ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Election Results 2023 Live: ಕಾಂಗ್ರೆಸ್ 136, ಬಿಜೆಪಿ 65, ಜೆಡಿಎಸ್ 19 ಮುನ್ನಡೆ

Published 13 ಮೇ 2023, 1:40 IST
Last Updated 14 ಮೇ 2023, 4:19 IST
ಅಕ್ಷರ ಗಾತ್ರ
01:3913 May 2023

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ

ಬೆಂಗಳೂರು: ಮೂರು ಪಕ್ಷಗಳ ನಡುವಿನ ಭಾರಿ ಹಣಾಹಣಿ, ಅಬ್ಬರದ ಪ್ರಚಾರ, ಪ್ರತಿಷ್ಠೆಯನ್ನೇ ಪಣವಾಗಿಟ್ಟು ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 3.67 ಕೋಟಿ ಮತದಾರರು ನೀಡಿರುವ ಜನಾದೇಶ ಇಂದು ಬಹಿರಂಗವಾಗಲಿದೆ.

ಲೋಕಸಭೆ ಚುನಾವಣೆಗೆ ಒಂದು ವರ್ಷ ಇರುವಾಗ ನಡೆದಿರುವ ಈ ಚುನಾವಣೆಯ ಫಲಿತಾಂಶ ರಾಜ್ಯ ಮಾತ್ರವಲ್ಲ, ದೇಶದ ರಾಜಕೀಯ ದಿಕ್ಕನ್ನು ನಿರ್ಧರಿಸಲಿದೆ. ಈ ಕಾರಣಕ್ಕೆ, ಫಲಿತಾಂಶದ ಮೇಲೆ ದೇಶದ ಕಣ್ಣೇ ನೆಟ್ಟಿದೆ.

ವಿಧಾನಸಭೆಯ 224 ಕ್ಷೇತ್ರಗಳ ಪ್ರತಿನಿಧಿಗಳ ಆಯ್ಕೆಗೆ ಬುಧವಾರ (ಏಪ್ರಿಲ್‌ 10) ಮತದಾನ ನಡೆದಿತ್ತು. 5.07 ಕೋಟಿ ಮತದಾರರಲ್ಲಿ 3.67 ಕೋಟಿ ಮಂದಿ ಮತಚಲಾಯಿಸಿದ್ದರು. 2,615 ಅಭ್ಯರ್ಥಿಗಳು ಕಣದಲ್ಲಿದ್ದು, ಜನರ ವಿಶ್ವಾಸಗೆದ್ದು ಯಾರು ವಿಧಾನಸಭೆ ಪ್ರವೇಶಿಸಲಿದ್ದಾರೆ ಎಂಬುದು ಹೊರಬೀಳಲಿದೆ.

02:0713 May 2023

ಮೈಸೂರು: ವಿಧಾನಸಭೆ ಚುನಾವಣೆ ಮತ ಎಣಿಕೆ ಪ್ರಕ್ರಿಯೆಯು ಇಲ್ಲಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಆರಂಭಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಪೊಲೀಸರು ಹಾಗೂ ಸಿಆರ್‌ಪಿಎಫ್‌ನವರು ಹೆಜ್ಜೆ ಹೆಜ್ಜೆಗೂ ಭದ್ರತಾ ತಪಾಸಣೆ ನಡೆಸುತ್ತಿರುವುದರಿಂದ ಕೇಂದ್ರವನ್ನು ಪ್ರವೇಶಿಸಲು ಎಣಿಕೆ ಏಜೆಂಟರು ಪರದಾಡುತ್ತಿದ್ದಾರೆ. ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, 143 ಅಭ್ಯರ್ಥಿಗಳು ಕಣದಲ್ಲಿದ್ದರು. ಅವರ ಪರವಾಗಿ ನೇಮಕಗೊಂಡಿರುವ ಅಧಿಕೃತ ಎಣಿಕೆ ಏಜೆಂಟರು ಕೇಂದ್ರದ ಒಳಗಡೆಗೆ ಬರಲು ಸುಗಮವಾದ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಇದರಿಂದಾಗಿ ಎಣಿಕೆ ಕೇಂದ್ರದ ಬಾಗಿಲಲ್ಲಿ ನೂಕು ನುಗ್ಗಲು ಕಂಡುಬರುತ್ತಿದೆ.

02:0713 May 2023

ಕೇಂದ್ರ ಪ್ರವೇಶಿಸಲು ಎಣಿಕೆ ಏಜೆಂಟರ ಪರದಾಟ

02:0913 May 2023

ಬೆಳಗಾವಿ: ಮತ ಎಣಿಕೆಗೆ ಕ್ಷಣಗಣನೆ

ಬೆಳಗಾವಿ: ಇಲ್ಲಿನ ಆರ್.ಪಿ.ಡಿ ಕಾಲೇಜು ಆವರಣದಲ್ಲಿ ಶನಿವಾರ ಬೆಳಿಗ್ಗೆ 8ಕ್ಕೆ ಆರಂಭಗೊಳ್ಳಲಿರುವ ಮತ ಎಣಿಕೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರದ ಸುತ್ತಲಿನ ಪ್ರದೇಶದಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 18 ಕ್ಷೇತ್ರಗಳಲ್ಲಿ ಕಣದಲ್ಲಿರುವ 187 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ಬಹಿರಂಗವಾಗಲಿದೆ.

02:1313 May 2023

ಕೊಪ್ಪಳ: ಜಿಲ್ಲೆಯ 69 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ಕೊಪ್ಪಳ: ವಿಧಾನಸಭಾ ಚುನಾವಣೆಯ ಮತ ಎಣಿಕೆ ಶನಿವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಕಣದಲ್ಲಿರುವ ಒಟ್ಟು 69 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಕೊಪ್ಪಳ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ, ಉಳಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಜಿಲ್ಲೆಯಿಂದ ರಾಜಕೀಯ ಬದುಕನ್ನು ಅಗ್ನಿಪರೀಕ್ಷೆಗೆ ಒಳಪಡಿಸಿರುವ ಗಾಲಿ ಜನಾರ್ದನ ರೆಡ್ಡಿ ರಾಜಕೀಯ ಭವಿಷ್ಯವನ್ನೂ ಈ ಫಲಿತಾಂಶ ನಿರ್ಧಾರ ಮಾಡಲಿದೆ. ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ, ಹತ್ತು ವರ್ಷಗಳ ಕಾಲ ಬಿಜೆಪಿಯಲ್ಲಿದ್ದು, ಟಿಕೆಟ್‌ ಸಿಗದ ಕಾರಣಕ್ಕೆ ಬಂಡಾಯವೆದ್ದಿರುವ ಸಿ.ವಿ. ಚಂದ್ರಶೇಖರ್‌ ಕೊಪ್ಪಳ ಕ್ಷೇತ್ರದ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದಾರೆ. ಅವರ ರಾಜಕೀಯ ಬದುಕಿಗೂ ಈ ಚುನಾವಣಾ ಫಲಿತಾಂಶ ಮಹತ್ವದ್ದಾಗಿದೆ.

ಇಲ್ಲಿನ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಒಟ್ಟು 11,36,838 ಮತದಾರರಲ್ಲಿ 8,85,325 ಮತದಾರರು ಹಕ್ಕು ಚಲಾಯಿಸಿದ್ದಾರೆ. ಐದು ಕ್ಷೇತ್ರಗಳಿಂದ 69 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2018ರ ಚುನಾವಣೆಗಿಂತಲೂ ಮತದಾನ ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದು, ಕೂಡ ಅಭ್ಯರ್ಥಿಗಳ ಹುಮ್ಮಸ್ಸು ಹೆಚ್ಚಿಸಿದೆ.

02:1713 May 2023

ದೊಡ್ಡ ಪಕ್ಷವಾದರೆ ಸರ್ಕಾರ ರಚನೆ ಕಸರತ್ತು: ಮೂರೂ ಪಕ್ಷಗಳ ಮುಖಂಡರ ಚರ್ಚೆ

ಬೆಂಗಳೂರು: ಈ ಬಾರಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೆ ಮಾತ್ರ ಜೆಡಿಎಸ್ ಅಥವಾ ಪಕ್ಷೇತರರ ನೆರವಿನೊಂದಿಗೆ ಸರ್ಕಾರ ರಚಿಸುವ ಕಸರತ್ತಿಗೆ ಕೈ ಹಾಕುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ನಡೆದಿದೆ.

‘ಪಕ್ಷದ ಆಂತರಿಕ ಲೆಕ್ಕಾಚಾರದ ಪ್ರಕಾರ ಈ ಬಾರಿ 105 ರಿಂದ 120 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಒಂದು ವೇಳೆ ಮ್ಯಾಜಿಕ್‌ ಸಂಖ್ಯೆ 113 ದಾಟಿದರೆ ಪಕ್ಷೇತರರನ್ನು ಸೇರಿಸಿಕೊಂಡು ಸರ್ಕಾರ ರಚಿಸುವುದು. ಸಂಖ್ಯೆ 95 ರಿಂದ 113 ರ ಒಳಗೆ ಬಂದು ನಿಂತರೆ ಆಗ ಜೆಡಿಎಸ್‌ ಮತ್ತು ಪಕ್ಷೇತರರ ಜತೆ ಕೈ ಜೋಡಿಸುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಗೆಲ್ಲಬಹುದಾದ ಪಕ್ಷೇತರರು ಮತ್ತು ಜೆಡಿಎಸ್‌ ಜತೆ ಸಂಪರ್ಕ ಸಾಧಿಸಲು ಹಲವು ನಾಯಕರಿಗೆ ಸೂಚನೆ ನೀಡಲಾಗಿದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘2018 ರಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರ್ಕಾರ ರಚಿಸಲಾಗದ ಸ್ಥಿತಿ ಉದ್ಭವಿಸಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದರೂ ಸಂಖ್ಯೆ ಹೊಂದಿಸಲಾಗದೇ ರಾಜೀನಾಮೆ ನೀಡಿ ಮುಖಭಂಗ ಅನುಭವಿಸಬೇಕಾಯಿತು. ಆಗ ಜೆಡಿಎಸ್‌, ಕಾಂಗ್ರೆಸ್‌ ಜತೆ ಕೈ ಜೋಡಿಸಿತ್ತು. ಈ ಬಾರಿ ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು, ಬಿಜೆಪಿ ಎರಡನೇ ಸ್ಥಾನಕ್ಕೆ ಕುಸಿದರೆ, ಅಂದರೆ 90ಕ್ಕಿಂತಲೂ ಕಡಿಮೆ ಸ್ಥಾನ ಗೆದ್ದರೆ ಸರ್ಕಾರ ರಚನೆ ಕಸರತ್ತಿಗೆ ಕೈ ಹಾಕದಿರಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿವೆ.

‘ಜೆಡಿಎಸ್‌ ಜತೆ ಈ ಹಿಂದೆ ಸರ್ಕಾರ ರಚಿಸಿ ಕಹಿ ಅನುಭವಿಸಿದ್ದ ಹಿನ್ನೆಲೆಯಲ್ಲಿ ಈ ಬಾರಿ ಫಲಿತಾಂಶ ಅತಂತ್ರ ಬಂದರೆ ಅವರ ಜತೆ ಸೇರಿ ಸರ್ಕಾರ ರಚಿಸಬೇಕೇ ಎಂಬ ಬಗ್ಗೆಯೂ ಚರ್ಚೆಯೂ ನಡೆದಿದೆ. ಜೆಡಿಎಸ್‌ನ ಎಲ್ಲ ಷರತ್ತುಗಳಿಗೆ ಮಣೆ ಹಾಕುತ್ತಲೇ ಹೋದರೆ ಸರ್ಕಾರ ನಡೆಸುವುದೇ ಕಷ್ಟವಾಗಬಹುದು.  ಆದ್ದರಿಂದ ಫಲಿತಾಂಶದ ದಿಕ್ಕು ದೆಸೆ ನೋಡಿ ಆ ಬಳಿಕವೇ ಎಚ್ಚರಿಕೆಯ ಹೆಜ್ಜೆ ಇಡಬೇಕು. ಪರ್ಯಾಯ ಮಾರ್ಗಗಳ ಬಗ್ಗೆಯೂ ಚಿಂತನೆ ನಡೆಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರು ಗುರುವಾರ ಟ್ವೀಟ್‌ ಮಾಡಿದ ಪ್ರಕಾರ 31 ಸಾವಿರ ಬೂತ್‌ಗಳಲ್ಲಿ ಲೀಡ್‌ ಇದೆ. ಅವರು ನಿಖರ ಮಾಹಿತಿಯನ್ನು ಇಟ್ಟಕೊಂಡೇ ಟ್ವೀಟ್ ಮಾಡಿರುತ್ತಾರೆ. ಇದರ ಪ್ರಕಾರ ಸುಮಾರು 105 ರಿಂದ 120 ಸ್ಥಾನಗಳವರೆಗೆ ಗೆಲ್ಲಬಹುದು ಎಂಬ ಲೆಕ್ಕಾಚಾರ ಮಾಡಲಾಗಿದೆ’ ಎಂದು ಬಿಜೆಪಿಯ ನಾಯಕರೊಬ್ಬರು ತಿಳಿಸಿದರು.

02:1913 May 2023

ಬಳ್ಳಾರಿಯಲ್ಲಿ ಮತ ಎಣಿಕೆಗೆ ಕ್ಷಣಗಣನೆ.

ಬಳ್ಳಾರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತ ಏಣಿಕೆ ಕಾರ್ಯಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ.

ಕೆಲವು ಗಂಟೆಗಳಲ್ಲಿ ಆರಂಭವಾಗಲಿರುವ ಮತ ಏಣಿಕೆ ಕಾರ್ಯ.

ನಗರದ ವೈ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನ ನಡೆಯಲಿರುವ ಮತ ಏಣಿಕೆ.

ಜಿಲ್ಲೆಯಲ್ಲಿ ಶೇ.76.24 ರಷ್ಟು ಮತದಾನವಾಗಿದೆ.

ತಲಾ ಒಂದು ಕ್ಷೇತ್ರದ 14 ಟೇಬಲ್ಗಳಿಗೆ 170 ಸಿಬ್ಬಂದಿ ನಿಯೋಜನೆ.

ತಲಾ ಒಂದು ಕ್ಷೇತ್ರದ ಮತ ಎಣಿಕೆಗೆ 14 ಟೇಬಲ್ ಹಾಗೂ ಪೋಸ್ಟಲ್ ಬ್ಯಾಲೆಟ್ ಎಣಿಕೆಗೆ 2 ಟೇಬಲ್ ವ್ಯವಸ್ಥೆ.

ಮತ‌ಏಣಿಕೆ ಸೂಪರ್ ವೈಜರ್ಸ್, ಮತ‌ಏಣಿಕೆ ಸಹಾಯಕರು, ಮತ ಏಣಿಕೆ ವಿಕ್ಷೇಕರನ್ನು ನಿಯೋಜನೆ ಮಾಡಲಾಗಿದೆ. ಸ್ಟ್ರಾಂಗ್ ರೂಮ್‌ನಿಂದ ಮತಯಂತ್ರಗಳನ್ನು ತೆಗೆದುಕೊಂಡ ಮತ‌ಏಣಿಕೆ ಕೇಂದ್ರ ತರಲು ಗ್ರಾಮ ಸಹಾಕಯರನ್ನು ಕರ್ತವ್ಯ ವ್ಯವಸ್ಥೆ.

ಒಟ್ಟು 56 ಅಭ್ಯರ್ಥಿಗಳು ಕಣದಲ್ಲಿನ ಇಂದು ಭವಿಷ್ಯ ನಿರ್ಧಾರ.

ಮತ ಏಣಿಕೆ ಕಾರ್ಯ ಸಮಯದಲ್ಲಿ ಯಾವುದೇ ಅಹಿಕತರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೇಂದ್ರ ಹಾಗೂ ಜಿಲ್ಲೆಯಾದ್ಯಂತ ಕಲಂ 144 ನಿಷೇಧ್ಞಾನೆ ಜಾರಿ.

ಮತಕೇಂದ್ರದತ್ತ ಬರುತ್ತಿರುವ ಮತ ಎಣಿಕೆ ಸಿಬ್ಬಂದಿ.

ಸಿಬ್ಬಂದಿಗಳನ್ನು ತಪಾಸಣೆ ಮಾಡಿ ಬಿಡುತ್ತಿರುವ ಪೊಲೀಸರು.

02:2113 May 2023

ದಕ್ಷಿಣ ಕನ್ನಡ: ಮತ ಎಣಿಕೆಗೆ ಕ್ಷಣಗಣನೆ

ಮಂಗಳೂರು: ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿಕೆ) ಆವರಣದಲ್ಲಿ ಮತಯಂತ್ರಗಳನ್ನು ಇರಿಸಿದ್ದ ಭದ್ರತಾ ಕೊಠಡಿಗಳನ್ನು ಶನಿವಾರ ಬೆಳಿಗ್ಗೆ 7.40 ಕ್ಕೆ ತೆರೆಯಲಾಗಿದ್ದು ಇನ್ನೇನು ಕೆಲವೇ ಸಮಯದಲ್ಲಿ ಮತೆಣಿಕೆ‌ಕಾರ್ಯ ಶುರುವಾಗಲಿದೆ.

ಈಗಾಗಲೇ ಮತ ಎಣಿಕೆ‌ ಕೇಂದ್ರದ ಬಳಿ ಅಭ್ಯರ್ಥಿ ಗಳ ಏಜೆಂಟರು, ಮತ ಎಣಿಕೆ‌ ಅಧಿಕಾರಿಗಳು ಸೇರಿದ್ದಾರೆ.

ಎನ್ಐಟಿಕೆ‌ ಪ್ರದೇಶದಲ್ಲಿ ರುಂತುರು ಮಳೆ ಶುರುವಾಗಿದೆ.

02:2713 May 2023

ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳ ಮತ ಎಣಿಕೆಗೆ ಕ್ಷಣಗಣನೆ

ಹೊಸಪೇಟೆ: ವಿಜಯನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ.

ಭಾರಿ ಭದ್ರತೆ ನಡುವೆ ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಮತ ಎಣಿಕೆಗೆ ಸಿದ್ಧತೆ ಮಾಡಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ., ಚುನಾವಣಾ ವೀಕ್ಷಕ ಎಂ.ಎಂ. ನಾಯಕ, ಚುನಾವಣಾಧಿಕಾರಿ ಸಿದ್ಧ ರಾಮೇಶ್ವರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂಗಳ ಸೀಲ್ ತೆಗೆಯಲಾಗುತ್ತಿದೆ. ಇನ್ನೊಂದೆಡೆ ಅಂಚೆ ಮತ ಪತ್ರಗಳನ್ನು ಜೋಡಿಸುವ ಕೆಲಸ ಪ್ರಗತಿಯಲ್ಲಿದೆ. ಎಂಟು ಗಂಟೆಗೆ ಎಣಿಕೆ ಶುರುವಾಗಲಿದೆ.

ಮೊದಲು ಅಂಚೆ ಮತಪತ್ರಗಳ ಎಣಿಕೆ ನಡೆಯಲಿದೆ. ಅನಂತರ ವಿದ್ಯುನ್ಮಾನ ಮತಗಳ ಎಣಿಕೆ ನಡೆಸಲಾಗುತ್ತದೆ.

ಅಭ್ಯರ್ಥಿಗಳಾದ ಎಚ್.ಆರ್. ಗವಿಯಪ್ಪ, ಭೀಮ ನಾಯ್ಕ, ಕೆ. ನೇಮರಾಜ ನಾಯ್ಕ ಹಾಗೂ ಅವರ ಬೆಂಬಲಿಗರು, ಏಜೆಂಟರು ಬಂದಿದ್ದಾರೆ. ಏಜೆಂಟರಿಷ್ಟೇ ಮತ ಎಣಿಕೆ ಕೇಂದ್ರದ ಒಳಗೆ ಬಿಡಲಾಗುತ್ತಿದೆ. ಕಾಲೇಜಿನ ಎದುರು ಅಪಾರ ಸಂಖ್ಯೆಯ ಕಾರ್ಯಕರ್ತರು ಸೇರಿದ್ದಾರೆ. ಎಸ್ಟಿ ಶ್ರೀಹರಿಬಾಬು ಬಿ.ಎಲ್. ಇತರೆ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.

02:2913 May 2023

ರಾಜ್ಯದಾದ್ಯಂತ ಎಣಿಕೆ ಪ್ರಕ್ರಿಯೆ ಆರಂಭ

ರಾಜ್ಯದಾದ್ಯಂತ ಅಂಚೆ ಮತಗಳ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.