ಶಿವಮೊಗ್ಗ: ‘ಶಿವಮೊಗ್ಗ ನಗರ ಕ್ಷೇತ್ರದಿಂದ ಕೆ.ಎಸ್. ಈಶ್ವರಪ್ಪ ಅವರಿಗೇ ಟಿಕೆಟ್ ನೀಡುವ ನಿಟ್ಟಿನಲ್ಲಿ ಹೈಕಮಾಂಡ್ ಮನವೊಲಿಸುವುದಾಗಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ’ ಎಂದು ಈಶ್ವರಪ್ಪ ಅವರ ಪುತ್ರ ಕೆ.ಈ. ಕಾಂತೇಶ್ ತಿಳಿಸಿದರು.
ಬೆಂಗಳೂರಿನಲ್ಲಿ ಗುರುವಾರ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.
‘ಈಶ್ವರಪ್ಪ ಅವರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದೆಂದು ವರಿಷ್ಠರಿಗೆ ಹೇಳುವೆ. ಟಿಕೆಟ್ ಕೊಡುವ ವಿಚಾರದಲ್ಲಿ ಏನು ನಿರ್ಧಾರ ಮಾಡಿದ್ದಾರೋ ಅದನ್ನು ವಾಪಸ್ ತೆಗೆದುಕೊಳ್ಳಲು ತಿಳಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದರು’ ಎಂದರು.
ನಂತರ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರನ್ನೂ ಭೇಟಿಯಾಗಿ ಚರ್ಚಿಸಿದ್ದಾಗಿ ತಿಳಿಸಿದ ಅವರು, ‘ಚುನಾವಣಾ ಕಣದಿಂದ ನಿವೃತ್ತಿಯಾಗುವ ಈಶ್ವರಪ್ಪ ಅವರ ತಿರ್ಮಾನವನ್ನು ಇಬ್ಬರೂ ನಾಯಕರು ಪ್ರಶಂಸಿಸಿ, ಪಕ್ಷ ನಿಷ್ಠೆಯನ್ನು ಗೌರವಿಸಿದ್ದಾರೆ. ಯಾವುದೇ ಕಾರಣಕ್ಕೂ ಆತಂಕ ಬೇಡ. ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ಅಭಯ ದೊರೆತಿದೆ’ ಎಂದು ಕಾಂತೇಶ್ ಹೇಳಿದರು.
‘ಈಶ್ವರಪ್ಪ ಸ್ವಯಂ ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುವೆ ಎಂದು ಘೋಷಿಸಿದ್ದಾರೆ. ಅವರ ತೀರ್ಮಾನ ವರಿಷ್ಠರು ಒಪ್ಪುತ್ತಾರೊ, ಮನವೊಲಿಸಿ ಕಣಕ್ಕಿಳಿಸುತ್ತಾರೊ ಕಾದು ನೋಡಬೇಕಿದೆ. ಈಶ್ವರಪ್ಪ ಅವರಿಗೆ ಅಥವಾ ನನಗೆ ಟಿಕೆಟ್ ಕೊಡುವ ವಿಚಾರದಲ್ಲಿ ವರಿಷ್ಠರ ತೀರ್ಮಾನಕ್ಕೆ ಬದ್ಧ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.