ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ರಾಮಮಂದಿರ, ಸಿಎಎ... ಪ್ರಚಾರ ಭರಾಟೆಗೆ ಕಾವು ಕೊಡುವ ವಿಚಾರಗಳು

Published 23 ಮಾರ್ಚ್ 2024, 0:04 IST
Last Updated 23 ಮಾರ್ಚ್ 2024, 0:04 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ , ‘ಕಳೆದ 10 ವರ್ಷಗಳ ನಮ್ಮ ಸಾಧನೆಗಳ ಪಟ್ಟಿ ಹಿಡಿದುಕೊಂಡು ಮತದಾರರ ಬಳಿಕ ಹೋಗುತ್ತೇವೆ’ ಎಂದು ಹೇಳಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನವನ್ನು ಸರ್ವಾಧಿಕಾರದಿಂದ ಕಾಪಾಡಲು ಲಭಿಸುವ ಕೊನೆಯ ಅವಕಾಶ ಇದು’ ಎಂದಿದ್ದರು. ‘ಎನ್‌ಡಿಎ’ ಮತ್ತು ‘ಇಂಡಿಯಾ’ ಮೈತ್ರಿಕೂಟವು ಭಿನ್ನ ಸಿದ್ಧಾಂತ, ಭರವಸೆಗಳ ಮೂಲಕ ಮತದಾರರ ಮನಗೆಲ್ಲಲು ಹೊರಟಿವೆ. ಈ ಬಾರಿಯ ಚುನಾವಣಾ ಫಲಿತಾಂಶವನ್ನು ರೂಪಿಸಬಲ್ಲ ಮತ್ತು ಪ್ರಚಾರದ ಅವಧಿಯಲ್ಲಿ ಸದ್ದು ಮಾಡಲಿರುವ ಪ್ರಮುಖ ವಿಷಯಗಳತ್ತ ಒಂದು ನೋಟ...

ರಾಮಮಂದಿರ 

ಅಯೋಧ್ಯೆಯಲ್ಲಿ ಈಚೆಗೆ ನಡೆದ ರಾಮಮಂದಿರದ ಉದ್ಘಾಟನೆಯು ಬಿಜೆಪಿಯ ಉತ್ಸಾಹ ಹೆಚ್ಚಿಸಿದೆ. ಜನವರಿ 22ರಂದು ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಬಿಜೆಪಿಯು ‘ರಾಷ್ಟ್ರೀಯ ಸಂಭ್ರಮ’ವಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿತ್ತು. ಸಮಾರಂಭದಲ್ಲಿ ಕಾಂಗ್ರೆಸ್‌ ನಾಯಕರು ಪಾಲ್ಗೊಳ್ಳದ್ದನ್ನು ಬಿಜೆಪಿ, ಟೀಕೆಯ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಮಂದಿರ ವಿಚಾರದಲ್ಲಿ ಮತ ಸೆಳೆಯಲು ತನಗೆ ಲಭಿಸುವ ಸಣ್ಣ ಅವಕಾಶವನ್ನೂ ಬಿಜೆಪಿ ಬಿಟ್ಟುಕೊಡದು. ಜನರ ಭಾವನೆಗಳೊಂದಿಗೆ ಬೆಸೆದುಕೊಂಡಿರುವ ರಾಮಮಂದಿರ ವಿಚಾರ ಮುಂದಿಟ್ಟು ಎನ್‌ಡಿಎ ನಡೆಸುವ ಪ್ರಚಾರಕ್ಕೆ ಪ್ರತ್ಯುತ್ತರ ನೀಡುವ ಸವಾಲು ‘ಇಂಡಿಯಾ’ ಮೈತ್ರಿಕೂಟದ ಮುಂದಿದೆ. 

ಚುನಾವಣಾ ಬಾಂಡ್

ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿರುವ ಚುನಾವಣಾ ಬಾಂಡ್‌, ಪ್ರಚಾರದ ಅವಧಿಯಲ್ಲೂ ಪ್ರತಿಧ್ವನಿಸಲಿದೆ. ಬಾಂಡ್‌ಗಳ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಪಕ್ಷಗಳು ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿವೆ. ಒಟ್ಟು ಖರೀದಿಯಾದ ಬಾಂಡ್‌ಗಳಲ್ಲಿ ಶೇ 50ರಷ್ಟು ಬಿಜೆಪಿಗೆ ಸಂದಾಯವಾಗಿದ್ದು, ದೇಣಿಗೆ ಸಂಗ್ರಹದ ಕುರಿತು ಸುಪ್ರೀಂ ಕೋರ್ಟ್‌ ಉಸ್ತುವಾರಿಯಲ್ಲಿ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಬಾಂಡ್‌ಗಳ ಮೂಲಕ ದೊರೆತ ಹಣವನ್ನು ಕಾಂಗ್ರೆಸ್‌ ವಾಪಸ್‌ ಮಾಡಲು ಸಿದ್ಧವಿದೆಯೇ ಎಂದು ಬಿಜೆಪಿ ಕೇಳಿದೆ. ಪ್ರಚಾರದ ವೇಳೆ ಈ ವಿಷಯ ಇನ್ನಷ್ಟು ಚರ್ಚೆಗೆ ಗ್ರಾಸವಾಗಲಿದೆ.

ನಿರುದ್ಯೋಗ

ಆಡಳಿತ ಪಕ್ಷವನ್ನು ಟೀಕಿಸಲು ‘ಇಂಡಿಯಾ’ ಮೈತ್ರಿಕೂಟದ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರಗಳಲ್ಲಿ ಒಂದು ನಿರುದ್ಯೋಗ ಸಮಸ್ಯೆ. ರಾಹುಲ್‌ ಗಾಂಧಿ ಅವರು ತಮ್ಮ ‘ಭಾರತ್‌ ಜೋಡೊ ನ್ಯಾಯ ಯಾತ್ರೆ’ಯುದ್ದಕ್ಕೂ ನಿರುದ್ಯೋಗ ಸಮಸ್ಯೆಯ ಬಗ್ಗೆ ಜನರ ಗಮನ ಸೆಳೆಯುವ ಕೆಲಸ ಮಾಡಿದ್ದರು. ಯುಪಿಎ ಅವಧಿಗೆ ಹೋಲಿಸಿದರೆ ನಮ್ಮ ಸರ್ಕಾರ 1.5ರಷ್ಟು ಅಧಿಕ ಉದ್ಯೋಗಾವಕಾಶ ಸೃಷ್ಟಿಸಿದೆ ಎಂಬುದು ಪ್ರಧಾನಿ ಹೇಳಿಕೆ. 

ಸಿಎಎ

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು ಒಳಗೊಂಡಂತೆ ಕೆಲವು ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಚಾರವು ಮುನ್ನೆಲೆಗೆ ಬರಲಿದೆ. ಚುನಾವಣೆ ದಿನಾಂಕ ಪ್ರಕಟಣೆಗೆ ಕೆಲವೇ ದಿನಗಳಿರುವಾಗ ಸಿಎಎ ಜಾರಿ ಘೋಷಣೆ ಮಾಡಿದ್ದು, ಮತಗಳಿಸಲು ಬಿಜೆಪಿ ನಡೆಸಿದ ತಂತ್ರ ಎಂದೇ ವಿಶ್ಲೇಷಿಸಲಾಗಿದೆ. 

ಮೋದಿ ‘ಗ್ಯಾರಂಟಿ’ಗೆ ‘ನ್ಯಾಯ’ದ ತಿರುಗೇಟು

ಚುನಾವಣಾ ವೇಳಾಪಟ್ಟಿ ಘೋಷಣೆಗೆ ಎರಡು ವಾರಗಳು ಇದ್ದಾಗ ಪ್ರಧಾನಿ ಅವರು ವಿವಿಧ ರಾಜ್ಯಗಳಿಗೆ ಪ್ರವಾಸ ಕೈಗೊಂಡು ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದರು. ಅಭಿವೃದ್ಧಿಯ ವಿಚಾರದ ಬಗ್ಗೆ ಮಾತನಾಡುತ್ತಾ ‘ಇದು ಮೋದಿ ಗ್ಯಾರಂಟಿ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಇದನ್ನು ಎದುರಿಸಲು ಕಾಂಗ್ರೆಸ್‌ ಪಕ್ಷವು ‘ನ್ಯಾಯ’ ಭರವಸೆಗಳ ಮೂಲಕ ಮತದಾರರ ಬಳಿ ತೆರಳುವ ತಂತ್ರ ಹಾಕಿಕೊಂಡಿದೆ. ಸಮಾಜದ ವಿವಿಧ ವರ್ಗಗಳ ಜನರಿಗೆ ಐದು ‘ನ್ಯಾಯ’ಗಳ ಭರವಸೆ ನೀಡಿದೆ. ಪಕ್ಷದ ಪ್ರಚಾರದ ವಿಷಯ ಈ ಭರವಸೆಗಳನ್ನು ಕೇಂದ್ರವಾಗಿಟ್ಟುಕೊಂಡು ಇರಲಿದೆ.

ಸೈದ್ಧಾಂತಿಕ ಭಿನ್ನತೆ

ಬಿಜೆಪಿ ಮತ್ತು ಕಾಂಗ್ರೆಸ್ ಭಿನ್ನ ತತ್ವಗಳನ್ನು ಮುಂದಿಟ್ಟುಕೊಂಡು ಈ ಚುನಾವಣೆ ಎದುರಿಸುತ್ತಿದ್ದು, ಪ್ರಚಾರ ಅಭಿಯಾನವು ಸಿದ್ಧಾಂತಗಳ ನಡುವಣ ಹೋರಾಟವಾಗಿ ಪರಿಣಮಿಸಲಿದೆ. ಪ್ರಚಾರದ ಅವಧಿಯಲ್ಲಿ ಜನರ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಎರಡೂ ಮೈತ್ರಿಕೂಟಗಳು ನಡೆಸುವುದು ಖಚಿತ.      

ಅಮೃತ ಕಾಲದ ಎದುರು ಅನ್ಯಾಯ ಕಾಲ

ಬಿಜೆಪಿಯು 10 ವರ್ಷಗಳ ಆಡಳಿತದಲ್ಲಿ ಮಾಡಿದ ಸಾಧನೆಗಳನ್ನು ಮತದಾರರ ಮುಂದಿಡಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್‌ ಪಕ್ಷವು ಒಂದು ದಶಕದ ಅವಧಿಯನ್ನು ‘ಅನ್ಯಾಯ ಕಾಲ’ ಎಂದು ಟೀಕಿಸಿ, ಸರ್ಕಾರದ ವೈಫಲ್ಯಗಳನ್ನು ಎತ್ತಿತೋರಿಸಲು ಗಮನ ಹರಿಸಿದೆ. 

.
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT