ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ: ದೇವೇಗೌಡ–ಡಿ.ಕೆ ಕುಟುಂಬದ ಪ್ರತಿಷ್ಠೆ ಕಣ

Published 30 ಮಾರ್ಚ್ 2024, 5:01 IST
Last Updated 30 ಮಾರ್ಚ್ 2024, 5:01 IST
ಅಕ್ಷರ ಗಾತ್ರ

ರಾಮನಗರ: ಕಾಂಗ್ರೆಸ್ ಭದ್ರಕೋಟೆಯಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಹಾಲಿ ಸಂಸದ ಡಿ.ಕೆ. ಸುರೇಶ್ ನಾಲ್ಕನೇ ಸಲ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅವರಿಗೆ ಎದುರಾಳಿಯಾಗಿ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರ ಅಳಿಯ ಡಾ. ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಬಿಜೆಪಿಯಿಂದ ಕಣಕ್ಕಿಳಿಸಿದೆ.

ಈ ಕ್ಷೇತ್ರವು ನಾಲ್ಕು ದಶಕಗಳಿಂದ ದೇವೇಗೌಡ ಮತ್ತು ಡಿ.ಕೆ. ಶಿವಕುಮಾರ್ ಕುಟುಂಬದ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗಿದ್ದು, ಮತ್ತೊಮ್ಮೆ ಎರಡೂ ಕುಟುಂಬದವರು ಮುಖಾಮುಖಿಯಾಗಿದ್ದಾರೆ.

2013ರ ಲೋಕಸಭಾ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಮತ್ತು ಮೊನ್ನೆಯ ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಸೋಲುಗಳಿಗೆ ಡಿ.ಕೆ ಸಹೋದರರ ವಿರುದ್ಧ ಸೇಡು ತೀರಿಸಿಕೊಳ್ಳಲು ಗೌಡರ ಕುಟುಂಬ ಹವಣಿಸುತ್ತಿದೆ.  ಮತ್ತೊಂದು ಗೆಲುವಿನೊಂದಿಗೆ ಗೌಡರ ಕುಟುಂಬಕ್ಕೆ ಸಡ್ಡು ಹೊಡೆಯಲು ಡಿ.ಕೆ. ಸಹೋದರರು ಸನ್ನದ್ಧರಾಗಿದ್ದಾರೆ.

ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ್‌ ಅವರಿಗೆ ತನ್ನ ಬೆನ್ನೆಲುಬಾಗಿರುವ ಸಹೋದರನ ಗೆಲುವು ಅನಿವಾರ್ಯ. ಈ ಚುನಾವಣೆ ಅವರ ಸಾಮರ್ಥ್ಯದ ಸತ್ವ ಪರೀಕ್ಷೆಯೂ ಹೌದು.

ಅಭಿವೃದ್ಧಿ ಕೆಲಸಗಳ ಜೊತೆಗೆ, ರಾಜ್ಯ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳು ತಮ್ಮನ್ನು ಗೆಲುವಿನ ದಡ ಸೇರಿಸಲಿವೆ ಎಂಬ ವಿಶ್ವಾಸ ಸುರೇಶ್ ಅವರದ್ದು. ಚುನಾವಣೆಗೆ ಈಗಾಗಲೇ ಭರ್ಜರಿ ತಯಾರಿ ನಡೆಸಿರುವ ಅವರು, ಜನಸಂಪರ್ಕ ಸಭೆ ಮೂಲಕ ಪಂಚಾಯಿತಿ ಮಟ್ಟದವರೆಗೆ ತಲುಪಿದ್ದಾರೆ. ಕ್ಷೇತ್ರದ ತಳಮಟ್ಟದ ಮೈತ್ರಿ ಕಾರ್ಯಕರ್ತರನ್ನು ‘ಕೈ’ನತ್ತ ಸೆಳೆಯುತ್ತಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಗಳಿಸಿರುವ ಜನಪ್ರಿಯತೆಯನ್ನು ದಾಳವಾಗಿಸಿಕೊಂಡು ಸುರೇಶ್ ಮಣಿಸಲು ಮೈತ್ರಿಕೂಟ ತಂತ್ರ ಹೆಣೆದಿದೆ. ಸುರೇಶ್ ವಿರುದ್ಧ ದರ್ಪ, ದೌರ್ಜನ್ಯ ಹಾಗೂ ಸರ್ವಾಧಿಕಾರದ ಆರೋಪವನ್ನು ಮೈತ್ರಿ ನಾಯಕರು ನಿರಂತವಾಗಿ ಮಾಡುತ್ತಿದ್ದಾರೆ. ಗೌಡರ ಕುಟುಂಬದ ನಾಮಬಲ, ಮೈತ್ರಿ ಬಲದ ಜೊತೆಗೆ ವೈಯಕ್ತಿಕ ಜನಪ್ರಿಯತೆ ಡಾ.ಮಂಜುನಾಥ್ ಅವರನ್ನು ಗೆಲುವಿನ ದಡ ಸೇರಿಸಲಿದೆ ಎಂಬ ವಿಶ್ವಾಸ ಮೈತ್ರಿಕೂಟದ್ದು. ಸೀರೆ, ಕುಕ್ಕರ್ ಹಾಗೂ ಗಿಫ್ಟ್ ಕೂಪನ್ ಹಂಚಿಕೆ ಆರೋಪದ ಮೂಲಕವೂ ಗಮನ ಸೆಳೆದಿರುವ ಕ್ಷೇತ್ರವು ಹೈ ವೋಲ್ಟೇಜ್ ಆಗಿ ಮಾರ್ಪಟ್ಟಿದೆ.

ಡಿ. ಕೆ ಸುರೇಶ್‌

ಡಿ. ಕೆ ಸುರೇಶ್‌

ಡಾ. ಸಿ.ಎನ್. ಮಂಜುನಾಥ್
ಡಾ. ಸಿ.ಎನ್. ಮಂಜುನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT