ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಲೋಕಸಭಾ ಚುನಾವಣೆ | ರಮೇಶ್‌ ಕುಮಾರ್‌–ಮುನಿಯಪ್ಪ ಮುಖಾಮುಖಿ!

ಅಂತಿಮ ಘಟ್ಟ ತಲುಪಿದ ಕೋಲಾರ ಕಾಂಗ್ರೆಸ್ ಟಿಕೆಟ್‌ ಪೈಪೋಟಿ; ಸಿಎಂ, ಡಿಸಿಎಂ ಭೇಟಿ–ಹೆಚ್ಚಿದ ಕುತೂಹಲ
Published 24 ಮಾರ್ಚ್ 2024, 5:25 IST
Last Updated 24 ಮಾರ್ಚ್ 2024, 5:25 IST
ಅಕ್ಷರ ಗಾತ್ರ

ಕೋಲಾರ: ಟಿಕೆಟ್‌ ಆಕಾಂಕ್ಷಿಯಾಗಿರುವ ರಾಜ್ಯಸಭೆ ಮಾಜಿ ಸದಸ್ಯ ಎಲ್‌.ಹನುಮಂತಯ್ಯ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬೆನ್ನಲ್ಲೇ ಕೋಲಾರ ಮೀಸಲು ಕ್ಷೇತ್ರದ ಟಿಕೆಟ್‌ ವಿಚಾರ ಮತ್ತೊಂದು ತಿರುವು ಪಡೆದುಕೊಂಡಿದೆ.

ಇದರ ಬೆನ್ನಲ್ಲೇ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸಂಜೆ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಹಾಗೂ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಮುಖಾಮುಖಿಯಾಗಿದ್ದಾರೆ.

ಈ ಇಬ್ಬರೂ ಪ್ರಮುಖ ನಾಯಕರು ತಮ್ಮ ತಮ್ಮ ಬೆಂಬಲಿಗರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದಾರೆ. ಎರಡೂ ಬಣಗಳ ಮುಖಂಡರು ತಮ್ಮ ತಮ್ಮ ವಾದ ಮಂಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ‌ ಕೋಲಾರ ಕ್ಷೇತ್ರದ ಸ್ಥಿತಿಗತಿ ಬಗ್ಗೆಯೂ ಚರ್ಚೆ ಆಗಿದೆ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ಕೂಡ ಪಾಲ್ಗೊಂಡಿದ್ದರು.

ಸಭೆಯಲ್ಲಿ ಮುನಿಯಪ್ಪ ಹಾಗೂ ರಮೇಶ್‌ ಕುಮಾರ್‌ ಅಕ್ಕಪಕ್ಕವೇ ಕುಳಿತಿದ್ದು ವಿಶೇಷ. ಪರಸ್ಪರ ಮಾತಿನಲ್ಲಿ ತೊಡಗಿದ್ದು ಕಂಡುಬಂತು. ಬಹಳ ದಿನಗಳ ನಂತರ ಉಭಯರು ಮುಖಾಮುಖಿಯಾಗಿದ್ದಾರೆ. ಬಣ ರಾಜಕೀಯ ಬಿಟ್ಟು ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಖಡಕ್‌ ಸೂಚನೆ ಕೊಟ್ಟರು ಎಂದು ಮೂಲಗಳು ತಿಳಿಸಿವೆ.

ಕೆ.ಎಚ್‌.ಮುನಿಯಪ್ಪ ತಮ್ಮ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಹಾಗೂ ಬೆಂಬಲಿಗರೊಂದಿಗೆ ವರಿಷ್ಠರನ್ನು ಭೇಟಿ ಮಾಡಿದ್ದಾರೆ. 33 ವರ್ಷಗಳಿಂದ ಕ್ಷೇತ್ರದಲ್ಲಿ ಒಡನಾಟ ಹೊಂದಿದ್ದು, ಗೆಲ್ಲಿಸಿಕೊಡುವ ಭರವಸೆ ಇದೆ ಎಂಬ ವಾದ ಮಂಡಿಸಿದ್ದಾರೆ.

ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಕೋಲಾರ ಕ್ಷೇತ್ರದ ಟಿಕೆಟ್‌ ಕೊಡಬೇಕೆಂದು ರಮೇಶ್‌ ಕುಮಾರ್‌ ಕೂಡ ಕೋರಿದ್ದಾರೆ. ಅಲ್ಲದೇ, ತಮ್ಮ ಅಭ್ಯರ್ಥಿ, ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಅವರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿ ಹಕ್ಕೊತ್ತಾಯ ಮಂಡಿಸಿದ್ದಾರೆ.

ರಮೇಶ್‌ ಕುಮಾರ್‌ ಒಂದು ಹೆಜ್ಜೆ ಮುಂದೆ ಹೋಗಿ, ‘ಈ ಬಾರಿ ಸಿ.ಎಂ.ಮುನಿಯಪ್ಪ ಅಭ್ಯರ್ಥಿಯಾಗಲಿ; ಅದಕ್ಕೆ ತಮ್ಮ ಸಹಕಾರ ಕೊಡಿ’ ಎಂದು ನೇರವಾಗಿ ಕೆ.ಎಚ್‌.ಮುನಿಯಪ್ಪ ಅವರಲ್ಲಿ ಕೇಳಿರುವುದು ಗೊತ್ತಾಗಿದೆ. ಆಗ ಅವರು ಕೂಡ, ‘ಕ್ಷೇತ್ರದ ವಿಚಾರ ನನಗೆ ಚೆನ್ನಾಗಿ ಗೊತ್ತಿದೆ. ಅಳಿಯ ಚಿಕ್ಕಪೆದ್ದಣ್ಣ ಸ್ಪರ್ಧಿಸಲು ನಿರ್ಧರಿಸಿದ್ದು ಸಹಕಾರ ನೀಡಿ’ ಎಂದು ಕೋರಿದರು ಎನ್ನಲಾಗಿದೆ.

ಟಿಕೆಟ್‌ ವಿಚಾರಕ್ಕಿಂತ ಮುಖ್ಯವಾಗಿ ಎರಡೂ ಬಣಗಳು ಭೇಟಿಯಾಗಿ ಖುಷಿಯಾಗಿ ಮಾತನಾಡಿರುವುದು ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಆಶಾಭಾವ ಮೂಡಿಸಿದೆ ಎಂಬುದಾಗಿ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

ಟಿಕೆಟ್‌ ಆಕಾಂಕ್ಷಿ ಸಿ.ಎಂ.ಮುನಿಯಪ್ಪ, ಸಚಿವ ಡಾ.ಎಂ.ಸಿ.ಸುಧಾಕರ್‌, ಶಾಸಕರಾದ ಕೊತ್ತೂರು ಮಂಜುನಾಥ್‌, ಕೆ.ವೈ.ನಂಜೇಗೌಡ, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಮುಖಂಡರಾದ ವರದೇನಹಳ್ಳಿ ವೆಂಕಟೇಶ್‌, ವಕ್ಕಲೇರಿ ರಾಜಪ್ಪ, ಅಂಬರೀಷ್‌, ನಾರಾಯಣಸ್ವಾಮಿ, ನಂದಿನಿ ಪ್ರವೀಣ್‌, ಚಂಜಿಮಲೆ ರಮೇಶ್‌, ಜಪನಹಳ್ಳಿ ನವೀನ್‌, ಗೊಳ್ಳಹಳ್ಳಿ ಶಿವಪ್ರಸಾದ್‌ ಈ ಸಂದರ್ಭದಲ್ಲಿ ಇದ್ದರು.

ಟಿಕೆಟ್‌ ಆಕಾಂಕ್ಷಿ ಕೆ.ಜಿ.ಚಿಕ್ಕಪೆದ್ದಣ್ಣ, ಸಚಿವ ಮುನಿಯಪ್ಪ ಬೆಂಬಲಿಗರಾದ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ ಬಾಬು ಕೂಡ ಪಾಲ್ಗೊಂಡಿದ್ದರು.

ಬೆಂಗಳೂರಿನಲ್ಲಿ ಶನಿವಾರ ಕೆ.ಎಚ್‌.ಮುನಿಯಪ್ಪ ಬೆಂಬಲಿಗರಾದ ಕೆ.ಜಯದೇವ್‌ ಪ್ರಸಾದ್‌ ಬಾಬು ಘಟಬಂಧನ್‌ ಮುಖಂಡರಾದ ವಕ್ಕಲೇರಿ ರಾಜಪ್ಪ ಅಂಬರೀಷ್‌ ಜೊತೆಯಲ್ಲಿ ಕುಳಿತಿದ್ದ ಕ್ಷಣ
ಬೆಂಗಳೂರಿನಲ್ಲಿ ಶನಿವಾರ ಕೆ.ಎಚ್‌.ಮುನಿಯಪ್ಪ ಬೆಂಬಲಿಗರಾದ ಕೆ.ಜಯದೇವ್‌ ಪ್ರಸಾದ್‌ ಬಾಬು ಘಟಬಂಧನ್‌ ಮುಖಂಡರಾದ ವಕ್ಕಲೇರಿ ರಾಜಪ್ಪ ಅಂಬರೀಷ್‌ ಜೊತೆಯಲ್ಲಿ ಕುಳಿತಿದ್ದ ಕ್ಷಣ

ಹನುಮಂತಯ್ಯ ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷ–ಟಿಕೆಟ್‌ಗೆ ಹೊಸ ತಿರುವು ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣಗೆ ಟಿಕೆಟ್‌ ಕೊಡಿ–ಮುನಿಯಪ್ಪ ಹಕ್ಕೊತ್ತಾಯ ಬಲಗೈಗೆ ಟಿಕೆಟ್‌–ರಮೇಶ್‌ ಕುಮಾರ್‌ ಬಣದ ಪಟ್ಟು

ಜಿಲ್ಲಾ ಕಾಂಗ್ರೆಸ್‌ನ ಮುಖಂಡರೆಲ್ಲಾ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ. ಯಾರೇ ಅಭ್ಯರ್ಥಿಯಾ‌ದರೂ ಗೆಲ್ಲಿಸಬೇಕು. ಸಿಎಂ ಡಿಸಿಎಂ ನೇತೃತ್ವದ ಸಭೆ ಫಲಪ್ರದವಾಗಿದ್ದು ಯಾವುದೇ ಬಣ ಇಲ್ಲ
ಸಿ.ಲಕ್ಷ್ಮಿನಾರಾಯಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೋಲಾರ
ಕೆ.ಎಚ್‌.ಮುನಿಯಪ್ಪ ಹಾಗೂ ರಮೇಶ್‌ ಕುಮಾರ್‌ ಪರಸ್ಪರ ಮುಖಾಮುಖಿಯಾಗಿ ವಾತಾವರಣ ತಿಳಿಗೊಳಿಸಿದ್ದು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಊರುಬಾಗಿಲು
ಶ್ರೀನಿವಾಸ್‌ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಕೋಲಾರ
ಜೊತೆಗೆ ಹೋಗಬೇಕು ಕೋಲಾರದಲ್ಲಿ ಕಾಂಗ್ರೆಸ್‌ ಉಳಿಯಬೇಕು. ಹಿಂದಿನದ್ದು ಮರೆಯಬೇಕೆಂದು ಮುನಿಯಪ್ಪ ರಮೇಶ್‌ ಕುಮಾರ್‌ ಮಾತನಾಡಿದರು. ಟಿಕೆಟ್‌ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು
ಕೆ.ಜಯದೇವ್‌ ಜಿಲ್ಲಾ ಕಾಂಗ್ರೆಸ್‌ ಎಸ್ಸಿ ಘಟಕದ ಅಧ್ಯಕ್ಷ ಕೋಲಾರ
ಪ್ರಚಾರ ಸಮಿತಿ ಉಪಾಧ್ಯಕ್ಷನನ್ನಾಗಿ ಮಾಡಿದ ಪಟ್ಟಿಯನ್ನು ರಾಜ್ಯದಿಂದ ಬಹಳ ಹಿಂದೆಯೇ ಕಳುಹಿಸಿದ್ದು ಈಗ ಘೋಷಣೆ ಆಗಿದೆ. ನಾನಿನ್ನೂ ಟಿಕೆಟ್‌ ರೇಸ್‌ನಲ್ಲಿ ಇದ್ದೇನೆ ಎಲ್‌.ಹನುಮಂತಯ್ಯ
ಕೋಲಾರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ

ಬಣಗಳ ಮುಖಂಡರಲ್ಲಿ ಖುಷಿ! ಕೋಲಾರದ ಕಾಂಗ್ರೆಸ್ ಕಚೇರಿಯಲ್ಲಿ ಈಚೆಗೆ ನಡೆದ ಜಗಳದ ನಂತರ ಮೊದಲ ಬಾರಿ ಘಟಬಂಧನ್‌ ಹಾಗೂ ಕೆ.ಎಚ್.ಮುನಿಯಪ್ಪ ಬೆಂಬಲಿಗರು ಮುಖಾಮುಖಿಯಾದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಉಭಯ ಬಣಗಳ ಮುಖಂಡರು ಪರಸ್ಪರ ಹಸ್ತಲಾಘವ ಮಾಡಿಕೊಂಡು ಕುಶಲೋಪರಿಯಲ್ಲಿ ತೊಡಗಿದ್ದರು. ಒಂದೇ ಸೋಪಾದಲ್ಲಿ ಅಕ್ಕಪಕ್ಕ ಕುಳಿತು ಚರ್ಚಿಸಿದ್ದು ಕಂಡಬಂತು.

ಹನುಮಂತಯ್ಯಗೆ ಟಿಕೆಟ್‌ ಅನುಮಾನ? ರಾಜ್ಯಸಭೆ ಮಾಜಿ ಸದಸ್ಯ ಎಲ್‌.ಹನುಮಂತಯ್ಯ ಕೂಡ ಕೋಲಾರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಶನಿವಾರ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್‌ ಅನುಮಾನ ಎನ್ನಲಾಗುತ್ತಿದೆ. ಅವರಿನ್ನೂ ಟಿಕೆಟ್‌ ಆಸೆ ಕೈಬಿಟ್ಟಿಲ್ಲ. ಕೊನೆ ಕ್ಷಣದ ಬದಲಾವಣೆ ಆಗಬಹುದೆಂಬ ಭರವಸೆಯಲ್ಲಿದ್ದಾರೆ. ‘ಈಗಾಗಲೇ ವಿಜಯಪುರ ಕಲಬುರಗಿಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ. ಚಾಮರಾಜನಗರದಲ್ಲೂ ಬಲಗೈ ಸಮುದಾಯಕ್ಕೆ ಸಿಗುವ ಸಾಧ್ಯತೆ ಇದೆ. ಚಿತ್ರದುರ್ಗದಲ್ಲಿ ಎಡಗೈ ಸಮುದಾಯಕ್ಕೆ ಸಿಕ್ಕಿದ್ದು ಕೋಲಾರದಲ್ಲೂ ಇದೇ ಸಮುದಾಯಕ್ಕೆ ಸಿಗುತ್ತದೆ’ ಎಂಬ ವಿಶ್ವಾಸದಲ್ಲಿ ಅವರಿದ್ದಾರೆ. ಆದರೆ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಕೂಡ ಇದೇ ಸಮುದಾಯಕ್ಕೆ ಸೇರಿದ್ದು ಅವರೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT