ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಿ ಸಮಾಜ ಎಸ್ಟಿ ಪಟ್ಟಿ ಸೇರ್ಪಡೆಗೆ ಸರ್ವ ಪ್ರಯತ್ನ ಮಾಡುವೆ: ಖರ್ಗೆ

Published 4 ಮೇ 2024, 22:36 IST
Last Updated 4 ಮೇ 2024, 22:36 IST
ಅಕ್ಷರ ಗಾತ್ರ

ಕಲಬುರಗಿ: ‘ಹಲವು ದಿನಗಳಿಂದ ನಾನು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ದೇಶವನ್ನು ಸುತ್ತಾಡುತ್ತಿದ್ದು, ಹೋದಲ್ಲೆಲ್ಲ ಕಾಂಗ್ರೆಸ್ ನೇತೃತ್ವದ ಒಕ್ಕೂಟದ ಬಗ್ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ನಮ್ಮ ಸರ್ಕಾರ ಕೇಂದ್ರದಲ್ಲಿ ಬರುವುದು ನಿಶ್ಚಿತವಾಗಿದ್ದು, ಆಗ ಕೋಲಿ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಲು ಎಲ್ಲ ಬಗೆಯ ಪ್ರಯತ್ನ ಮಾಡುತ್ತೇನೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೋಲಿ ಸಮಾಜದ ಸಹಸ್ರಾರು ಜನರಿಗೆ ಅಭಯ ನೀಡಿದರು.

ನಗರದ ಎನ್.ವಿ. ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಕೋಲಿ, ಕಬ್ಬಲಿಗ ಸಮಾಜದ ರಾಜ್ಯಮಟ್ಟದ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಲಬುರಗಿ ಭಾಗದಲ್ಲಿ ಹೆಚ್ಚಾಗಿರುವ ಕೋಲಿ ಸಮಾಜದವರನ್ನು ಎಸ್ಟಿ ಪ‍ಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಬಹಳ ಹಳೆಯದು. ನಾನು ಕೇಂದ್ರ ಸಚಿವನಾಗಿದ್ದ ಸಂದರ್ಭದಲ್ಲಿ ಬಾಬುರಾವ ಚಿಂಚನಸೂರ, ತಿಪ್ಪಣ್ಣಪ್ಪ ಕಮಕನೂರ ಅವರು ತಮ್ಮ ಸಮಾಜದ ಮುಖಂಡರೊಂದಿಗೆ ಬಂದು ಎಸ್ಟಿ ಪಟ್ಟಿಯ ಪ್ರಸ್ತಾವ ಆಯೋಗದಲ್ಲಿ ದೂಳು ತಿನ್ನುತ್ತಾ ಇರುವ ಬಗ್ಗೆ ಗಮನ ಸೆಳೆದಿದ್ದರು. ತಕ್ಷಣವೇ ಅಲ್ಲಿನ ಅಧಿಕಾರಿಯೊಂದಿಗೆ ಮಾತನಾಡಿ ಇವರನ್ನು ಕಳಿಸಿಕೊಟ್ಟೆ’ ಎಂದರು.

‘ನಮ್ಮ ಸರ್ಕಾರ ಬಂದ ಕೂಡಲೇ ನೀವು ಯಾರಿಗೆ ಹೇಳು ಅನ್ನುತ್ತೀರೋ ಅವರಿಗೆ ಹೇಳುತ್ತೇನೆ. ಯಾರ ಹತ್ತಿರ ಕರೆದೊಯ್ಯುತ್ತೀರೋ ಅಲ್ಲಿಗೆ ಬರುತ್ತೇನೆ’ ಎಂದು ಭರವಸೆ ನೀಡಿದರು.

‘371 (ಜೆ) ಕಲಂ ಜಾರಿಗಾಗಿ ನಾನು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಸೋನಿಯಾ ಗಾಂಧಿ ಅವರು ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಸೂಚನೆ ನೀಡಿದಾಗ ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಮನವಿ ಮಾಡಿದ್ದೆ. ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದರೆ ಖಂಡಿತ ಮಾಡೋಣ ಎಂದಿದ್ದರು. ಆದರೆ, ಸ್ಪಷ್ಟ ಬಹುಮತ ಬರದೇ ಮೈತ್ರಿ ಸರ್ಕಾರ ಬಂದಿತು. ಆದರೂ, ಎಲ್ಲ ಸಂಸದರನ್ನು ಒಪ್ಪಿಸಿ ಕೇವಲ ಒಂಬತ್ತು ದಿನಗಳಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಿಸುವಲ್ಲಿ ಯಶಸ್ವಿಯಾದೆ. ಇದಕ್ಕಾಗಿ ಹಲವು ಜನ ಪ್ರಯತ್ನ ಮಾಡಿರಬಹುದು. ಆದರೆ, ನಾನು ಪರೀಕ್ಷೆ ಬರೆದು ಪಾಸಾಗಿದ್ದೇನೆ’ ಎನ್ನುವ ಮೂಲಕ ಈ ಕಾಯ್ದೆ ಜಾರಿಗಾಗಿ ತಾವು ನಿರಂತರ ಶ್ರಮ ಹಾಕಿದ್ದನ್ನು ಮನದಟ್ಟು ಮಾಡಿಸಿದರು.

ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮಾತನಾಡಿ, ‘ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುತ್ತೇನೆ ಎಂದು ಹೇಳಿದ ಸಂಸದ ಉಮೇಶ ಜಾಧವ ನಂಬರ್ 1 ಸುಳ್ಳುಗಾರ. ಅವರ ಮಾತನ್ನು ನಂಬಿ ಮೋಸಹೋದೆ. ನನಗೆ ತಂದೆ, ತಾಯಿ, ಬಂಧು ಬಳಗ ಎಲ್ಲವೂ ನನ್ನ ಸಮಾಜ. ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಿಯೇ ನಾನು ಸಾಯುತ್ತೇನೆ. ಅದಕ್ಕಾಗಿಯೇ ಬಿಜೆಪಿಯವರು ನನಗೆ ಕೊಟ್ಟಿದ್ದ ಎಂಎಲ್ಸಿ ಸ್ಥಾನ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ನನ್ನ ಪತ್ನಿಗೆ ನೀಡಿದ್ದ ಭಾರತೀಯ ಆಹಾರ ನಿಗಮದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಲು ಮತ್ತೆ ಕಾಂಗ್ರೆಸ್ ಸೇರಿದ್ದೇವೆ’ ಎಂದರು.

ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಲಿದ್ದು, ನಮ್ಮ ನಾಯಕರಾದ ಖರ್ಗೆ ಅವರು ಪ್ರಧಾನಿಯಾಗಲಿದ್ದಾರೆ. ತಕ್ಷಣವೇ ಕೋಲಿ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಲಿದ್ದಾರೆ. ಹೀಗಾಗಿ, ಕೋಲಿ ಸಮಾಜದ ಒಂದು ಮತವೂ ಬಿಜೆಪಿಗೆ ಹೋಗದಂತೆ ತಡೆಯಬೇಕು’ ಎಂದು ಮನವಿ ಮಾಡಿದರು.

ಸಚಿವರಾದ ರಾಮಲಿಂಗಾರೆಡ್ಡಿ, ಡಾ. ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ, ವಿಧಾನಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ಸಮಾಜದ ಮುಖಂಡರಾದ ಭೀಮಣ್ಣ ಸಾಲಿ, ಶರಣಪ್ಪ ಮಾನೇಗಾರ, ರಾಜಗೋಪಾಲರೆಡ್ಡಿ ಮುದಿರಾಜ, ಸಾಯಬಣ್ಣ ನೀಲಪ್ಪಗೋಳ, ಮಾಜಿ ಶಾಸಕ ಶರಣಪ್ಪ ಸುಣಗಾರ, ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಿ.ಕೆ. ಮೋಹನ್ ಕುಮಾರ್, ಲಚ್ಚಪ್ಪ ಜಮಾದಾರ, ಸಾಯಬಣ್ಣ ಬೋರಬಂಡಾ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಶರಣಪ್ಪ ನಾಟೀಕಾರ, ಹುಲಿಗೆಪ್ಪ ಕನಕಗಿರಿ ಇತರರು ಭಾಗವಹಿಸಿದ್ದರು.

ಖರ್ಗೆ ಅವರ ಶ್ರಮ ಇಲ್ಲದಿದ್ದರೆ 371 (ಜೆ) ಕಲಂ ಸಾಧ್ಯವಾಗುತ್ತಿರಲಿಲ್ಲ ಎಂದು ರಾಜ್ಯಸಭಾ ಸದಸ್ಯರಾಗಿದ್ದ ಬಿಜೆಪಿಯ ಬಸವರಾಜ ಪಾಟೀಲ ಸೇಡಂ ಸಂಸತ್ತಿನಲ್ಲಿ ಹೇಳಿದ್ದರು. ನೀವು (ಬಿಜೆಪಿಯವರು) ಕನಿಷ್ಠ ನಿಮ್ಮವರ ಮಾತನ್ನಾದರೂ ಕೇಳಿಸಿಕೊಳ್ಳಿ
ಮಲ್ಲಿಕಾರ್ಜುನ ಖರ್ಗೆ,ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT