ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Election | ಐದು ವರುಷ: ರಾಜಕೀಯ ಪಕ್ಷಗಳ ಬದಲಾದ ವರಸೆ

Last Updated 12 ಏಪ್ರಿಲ್ 2023, 0:15 IST
ಅಕ್ಷರ ಗಾತ್ರ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಏರತೊಡಗಿದ್ದು, ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರೂ ಪ್ರಮುಖ ಪಕ್ಷಗಳು ಗೆಲುವಿನ ದಡ ಮುಟ್ಟಲು ಪ್ರಬಲ ‘ಅಸ್ತ್ರ’ಗಳನ್ನು ಆಯ್ದುಕೊಂಡು ಎದುರಾಳಿಗಳನ್ನು ಕಟ್ಟಿಹಾಕುವ ಹವಣಿಕೆಯಲ್ಲಿವೆ. 2018ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣಾ ಕಣದಲ್ಲಿ ಬಳಕೆಯಾಗುವ ಅನೇಕ ಅಸ್ತ್ರಗಳು ಕೈ ಬದಲಿಸಿವೆ.

ಬಿಜೆಪಿ ಮತ್ತು ಕಾಂಗ್ರೆಸ್‌ ನೇರಾನೇರ ವಾಕ್ಸಮರದಲ್ಲೇ ಮತದಾರರನ್ನು ಸೆಳೆಯಲು ಹೊರಟಿವೆ. ಭ್ರಷ್ಟಾಚಾರ, ಧರ್ಮ, ಮತೀಯ ಗೂಂಡಾಗಿರಿ ಸೇರಿದಂತೆ ಅನೇಕ ವಿಷಯಗಳಲ್ಲಿ ಎರಡೂ ಪಕ್ಷಗಳು ಸವಾಲು–ಜವಾಬಿಗೆ ಇಳಿದಿವೆ. ಜೆಡಿಎಸ್‌ ತನ್ನ ಎಂದಿನ ಶೈಲಿಯಲ್ಲೇ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ತೊಡೆ ತಟ್ಟಿದೆ. ‘ಪ್ರಾದೇಶಿಕ ಪಕ್ಷ’ದ ಅಸ್ತ್ರವನ್ನೇ ಅದು ಬಲವಾಗಿ ನೆಚ್ಚಿಕೊಂಡಿದೆ.

2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಕಟ್ಟಿಹಾಕಲು ಬಿಜೆಪಿಯು ಭ್ರಷ್ಟಾಚಾರದ ಆರೋಪವನ್ನೇ ಪ್ರಮುಖವಾಗಿ ಆಯ್ದುಕೊಂಡಿತ್ತು. ಪ್ರಧಾನಿ ನರೇಂದ್ರ ಮೋದಿಯವರೇ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಶೇಕಡ 10ರಷ್ಟು ಲಂಚ ಪಡೆಯುತ್ತಿರುವ ಆರೋಪ ಮಾಡಿದ್ದರು. ‘ಸೀದಾರೂಪಯ್ಯಾ ಸರ್ಕಾರ್‌’ ಎಂಬ ಪ್ರಧಾನಿಯವರ ಹೇಳಿಕೆ ಇಡೀ ಚುನಾವಣಾ ಪ್ರಚಾರವನ್ನು ಆವರಿಸಿಕೊಂಡಿತ್ತು. ಅದಕ್ಕೆ ಜೋಡಿಸಿಕೊಂಡು ಹಲವು ಹಗರಣಗಳ ಆರೋಪ ಮಾಡಿದ್ದ ಬಿಜೆಪಿ, ಚುನಾವಣೆಯಲ್ಲಿ ಮೇಲುಗೈ ಸಾಧಿಸುವ ಪ್ರಯತ್ನ ಮಾಡಿತ್ತು.

ಈ ಬಾರಿಯ ಚುನಾವಣೆಯಲ್ಲಿ ಹಿಂದೆ ಮೋದಿಯವರು ಬಳಸಿದ್ದ ಅಸ್ತ್ರವನ್ನೇ ಕಾಂಗ್ರೆಸ್‌ ಪ್ರಬಲವಾಗಿ ಉಪಯೋಗಿಸಿದೆ. ‘10 ಪರ್ಸೆಂಟ್ ಸರ್ಕಾರ್‌’ ಎಂದು ಮೋದಿಯವರಿಂದ ಮೂದಲಿಕೆಗೆ ಒಳಗಾಗಿದ್ದ ಕಾಂಗ್ರೆಸ್‌, ‘ಬಿಜೆಪಿಯದು 40 ಪರ್ಸೆಂಟ್ ಸರ್ಕಾರ’ ಎಂದು ಬಿಂಬಿಸುವಲ್ಲಿ ಮುನ್ನಡೆಯನ್ನಂತೂ ಸಾಧಿಸಿದೆ. ಅದಕ್ಕಾಗಿ, ‘ಪೇಸಿಎಂ’ ಮಾದರಿ ಅಭಿಯಾನವನ್ನು ಸಮರ್ಥವಾಗಿ ಬಳಸಿಕೊಂಡಿದೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಇಂತಹ ಆರೋಪ ಮಾಡಿ ವರ್ಷದ ಹಿಂದೆ ಪ್ರಧಾನಿಗೆ ಬರೆದ ಪತ್ರ ಮತ್ತು ನಂತರದಲ್ಲಿ ಈ ಕುರಿತು ಎದ್ದ ಚರ್ಚೆಯ ಕಾವು ತಣ್ಣಗಾಗದಂತೆ ಹಿಡಿದಿಡುವ ಪ್ರಯತ್ನವನ್ನು ‘ಕೈ’ ನಾಯಕರು ಮಾಡುತ್ತಿದ್ದಾರೆ. ಸಾಲು ಸಾಲಾಗಿ ಹೊರಬಂದ ಹಗರಣಗಳು ಹಾಗೂ ಚುನಾವಣೆಯ ಹೊಸ್ತಿಲಲ್ಲೇ ದಾಖಲಾದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ಲಂಚ ಪ್ರಕರಣವನ್ನು ಶೇ 40ರ ಲಂಚದ ಆರೋಪಕ್ಕೆ ಪೂರಕವಾಗಿ ಬಿಂಬಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ.

ಉಚಿತ ಕೊಡುಗೆಗಳು, ನೇರವಾಗಿ ಹಣದ ನೆರವಿನ ಭರವಸೆಗಳ ಜತೆಯಲ್ಲೇ ಚುನಾವಣಾ ಕಾಲಘಟ್ಟದಲ್ಲೇ ಎದ್ದು ಬರುತ್ತಿರುವ ನಂದಿನಿ– ಅಮೂಲ್‌, ಕನ್ನಡದ ಅಸ್ಮಿತೆ– ಹಿಂದಿ ಹೇರಿಕೆಯಂತಹ ವಿಚಾರಗಳನ್ನು ಚುನಾವಣಾ ಪ್ರಚಾರದ ಪ್ರಬಲ ಅಸ್ತ್ರಗಳಾಗಿ ಬಳಸಿಕೊಳ್ಳುವ ಹವಣಿಕೆಯೂ ನಡೆಯುತ್ತಿದೆ.

ಬಿಜೆಪಿ 2018ರಲ್ಲಿ

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಶೇಕಡ ಹತ್ತರಷ್ಟು (ಸೀದಾರೂಪಯ್ಯಾ) ಲಂಚದ ಆರೋಪ.

ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲು ಶಿಫಾರಸು ಮಾಡುವ ಮೂಲಕ ಹಿಂದೂ ಧರ್ಮ ಒಡೆಯಲು ಯತ್ನಿಸಿದ ಆರೋಪ.

ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ.

ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪ.

ಸಿದ್ದರಾಮಯ್ಯ ಅವರಿಗೆ ಹ್ಯೂಬ್ಲೋ ವಾಚು ಉಡುಗೊರೆ ನೀಡಿದ ಪ್ರಕರಣ.

ಪಿಎಫ್‌ಐ ಕಾರ್ಯಕರ್ತರ ವಿರುದ್ಧದ ಮೊಕದ್ದಮೆಗಳನ್ನು ಹಿಂಪಡೆದ ಆರೋಪ.

ಅರ್ಕಾವತಿ ಬಡಾವಣೆಯ ‘ರೀಡೂ’ ಹೆಸರಿನಲ್ಲಿ ಡಿನೋಟಿಫೈ ಮಾಡಿದ ಆರೋಪ.

ಐಎಎಸ್ ಅಧಿಕಾರಿ ಡಿ.ಕೆ. ರವಿ ಹಾಗೂ ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ.

ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಉಕ್ಕಿನ ಮೇಲ್ಸೇತುವೆ; ಲಂಚಕ್ಕಾಗಿಯೇ ಈ ಯೋಜನೆ ಎಂಬ ಆರೋಪ

****

ಕಾಂಗ್ರೆಸ್‌ 2018ರಲ್ಲಿ

ಅನ್ನಭಾಗ್ಯ ಸೇರಿದಂತೆ ಬಡವರಿಗಾಗಿ ಹಲವು ಯೋಜನೆಗಳ ಅನುಷ್ಠಾನ

ಇಂದಿರಾ ಕ್ಯಾಂಟೀನ್‌ ಮೂಲಕ ರಿಯಾಯ್ತಿ ದರದಲ್ಲಿ ಆಹಾರ ವಿತರಣೆ

ಪರಿಶಿಷ್ಟ ಜಾತಿ ಉಪ ಯೋಜನೆ ಹಾಗೂ ಪರಿಶಿಷ್ಟ ಪಂಗಡಗಳ ಉಪ ಯೋಜನೆ ಕಾಯ್ದೆ ಅನುಷ್ಠಾನ

ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುತ್ತಿಗೆದಾರರಿಗೆ ಮೀಸಲಾತಿ

ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು

ಜೆಡಿಎಸ್‌ ಬಿಜೆಪಿಯ ‘ಬಿ’ ಟೀಂ ಎಂಬ ಆರೋಪ

ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ಶಿಫಾರಸು

ಜೆಡಿಎಸ್‌ 2018

ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳನ್ನು ಸಿದ್ದರಾಮಯ್ಯ ಸರ್ಕಾರ ‘ರೀಡೂ’ ಹೆಸರಿನಲ್ಲಿ ಡಿನೋಟಿಫೈ ಮಾಡಿದ ಆರೋಪ

ರಾಜ್ಯ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪ

ಸಿದ್ದರಾಮಯ್ಯ ಅವರಿಗೆ ಹ್ಯೂಬ್ಲೋ ವಾಚು ಉಡುಗೊರೆ ನೀಡಿದ ಪ್ರಕರಣ

ಅಧಿಕಾರಕ್ಕೆ ಬಂದ ಕೂಡಲೇ ಕೃಷಿ ಸಾಲ ಮನ್ನಾ ಭರವಸೆ

ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕದ ನಿರ್ಲಕ್ಷ್ಯ ಆರೋಪ

******************

2023 ಬಿಜೆಪಿ

ಪರಿಶಿಷ್ಟರ ಮೀಸಲಾತಿ ಹೆಚ್ಚಳಕ್ಕೆ ಕೈಗೊಂಡಿರುವ ನಿರ್ಧಾರ

ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ನಿರ್ಧಾರ

ಒಕ್ಕಲಿಗರು, ಲಿಂಗಾಯತರ ಮೀಸಲಾತಿ ಪ್ರಮಾಣ ಹೆಚ್ಚಳ

‘ಡಬಲ್‌ ಎಂಜಿನ್‌’ ಸರ್ಕಾರಕ್ಕೆ ಬೆಂಬಲ ಯಾಚನೆ

ರಸ್ತೆ, ರೈಲು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ

ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡುವುದು

ಮುಸ್ಲಿಮರ ಮೀಸಲಾತಿ ರದ್ದುಪಡಿಸಿ, ಇಡಬ್ಲ್ಯುಎಸ್‌ಗೆ ಸೇರ್ಪಡೆ

ಹಿಜಾಬ್ ನಿಷೇಧ, ಆಝಾನ್ ನಿರ್ಬಂಧ, ಪಠ್ಯಪುಸ್ತಕ ಪರಿಷ್ಕರಣೆ

***

2023 ಜೆಡಿಎಸ್

ರಾಷ್ಟ್ರೀಯ ಪಕ್ಷಗಳು ಕರ್ನಾಟಕವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿರುವ ಆರೋಪ

ಕರ್ನಾಟಕದ ಮೇಲೆ ಹಿಂದಿ ಹೇರಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿರುವ ಆರೋಪ

ರೈತರ ಜೀವನ ಸುಧಾರಣೆಗೆ ಸಮಗ್ರ ಯೋಜನೆ ಜಾರಿಗೊಳಿಸುವ ಭರವಸೆ

ಕೆಎಂಎಫ್‌ ಅನ್ನು ಅಮೂಲ್‌ ಜತೆ ವಿಲೀನಕ್ಕೆ ಯತ್ನಿಸುತ್ತಿರುವ ಆರೋಪ

ಉಚಿತ ಕೊಡುಗೆಗಳ ಭರವಸೆ

***

2023 ಕಾಂಗ್ರೆಸ್‌

ರಾಷ್ಟ್ರೀಯ ಪಕ್ಷಗಳು ಕರ್ನಾಟಕವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿರುವ ಆರೋಪ

ಕರ್ನಾಟಕದ ಮೇಲೆ ಹಿಂದಿ ಹೇರಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿರುವ ಆರೋಪ

ರೈತರ ಜೀವನ ಸುಧಾರಣೆಗೆ ಸಮಗ್ರ ಯೋಜನೆ ಜಾರಿಗೊಳಿಸುವ ಭರವಸೆ

ಕೆಎಂಎಫ್‌ ಅನ್ನು ಅಮೂಲ್‌ ಜತೆ ವಿಲೀನಕ್ಕೆ ಯತ್ನಿಸುತ್ತಿರುವ ಆರೋಪ

ಉಚಿತ ಕೊಡುಗೆಗಳ ಭರವಸೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT