ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಸುರಕ್ಷತೆ, ಅಭಿವೃದ್ಧಿಗೆ ಬಿಜೆಪಿ: ಜೆ.ಪಿ. ನಡ್ಡಾ

ಹುಮನಾಬಾದ್‌ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
Published 26 ಏಪ್ರಿಲ್ 2024, 18:37 IST
Last Updated 26 ಏಪ್ರಿಲ್ 2024, 18:37 IST
ಅಕ್ಷರ ಗಾತ್ರ

ಹುಮನಾಬಾದ್‌: ‘ದೇಶದ ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ಲೋಕಸಭೆ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಬೆಂಬಲಿಸಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಏರ್ಪಡಿಸಿದ್ದ ಬಿಜೆಪಿ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದಲ್ಲಿ ಈ ಹಿಂದೆ ಮತ ಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದರು. ಈಗ ಬಿಜೆಪಿ ಅಭಿವೃದ್ಧಿ, ಸುರಕ್ಷತೆಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ’ ಎಂದರು.

‘ಮೋದಿ ಸರ್ಕಾರ ದೇಶದ 4 ಕೋಟಿ ಜನರಿಗೆ ಉತ್ತಮವಾದ ಮನೆಗಳನ್ನು ಕಟ್ಟಿಸಿಕೊಟ್ಟಿದೆ. ಪುನಃ ಅಧಿಕಾರಕ್ಕೆ ಬಂದರೆ 3 ಕೋಟಿ ಹೊಸ ಮನೆಗಳನ್ನು ಕಟ್ಟಿಸಿಕೊಡುತ್ತೇವೆ. ಐದು ಕೆ.ಜಿ. ಅಕ್ಕಿ, 1 ಕೆ.ಜಿ ಬೇಳೆ ಕೊಡುತ್ತಿದ್ದೇವೆ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಿಂದ ಜಿಲ್ಲೆಯ ಎರಡೂವರೆ ಲಕ್ಷ ಜನರಿಗೆ ಡಿಬಿಟಿ ಮೂಲಕ ಪ್ರತಿ ತಿಂಗಳು 2 ಸಾವಿರ ಪಾವತಿಸಲಾಗುತ್ತಿದೆ. ಇದರಿಂದ ರೈತರು ಸದೃಢರಾಗಿದ್ದಾರೆ’ ಎಂದು ಹೇಳಿದರು.

‘3 ಲಕ್ಷ ಮಹಿಳೆಯರಿಗೆ ಲಕ್‌ಪತಿ ಸಹೋದರಿ ಮಾಡುವ ಗುರಿ ಹೊಂದಲಾಗಿದೆ. ಆಯುಷ್ಮಾನ್‌ ಭಾರತ್‌ ಯೋಜನೆಯಿಂದ ಶೇ 40ರಷ್ಟು ಭಾರತೀಯರಿಗೆ ಆರೋಗ್ಯ ಸೌಲಭ್ಯ ಸಿಗುತ್ತಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿಗೂ ವಿಸ್ತರಿಸಲಾಗುವುದು. 70 ವರ್ಷ ದಾಟಿದ ಎಲ್ಲರಿಗೂ ಯಾವುದೇ ಜಾತಿ, ಮತ, ಪಂಥ, ಧರ್ಮವಿಲ್ಲದೇ ಈ ಯೋಜನೆಯ ವ್ಯಾಪ್ತಿಗೆ ಸೇರಿಸಿ ₹5 ಲಕ್ಷದವರೆಗೆ ಆರೋಗ್ಯ ಸೌಲಭ್ಯ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‘ಜಲಜೀವನ್‌ ಮಿಷನ್‌ ಯೋಜನೆಯಡಿ ದೇಶದ 11 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ಎನ್‌ಡಿಎ ಅಭಿವೃದ್ಧಿ ದೃಷ್ಟಿಕೋನದೊಂದಿಗೆ ಕೆಲಸ ಮಾಡುತ್ತಿದೆ. ಆದರೆ, ‘ಇಂಡಿಯಾ’ ಒಕ್ಕೂಟದವರು ಅವರ ಕುಟುಂಬದವರನ್ನು ರಕ್ಷಿಸಲು ಒಂದಾಗಿದ್ದಾರೆ. ನಾವು ಭ್ರಷ್ಟರನ್ನು ಜೈಲಿಗೆ ಕಳಿಸುತ್ತಿದ್ದರೆ, ಅವರು ಭ್ರಷ್ಟರನ್ನು ರಕ್ಷಿಸಬೇಕೆನ್ನುತ್ತಾರೆ’ ಎಂದು ಆರೋಪಿಸಿದರು.

‘ದೇಶದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಕಲ್ಲಿದ್ದಲು ಹಗರಣ, ಆಗಸ್ಟಾ ವೆಸ್ಟ್‌ಲ್ಯಾಂಡ್‌, 2ಜಿ, 3ಜಿ ಹಗರಣ, ಕಾಮನ್‌ವೆಲ್ತ್‌ ಹಗರಣ, ಸಕ್ಕರೆ, ಅಕ್ಕಿ, ಅಂತರಿಕ್ಷ, ಸಮುದ್ರ, ಪಾತಾಳ, ಜಮೀನು ಎಲ್ಲ ಕಡೆ ಹಗರಣಗಳನ್ನು ಮಾಡಿದ್ದರು. ಕರ್ನಾಟಕದ ಡಿಸಿಎಂ ಮೇಲೆ ತನಿಖೆ ನಡೆಯುತ್ತಿದೆ. ಇಂಡಿಯಾ ಒಕ್ಕೂಟದ ಎಲ್ಲರೂ ಒಂದಿಲ್ಲೊಂದು ಪ್ರಕರಣದಲ್ಲಿ ಸಿಲುಕಿದ್ದಾರೆ. ಅಖಿಲೇಶ್‌ ಯಾದವ್‌ ಅವರು ಲ್ಯಾಪ್‌ಟಾಪ್‌ ಹಗರಣ, ಕೆ. ಕವಿತಾ, ಅರವಿಂದ ಕೇಜ್ರಿವಾಲ್‌ ಅವರು ಅಬಕಾರಿ ಹಗರಣದಲ್ಲಿ ಶಾಮಿಲಾಗಿದ್ದಾರೆ. ಇಂತಹವರು ಮುಂದೆ ಬರಬೇಕಾ?’ ಎಂದು ಪ್ರಶ್ನಿಸಿದರು.

‘ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪಿ.ಚಿದಂಬರಂ, ಕಾರ್ತಿ ಚಿದಂಬರಂ, ಸಂಜಯ್‌ ಸಿಂಗ್‌, ಲಾಲು ಪ್ರಸಾದ್‌ ಯಾದವ್‌ ಸೇರಿದಂತೆ ಹಲವರು ಜಾಮೀನಿನ ಮೇಲೆ ಹೊರಗಿದ್ದಾರೆ. ಒಂದು ಇವರು ಜೈಲಿನಲ್ಲಿದ್ದಾರೆ ಅಥವಾ ಬೇಲ್‌ ಮೇಲೆ ಹೊರಗಿದ್ದಾರೆ. ಇಂತಹ ಹಗರಣ ಮಾಡಿದವರು ಹೊರಗೆ ಇರಬೇಕಾ? ಇವರು ಜನರ ಉದ್ಧಾರ ಮಾಡುತ್ತಾರೆಯೇ? ಅಹಂಕಾರದ ಇಂಡಿಯಾ ಒಕ್ಕೂಟ, ಇನ್ನೊಂದೆಡೆ ಎನ್‌ಡಿಎ ಒಕ್ಕೂಟ ಜನರ ಸೇವೆಯಲ್ಲಿದೆ. ಯಾರಿಗೆ ಅವಕಾಶ ಕೊಡಬೇಕೆಂದು ನೀವೇ ನಿರ್ಧರಿಸಿ’ ಎಂದು ಹೇಳಿದರು.

ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಡಾ.ಸಿದ್ದಲಿಂಗಪ್ಪ ಪಾಟೀಲ, ಡಾ.ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ್, ಜೆಡಿಎಸ್ ಮುಖಂಡರಾದ ಬಂಡೆಪ್ಪ ಕಾಶೆಂಪುರ್, ಮಲ್ಲಿಕಾರ್ಜುನ ಖೂಬಾ, ರಮೇಶ ಸೋಲಪುರ, ಮುಖಂಡರಾದ ಪ್ರಕಾಶ್ ಖಂಡ್ರೆ, ಪ್ರಭಾಕರ ನಾಗರಾಳೆ, ಶಿವಾನಂದ ಮಂಠಾಳಕರ, ಬಸವರಾಜ ಆರ್ಯ, ಎಂ.ಜಿ. ಮುಳೆ, ಈಶ್ವರ್ ಸಿಂಗ್ ಠಾಕೂರ್, ಸಂತೋಷ ಪಾಟೀಲ, ರಮೇಶ ಕಲ್ಲೂರ್, ರಾಜು ಭಂಡಾರಿ, ದಯಾನಂದ ಮೇತ್ರೆ, ವಿನಾಯಕ್ ಹಂದಿಕೇರಾ ಮತ್ತಿತರರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರು
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರು

ಬೀದರ್‌ ವಿಮಾನ ನಿಲ್ದಾಣ ಅಭಿವೃದ್ಧಿ

‘ಕೇಂದ್ರ ಸರ್ಕಾರವು ಉಡಾನ್‌ ಯೋಜನೆಯಡಿ ಬೀದರ್‌ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಿದೆ. ರಾಜ್ಯದಲ್ಲಿ ಹಿಂದೆ ಇದ್ದ ಬಿಜೆಪಿ ಸರ್ಕಾರವು ಬಸವಕಲ್ಯಾಣದ ಅನುಭವ ಮಂಟಪಕ್ಕೆ ₹600 ಕೋಟಿ ಅನುದಾನ ಮಂಜೂರು ಮಾಡಿದೆ. ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಹೊಸ ರೈಲು ಮಾರ್ಗಗಳು ಪ್ರಾರಂಭಿಸಲಾಗಿದೆ. ಎಲ್ಲ ದೃಷ್ಟಿಯಿಂದಲೂ ಅಭಿವೃದ್ಧಿ ಕೆಲಸಗಳಾಗುತ್ತಿವೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT