ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ‘ಚೊಂಬು–ಚಿಪ್ಪು’ ಜಟಾಪಟಿ ತೀವ್ರ

ಪ್ರಧಾನಿ, ಮಾಜಿ ಪ್ರಧಾನಿ ವಿರುದ್ಧ ಸಿ.ಎಂ ವಾಗ್ದಾಳಿ; ‘ಚೊಂಬು’ ಜಾಹೀರಾತಿಗೆ ಬಿಜೆಪಿ ಆಕ್ರೋಶ
Published 21 ಏಪ್ರಿಲ್ 2024, 21:43 IST
Last Updated 21 ಏಪ್ರಿಲ್ 2024, 21:43 IST
ಅಕ್ಷರ ಗಾತ್ರ

ಬಿಜೆಪಿ ವಿರುದ್ಧ ಕಾಂಗ್ರೆಸ್‌ ಪ್ರಯೋಗಿಸಿದ ‘ಚೊಂಬು’ ಅಸ್ತ್ರ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ ವಿರುದ್ಧ ಪ್ರತ್ಯಸ್ತ್ರವಾಗಿ ಬಿಜೆಪಿ ‘ತೆಂಗಿನಕಾಯಿ ಚಿಪ್ಪು’ ಅನ್ನು ಮುನ್ನೆಲೆಗೆ ತಂದಿದೆ. ರಾಜ್ಯದ ವಿವಿಧೆಡೆ ಚೊಂಬು– ಚಿಪ್ಪು ಕುರಿತು ಕಾಂಗ್ರೆಸ್‌, ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ ವಾಕ್ಸಮರ ನಡೆಸಿವೆ. ಸೋಮವಾರ (ಏ.22) ರಾಜ್ಯವ್ಯಾಪಿ ಚಿಪ್ಪು ಪ್ರದರ್ಶಿಸಿ ಪ್ರತಿಭಟಿಸಲು ಬಿಜೆಪಿ ನಿರ್ಧರಿಸಿದೆ 

‘ಅಕ್ಷಯಪಾತ್ರೆ ಅಲ್ಲ, ಸಾಲದ ಪಾತ್ರೆ’

ಕೋಲಾರ/ಬಂಗಾರಪೇಟೆ: ‘ರಾಜ್ಯಕ್ಕೆ ಮೋದಿ ಕೊಟ್ಟ ಖಾಲಿ ಚೊಂಬನ್ನು ದೇವೇಗೌಡರು ಅಕ್ಷಯಪಾತ್ರೆ ಎಂದು ಬಣ್ಣಿಸಿದ್ದಾರೆ. ಖಾಲಿ ಚೊಂಬು ಗೌಡರ ಕಣ್ಣಿಗೆ ಅಕ್ಷಯಪಾತ್ರೆಯಂತೆ ಕಂಡಿದೆ. ಅದು ಅಕ್ಷಯಪಾತ್ರೆ ಅಲ್ಲ, ಸಾಲದ ಪಾತ್ರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.

ಬಂಗಾರಪೇಟೆಯಲ್ಲಿ ಭಾನುವಾರ ಕೋಲಾರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್‌ ಪರ ರೋಡ್‌ ಶೋನಲ್ಲಿ ಅವರು ಮಾತನಾಡಿದರು.

‘ಮೋದಿ ಶ್ರೀಮಂತರ ಪಾಲಿನ ಅಕ್ಷಯಪಾತ್ರೆ. ನಾಡಿನ ಬಡಜನರ ಪಾಲಿಗೆ ಖಾಲಿ ಚೊಂಬು ಅಷ್ಟೆ. ಶ್ರೀಮಂತರ, ಉದ್ಯಮಿಗಳ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಪ್ರಧಾನಿ, ರೈತರ ಸಾಲಮನ್ನಾ ಮಾಡಿ ಎಂದರೆ ದುಡ್ಡು ಇಲ್ಲ ಎನ್ನುತ್ತಾರೆ. ದೇವೇಗೌಡರೇ, ಆಗ ಎಲ್ಲಿ ಹೋಗಿತ್ತು ತಾವು ಹೇಳಿದ ಅಕ್ಷಯಪಾತ್ರೆ? ಮಾಜಿ ಪ್ರಧಾನಿಯಾಗಿ ಇಷ್ಟೊಂದು ಸುಳ್ಳು ಹೇಳಬಾರದು’ ಎಂದರು.

‘ಹಾಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಒಂದೇ ವೇದಿಕೆಯಲ್ಲಿ ಪೈಪೋಟಿ ಮೇಲೆ ಸುಳ್ಳು ಹೇಳಿದ್ದಾರೆ. ಬೆಂಗಳೂರನ್ನು ಟ್ಯಾಂಕರ್ ಸಿಟಿ ಎಂದು ಮೋದಿ ಜರೆದಿದ್ದಾರೆ. ಬೆಂಗಳೂರಿನ ಮೇಲೆ ಕಾಳಜಿ ಇದ್ದರೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ. ನಾಳೆಯೇ ಕೆಲಸ ಆರಂಭಿಸುತ್ತೇವೆ’ ಎಂದೂ ಸವಾಲು ಹಾಕಿದರು.

‘ಮೋದಿ ಪ್ರಧಾನಿ ಆದ ಮೇಲೆ ರೈತರು, ಮಹಿಳೆಯರು,‌ ಬಡವರು, ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರಿಗೆ ಏನೂ ಕೊಡಲಿಲ್ಲ. ರಾಜ್ಯಕ್ಕೆ ಭಾರಿ ಅನ್ಯಾಯ ಮಾಡಿ ಖಾಲಿ ಚೊಂಬು ಕೊಟ್ಟಿದ್ದಾರೆ. ಆದರೆ, ದೇವೇಗೌಡರು ಮಾತನಾಡುತ್ತಾ ಮನಮೋಹನ್ ಸಿಂಗ್ ಖಾಲಿ ಚೊಂಬು ಕೊಟ್ಟಿದ್ದರು‌‌, ಮೋದಿ ಅಕ್ಷಯಪಾತ್ರೆ ಮಾಡಿದ್ದಾರೆ ಎಂಬುದಾಗಿ ಹೇಳಿದ್ದಾರೆ. ದೇಶದ ಸಾಲವನ್ನು ₹187 ಲಕ್ಷ ಕೋಟಿಗೆ ಏರಿಸಿರುವುದು ಅಕ್ಷಯಪಾತ್ರೆಯೋ, ಖಾಲಿ ಚೊಂಬೋ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

‘ಪ್ರಧಾನಿಯಾಗಲು ಮೋದಿ ನಾಲಾಯಕ್ಕು’
‘ದೇವೇಗೌಡರು ಏಕೆ ಇಷ್ಟು ಕೀಳುಮಟ್ಟಕ್ಕೆ, ಕೆಳಮಟ್ಟಕ್ಕೆ ಇಳಿದಿದ್ದಾರೆ? ನಿಮ್ಮ ಜಾತ್ಯತೀತ ಸಿದ್ಧಾಂತ ಏನಾಯಿತು’ ಎಂದು ಸಿದ್ದರಾಮಯ್ಯ ಶಿಡ್ಲಘಟ್ಟದ ರೋಡ್ ಶೋ ವೇಳೆ ಪ್ರಶ್ನಿಸಿದರು. ‘ಖಾಲಿ ಚೊಂಬನ್ನು ಅಕ್ಷಯಪಾತ್ರೆ ಎಂದು ದೇವೇಗೌಡರು ರೈಲು ಬಿಡುತ್ತಿದ್ದಾರೆ. ಗೌಡರೇ, ನಿಮಗೆ ನಾಚಿಕೆ ಆಗಬೇಕು. ಕುಟುಂಬದ ಸ್ವಾರ್ಥಕ್ಕಾಗಿ ಕೋಮುವಾದಿಗಳೊಂದಿಗೆ ಕೈಜೋಡಿಸಿಬಿಟ್ಟಿರಾ’ ಎಂದು ಕೇಳಿದರು.
ಇಂದು ಬಿಜೆಪಿಯಿಂದ ‘ಚಿಪ್ಪು’ ಚಳವಳಿ

ದಾವಣಗೆರೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ನೀಡಿರುವ ‘ಚೊಂಬು’ ಜಾಹೀರಾತಿಗೆ ಕಿಡಿಕಾರಿರುವ ಬಿಜೆಪಿ, ಏಪ್ರಿಲ್‌ 22ರಂದು ರಾಜ್ಯದಾದ್ಯಂತ ‘ಚಿಪ್ಪು ಚಳವಳಿ’ ಹಮ್ಮಿಕೊಳ್ಳಲು ನಿರ್ಧರಿಸಿದೆ.

ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತೆಂಗಿನಕಾಯಿಯ ‘ಚಿಪ್ಪು’ ಪ್ರದರ್ಶಿಸಿ‌ದ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು, ‘ಕಾಂಗ್ರೆಸ್‌ ಪಕ್ಷವು ನಾಡಿನ ಜನತೆಗೆ ಚಿಪ್ಪು ನೀಡಿದೆ’ ಎಂದರು.

ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾದರೂ ಕ್ರಮ ಕೈಗೊಂಡಿಲ್ಲ. ರೈತರಿಗೆ ಬರ ಪರಿಹಾರ ನೀಡಿಲ್ಲ, ಬಿಜೆಪಿ ಸರ್ಕಾರವಿದ್ದಾಗ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುತ್ತಿದ್ದ ₹4,000 ರದ್ದು ಮಾಡಿ ರೈತರಿಗೆ ಚಿಪ್ಪು ನೀಡಿದೆ. ವಿದ್ಯಾರ್ಥಿವೇತನ ರದ್ದತಿ ಮೂಲಕ ವಿದ್ಯಾರ್ಥಿಗಳಿಗೆ, ಹಾಲಿನ ಪ್ರೋತ್ಸಾಹಧನ ರದ್ದು ಮಾಡಿ ಹಾಲು ಉತ್ಪಾದಕರಿಗೆ, ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ₹11,146 ಕೋಟಿಯನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸಿ ಮೂಲಕ ಪರಿಶಿಷ್ಟರ ಕೈಗೂ ಈ ಸರ್ಕಾರ ಚಿಪ್ಪು ನೀಡಿದೆ. ಇದನ್ನು ಖಂಡಿಸಿ ದಾವಣಗೆರೆಯಲ್ಲಿ ಬೃಹತ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಮೈ ಬ್ರದರ್’ ನೀತಿಯಿಂದ ದುಷ್ಕೃತ್ಯ ಹೆಚ್ಚಳ: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಭಯೋತ್ಪಾದಕರು ಹಾಗೂ ಉಗ್ರಗಾಮಿಗಳ ಓಲೈಸುತ್ತಿದೆ. ಸರ್ಕಾರದ ‘ಮೈ ಬ್ರದರ್’ ಪಾಲಿಸಿಯಿಂದ ದುಷ್ಕೃತ್ಯಗಳು ಹೆಚ್ಚಾಗಿವೆ. ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟ ಮಾಡಿದವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಎಸ್‌ಡಿಪಿಐ, ಪಿಎಫ್‌ಐ, ಕೆಎಫ್‌ಡಿ ಮೇಲಿದ್ದ 175 ಪ್ರಕರಣಗಳನ್ನು ರದ್ದುಪಡಿಸಿ 1,600 ಜನರನ್ನು ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸೈಬರ್ ಅಪರಾಧ ಶೇ 41ರಷ್ಟು ಜಾಸ್ತಿ ಆಗಿದೆ’ ಎಂದು ಅವರು ಆರೋಪಿಸಿದರು.

ಗ್ಯಾರಂಟಿ ಹೆಸರಿನಲ್ಲಿ ದಿವಾಳಿ ಮಾಡಿದ್ದೇ ಹೆಗ್ಗಳಿಕೆ –ಬೊಮ್ಮಾಯಿ

ಬೆಂಗಳೂರು: ‘ಗ್ಯಾರಂಟಿ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡಿದ್ದೂ ಅಲ್ಲದೇ, ಬಿಜೆಪಿ ಸರ್ಕಾರದ ರೈತ, ವಿದ್ಯಾರ್ಥಿ ಮತ್ತು ದಲಿತರ ಯೋಜನೆಗಳನ್ನು ಕಡಿತ ಮಾಡಿ ಜನರಿಗೆ ಚೊಂಬು ಕೊಟ್ಟಿರುವುದು ಕಾಂಗ್ರೆಸ್‌ ಸರ್ಕಾರದ ಹೆಗ್ಗಳಿಕೆ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ ಶಾಶ್ವತ ಯೋಜನೆಗಳನ್ನು ಕೊಟ್ಟಿದ್ದಾರೆ. ಈ ಮೂಲಕ ಮೋದಿಯವರು ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ ಎಂದರು.

‘ಮೋದಿಯವರು ಶಾಶ್ವತ ಯೋಜನೆಗಳ ಮೂಲಕ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದಾರೆ. ಆರು ಲಕ್ಷ ಬೀದಿ ಬದಿ ವ್ಯಾಪಾರಸ್ಥರಿಗೆ ಅನುದಾನ, 9 ಲಕ್ಷ ಮನೆಗಳಿಗೆ ಉಜ್ವಲ ಗ್ಯಾಸ್‌ ಸಂಪರ್ಕ, ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 4 ಲಕ್ಷ ಮನೆ, 12 ಲಕ್ಷ ಶೌಚಾಲಯ ನಿರ್ಮಿಸಿದೆ. ಕೋವಿಡ್‌ ವೇಳೆ ಉಚಿತವಾಗಿ 10 ಕೆ.ಜಿ.ಅಕ್ಕಿ ಕೊಟ್ಟಿದ್ದು ಮೋದಿ. ಕಾಂಗ್ರೆಸ್‌ ಸರ್ಕಾರ ಒಂದು ಕಾಳೂ ಕೊಟ್ಟಿಲ್ಲ. ಇದನ್ನು ಕಾಂಗ್ರೆಸ್‌ ಚೊಂಬಿಗೆ ಸೇರಿಸಿಕೊಳ್ಳಲಿ’ ಎಂದರು.

ಯುಪಿಎ ಅವಧಿಗಿಂತಲೂ ಎನ್‌ಡಿಎ ಅವಧಿಯಲ್ಲಿ ರಾಜ್ಯಕ್ಕೆ ತೆರಿಗೆ ಪಾಲಿನ ಹಣ ಹಾಗೂ ಕೇಂದ್ರದ ಅನುದಾನ ರಾಜ್ಯಕ್ಕೆ ಹೆಚ್ಚು ಬಂದಿದೆ. ಹಾಗಿದ್ದರೆ ಚೊಂಬು ಕೊಟ್ಟಿದ್ದು ಯಾರು? ಕಾಂಗ್ರೆಸ್ಸಾ? ಬಿಜೆಪಿಯಾ ಎಂದು ಪ್ರಶ್ನಿಸಿದರು.

ದೇವೇಗೌಡರ ಅಕ್ಷಯಪಾತ್ರೆ ತುಂಬಿಲ್ಲವೇ?

ತುಮಕೂರು: ದೇವೇಗೌಡರ ಕುಟುಂಬಕ್ಕೆ 1966ರಲ್ಲಿ ಕೇವಲ 12 ಎಕರೆ ಭೂಮಿ ಇತ್ತು. ಇವತ್ತು ಎಷ್ಟು ಎಕರೆ ಇದೆ? ದೇವೇಗೌಡರ ಅಕ್ಷಯಪಾತ್ರೆ ಇನ್ನೂ ತುಂಬಿಲ್ಲವೇ ಎಂದು ಸಹಕಾರ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ.

ಭಾನುವಾರ ಇಲ್ಲಿ ಜಾತ್ಯತೀತ ಯುವ ವೇದಿಕೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ನ ಖಾಲಿ ಚೊಂಬನ್ನು ಮೋದಿಯವರು ಅಕ್ಷಯಪಾತ್ರೆ ಮಾಡಿದ್ದಾರೆ’ ಎಂಬ ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿದರು.

ದೇವೇಗೌಡರು ಜಾತಿವಾದಿ ಅಲ್ಲ, ಕುಟುಂಬವಾದಿ. ಜೆಡಿಎಸ್‌ ಪಕ್ಷವು ಗೌಡರ ಅಳಿಯ, ಮಗ, ಮೊಮ್ಮಗ... ಹೀಗೆ ಒಂದು ಕುಟುಂಬಕ್ಕೆ ಸೀಮಿತವಾಗಿದೆ. ಕಳೆದ ಚುನಾವಣೆಯಲ್ಲಿ ತುಮಕೂರಿನಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ ಅವರೇ ಚುನಾವಣೆಗೆ ನಿಂತರು. ಮುದ್ದಹನುಮೇಗೌಡ ಒಕ್ಕಲಿಗರಲ್ಲವೇ? ಎಂದು ಪ್ರಶ್ನಿಸಿದರು.

‘ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ದೇವೇಗೌಡರು ಈ ಹಿಂದೆ ಹೇಳಿದ್ದರು. ಈಗ ಮೋದಿಯೇ ದೇಶ ಉಳಿಸಿದ್ದಾರೆ ಎನ್ನುತ್ತಿದ್ದಾರೆ. ಅವರು ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT