮೇಲೆ ಹಲ್ಲೆಗೆ ಯತ್ನಿಸಿರುವುದು ಇದೇ ಮೊದಲಲ್ಲ. 1999ರಲ್ಲಿ ವಿಜಯೋತ್ಸವ ಸಮಯದಲ್ಲಿ ಚಾಕುವಿನಿಂದ ತಿವಿಯಲು ಯತ್ನಿಸಲಾಗಿತ್ತು. ಈ ಬಾರಿ ನಾಮಪತ್ರ ಸಲ್ಲಿಸುವ ವೇಳೆ ಕಲ್ಲು ತೂರಾಟ ನಡೆದಿದೆ. ನನ್ನನ್ನೇ ಗುರಿ ಮಾಡಿಕೊಂಡು ಪದೇಪದೇ ಇಂತಹ ದಾಳಿ ನಡೆಯುತ್ತಿವೆ. ದ್ವೇಷ ತೀರಿಸಲು ಸಾರ್ವಜನಿಕ ಜೀವನ ಬಳಸಿಕೊಳ್ಳಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT