ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಹೊರಗಿನವನೆಂದು ಕರೆಯುವ ನೈತಿಕತೆ ಕಾಂಗ್ರೆಸ್ಸಿಗರಿಗಿಲ್ಲ: ಜಗದೀಶ ಶೆಟ್ಟರ್

Published 28 ಮಾರ್ಚ್ 2024, 8:27 IST
Last Updated 28 ಮಾರ್ಚ್ 2024, 8:27 IST
ಅಕ್ಷರ ಗಾತ್ರ

ಬೆಳಗಾವಿ: ‘ದೆಹಲಿಯ ಅಜಯ್ ಮಾಕನ್ ಅವರನ್ನು ಕಾಂಗ್ರೆಸ್‌ನವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡಿದ್ದಾರೆ. ರಾಹುಲ್‌ ಗಾಂಧಿ ಕೇರಳದ ವಯ್ನಾಡ್‌ನಿಂದ ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಅವರ್‍ಯಾರೂ ಕ್ಷೇತ್ರದ ಹೊರಗಿನವರಲ್ಲವೇ? ನನ್ನನ್ನು ಹೊರಗಿನವನು ಎಂದು ಕರೆಯುವ ನೈತಿಕ ಹಕ್ಕು ಕಾಂಗ್ರೆಸ್ಸಿಗರಿಗಿಲ್ಲ’ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ತಿರುಗೇಟು ನೀಡಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ 30 ವರ್ಷಗಳಿಂದ ಬೆಳಗಾವಿ ಜಿಲ್ಲೆಯೊಂದಿಗೆ ಹೊಂದಿದ ಒಡನಾಟ ಮತ್ತು ಅನುಭವ ಪರಿಗಣಿಸಿ, ಪಕ್ಷದ ಹೈಕಮಾಂಡ್ ಅಭ್ಯರ್ಥಿಯಾಗಿ ನನ್ನನ್ನು ಘೋಷಿಸಿದೆ. ಜನಸಂಘದ ದಿನಗಳಿಂದಲೂ ನನ್ನ ಕುಟುಂಬ ಬಿಜೆಪಿಯೊಂದಿಗೆ ಸಂಬಂಧ ಹೊಂದಿದೆ. ನಾನು ಬಿಜೆಪಿ ತೊರೆದು ಅಲ್ಪಾವಧಿಗೆ ಕಾಂಗ್ರೆಸ್ ಸೇರಿದ್ದೆ. ಆದರೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಆಹ್ವಾನದ ಮೇರೆಗೆ ಹಿಂತಿರುಗಿದ್ದೇನೆ. ಬೆಳಗಾವಿಯಲ್ಲಿನ ಸಮಸ್ಯೆಗಳಿಗೆ ನಾಯಕರು ತೆರೆ ಎಳೆದಿದ್ದಾರೆ. ಜಿಲ್ಲೆಯ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ ಲೋಕಸಭೆ ಚುನಾವಣೆ ಗೆಲುವಿಗೆ ಸಿದ್ಧತೆ ನಡೆಸಿದ್ದೇನೆ’ ಎಂದರು.

‘ಬೆಳಗಾವಿ ನನಗೆ ಹೊಸತಲ್ಲ. ಎರಡು ಬಾರಿ ವಿರೋಧ ಪಕ್ಷದ ನಾಯಕನಾಗಿದ್ದ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಎರಡು ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಕೊರೊನಾ, ನೆರೆ ಸಂಕಟದ ವೇಳೆ, ಜನರಿಗೆ ಸ್ಪಂದಿಸಿದ್ದೇನೆ. ಹುಬ್ಬಳ್ಳಿ ಜನ್ಮಭೂಮಿಯಾದರೆ, ಬೆಳಗಾವಿ ನನ್ನ ಕರ್ಮಭೂಮಿ. ಇಲ್ಲಿಯೇ ಮನೆ ಮಾಡಿಕೊಂಡು ವಾಸವಿರುತ್ತೇನೆ. ಈ ಭಾಗದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ. ರೈಲ್ವೆಯಿಂದ ವಿಮಾನ ಸಂಚಾರದವರೆಗಿನ ಬಾಕಿ ಇರುವ ಹಲವು ಬೇಡಿಕೆಗಳನ್ನು ಈಡೇರಿಸುತ್ತೇನೆ’ ಎಂದು ಭರವಸೆ ನೀಡಿದರು.

‘ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು ಎಂದು ಜನ ಬಯಸುತ್ತಿದ್ದಾರೆ. ಹಾಗಾಗಿ ಮೋದಿ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು, ಜನರ ಬಳಿ ಮತ ಕೇಳುತ್ತೇವೆ. ಮೋದಿ ಭಾರತವನ್ನು ವಿಶ್ವ ಗುರು ಆಗಿಸಿದ್ದಾರೆ. ಹಿಂದುಳಿದ ವರ್ಗದಿಂದ ಬಂದಿರುವ ಅವರು, ಎಲ್ಲ ವರ್ಗದವರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಹಿಂದುಳಿದ ವರ್ಗದ ನಾಯಕ ಎನ್ನುತ್ತಾರೆ. ಆದರೆ, ಮೋದಿ ಎಂದಿಗೂ ಹಿಂದುಳಿದ ವರ್ಗದ ನಾಯಕನೆಂದು ಹೇಳಿಕೊಂಡಿಲ್ಲ’ ಎಂದರು.

‘ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಆಡಳಿತ ಯಂತ್ರ ಸ್ಥಗಿತಗೊಂಡಿದೆ. ಸರ್ಕಾರದಿಂದ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಸ್ವತಃ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಕಾಂಗ್ರೆಸ್‌ಗೆ ಈಗ ಸೋಲಿನ ಭಯ ಆರಂಭವಾಗಿದ್ದು, ಚುನಾವಣೆ ನಂತರ ಸರ್ಕಾರ ಪತನವಾಗಲಿದೆ’ ಎಂದರು.

‘ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ ಅವರಂತಹ ಕಾಂಗ್ರೆಸ್ ನಾಯಕರು ಈಗ ಕೇಸರಿ ಶಾಲಿನ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಆದರೆ, ಅಲ್ಪಸಂಖ್ಯಾತ ಮತದಾರರ ಓಲೈಕೆಗಾಗಿ ಸಿದ್ದರಾಮಯ್ಯ ಅವರು ಕೇಸರಿ ಪೇಟ ಧರಿಸಲು ನಿರಾಕರಿಸಿದ್ದರು. ಸಿದ್ದರಾಮಯ್ಯನವರ ನಿಲುವನ್ನು ಇಬ್ಬರೂ ಸಚಿವರು ಖಂಡಿಸುತ್ತಾರೆಯೇ’ ಎಂದು ಪ್ರಶ್ನಿಸಿದರು.

‘ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲವಲ್ಲ’ ಎಂಬ ಪ್ರಶ್ನೆಗೆ, ‘ಅವರಿಬ್ಬರೂ ನನ್ನ ಸಂಪರ್ಕದಲ್ಲಿದ್ದಾರೆ. ಇನ್ಮುಂದೆ ಪ್ರಚಾರದಲ್ಲಿ ತೊಡಗುತ್ತಾರೆ’ ಎಂದರು.

‘ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾನೂನಿನ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT