ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಲೋಕಸಭಾ ಕ್ಷೇತ್ರ | ಕಾಂಗ್ರೆಸ್‌, ಬಿಜೆಪಿ ಎರಡರಿಂದ ಗೆದ್ದಿದ್ದ ನಾಯಕ

ಅಪ್ಪನಿಗೆ ತೋರಿದ ಪ್ರೀತಿ ಮಗನಿಗೆ ತೋರದ ಬೀದರ್‌ ಲೋಕಸಭಾ ಕ್ಷೇತ್ರದ ಮತದಾರರು
Published 31 ಮಾರ್ಚ್ 2024, 5:55 IST
Last Updated 31 ಮಾರ್ಚ್ 2024, 5:55 IST
ಅಕ್ಷರ ಗಾತ್ರ

ಬೀದರ್‌: ‘ಎಂಪಿ’ ರಾಮಚಂದ್ರ ವೀರಪ್ಪ ಎಂಬ ಹೆಸರಿನಿಂದಲೇ ಹೆಸರಾಗಿದ್ದ ದಿವಂಗತ ರಾಮಚಂದ್ರ ವೀರಪ್ಪ ಅವರ ವ್ಯಕ್ತಿತ್ವವೂ ಅನೇಕ ಕಾರಣಗಳಿಂದ ವಿಶಿಷ್ಟವಾಗಿದೆ.

ಅಂದಹಾಗೆ, ಅವರ ಹೆಸರಿನಲ್ಲಿ ಕೆಲ ದಾಖಲೆಗಳೂ ಇವೆ. ಒಂದು ಉಪಚುನಾವಣೆ ಸೇರಿದಂತೆ 18 ಸಾರ್ವತ್ರಿಕ ಚುನಾವಣೆಗಳಿಗೆ ಬೀದರ್‌ ಲೋಕಸಭಾ ಕ್ಷೇತ್ರ ಸಾಕ್ಷಿಯಾಗಿದೆ. ಇದರಲ್ಲಿ ಅತಿ ಹೆಚ್ಚು 7 ಸಲ ಗೆದ್ದಿರುವ ದಾಖಲೆ ರಾಮಚಂದ್ರ ವೀರಪ್ಪನವರ ಹೆಸರಿನಲ್ಲಿದೆ. ಇಷ್ಟೇ ಅಲ್ಲ, ಅವರು ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳಿಂದ ಸ್ಪರ್ಧಿಸಿ ಸಂಸತ್ತಿಗೆ ಹೋಗಿದ್ದರು.

ಸ್ವಾತಂತ್ರ್ಯ ದೊರೆತ ನಂತರ ಮೊದಲ ಬಾರಿಗೆ ದೇಶದಲ್ಲಿ 1952ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಅದಾದ ಹತ್ತು ವರ್ಷಗಳ ನಂತರ, 1962ರಲ್ಲಿ ಬೀದರ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ದಾಖಲಿಸಿ ಮೊದಲ ಬಾರಿಗೆ ರಾಮಚಂದ್ರ ವೀರಪ್ಪನವರು ಸಂಸತ್ತು ಪ್ರವೇಶಿಸಿದ್ದರು. ಅದಾದ ಐದು ವರ್ಷಗಳ ಬಳಿಕ 1967ರ ಚುನಾವಣೆಯಲ್ಲೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ಸಾಧಿಸಿದ್ದರು. ಈ ಸಲದ ಚುನಾವಣೆಯಲ್ಲಿ ಅವರು ಹಿಂದಿನ ಚುನಾವಣೆಗಿಂತ ಹೆಚ್ಚಿನ ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದು ವಿಶೇಷವಾಗಿತ್ತು.

1971ರಲ್ಲಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿತು. 1971, 1977ರಲ್ಲಿ ನಡೆದ ಚುನಾವಣೆಗಳಲ್ಲಿ ಶಂಕರದೇವ ಬಾಲಾಜಿರಾವ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸತತ ಗೆಲುವು ಸಾಧಿಸಿದ್ದರು. ಅದಾದ ನಂತರ ಪುನಃ ಸತತ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನರಸಿಂಗರಾವ್‌ ಸೂರ್ಯವಂಶಿ ಗೆಲುವು ಕಂಡಿದ್ದರು. ಮೊದಲ ಒಂಬತ್ತು ಸಾರ್ವತ್ರಿಕ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಬದಲಾದರೂ ಕಾಂಗ್ರೆಸ್‌ ಜಯದ ಓಟ ಮಾತ್ರ ನಿಲ್ಲಲಿಲ್ಲ.

ಆದರೆ, ಕಾಂಗ್ರೆಸ್‌ ಗೆಲುವಿನ ಓಟವನ್ನು ತಡೆದದ್ದು ಅದೇ ಪಕ್ಷದಿಂದ ಬಿಜೆಪಿಗೆ ವಲಸೆ ಹೋಗಿ ಸ್ಪರ್ಧಿಸಿದ್ದ ರಾಮಚಂದ್ರ ವೀರಪ್ಪನವರು. 1991, 1996, 1998, 1999 ಹಾಗೂ 2004ರ ಚುನಾವಣೆಗಳಲ್ಲಿ ಜಯ ಸಾಧಿಸಿ ದಾಖಲೆ ಬರೆದರು. 2004ರ ಚುನಾವಣೆಯಲ್ಲಿ ಗೆದ್ದ ನಂತರ ಅಲ್ಪಕಾಲದ ನಂತರ, 2004ರ ಜುಲೈ 18ರಂದು ಅಕಾಲಿಕ ನಿಧನರಾದರು. ಅವರ ನಿಧನದ ನಂತರ ನಡೆದ ಉಪಚುನಾವಣೆಗೆ ರಾಮಚಂದ್ರ ವೀರಪ್ಪನವರ ಮಗ ಬಸವರಾಜ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ದೀರ್ಘಕಾಲದವರೆಗೆ ರಾಮಚಂದ್ರ ವೀರಪ್ಪ ಅವರನ್ನು ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸುತ್ತ ಬಂದಿದ್ದ ಕ್ಷೇತ್ರದ ಮತದಾರರು ಅವರ ಮಗನ ಮೇಲೆ ಒಲವು ತೋರಲಿಲ್ಲ. ಬಸವರಾಜ ಅವರು ನರಸಿಂಗರಾವ ಸೂರ್ಯವಂಶಿ ವಿರುದ್ಧ ಪರಾಭವಗೊಂಡರು. 2009ರಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ಕಂಡರು. ಅದಾದ ನಂತರ ನಡೆದ ಎರಡು ಚುನಾವಣೆಗಳಲ್ಲಿ 2014, 2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಭಗವಂತ ಖೂಬಾ ಸಂಸತ್ತು ಪ್ರವೇಶಿಸಿದರು. 2ನೇ ಅವಧಿಯಲ್ಲಿ ಕೇಂದ್ರದಲ್ಲಿ ಮಂತ್ರಿಯೂ ಆದರು. ಈಗ ಅವರು ಪುನರಾಯ್ಕೆ ಬಯಸಿ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಸಾಗರ್‌ ಖಂಡ್ರೆ ಸ್ಪರ್ಧಿಸುತ್ತಿದ್ದಾರೆ. ರಾಜಕೀಯಕ್ಕೆ ಈಗಷ್ಟೇ ಪದಾರ್ಪಣೆ ಮಾಡಿರುವ ಸಾಗರ್‌ ಖಂಡ್ರೆ, ‘ಹ್ಯಾಟ್ರಿಕ್‌’ ಗೆಲುವಿನ ನಿರೀಕ್ಷೆಯಲ್ಲಿರುವ ಖೂಬಾ ಅವರಿಗೆ ಸವಾಲೊಡ್ಡಿದ್ದಾರೆ. ಅಂತಿಮವಾಗಿ ಕ್ಷೇತ್ರದ ಮತದಾರರು ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಜೂನ್‌ 4ರವರೆಗೆ ಕಾಯಬೇಕು.

18 ಚುನಾವಣೆಗಳಲ್ಲಿ ಗೆದ್ದವರು 7 ಜನ

ಬೀದರ್‌ ಲೋಕಸಭಾ ಕ್ಷೇತ್ರವೂ ಒಂದು ಉಪಚುನಾವಣೆ ಸೇರಿದಂತೆ 18 ಚುನಾವಣೆಗಳಿಗೆ ಸಾಕ್ಷಿಯಾಗಿದೆ. 18 ಚುನಾವಣೆಗಳಲ್ಲಿ ಏಳು ಜನರಷ್ಟೇ ಗೆದ್ದಿದ್ದಾರೆ. 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶೌಕತ್‌ ಉಲ್ಲಾ ಷಾಹ ಅನ್ಸಾರಿ ಗೆಲುವು ಸಾಧಿಸಿದ್ದರು. ನೆಹರೂ ಅವರ ಪರಮಾಪ್ತರಾಗಿದ್ದ ಇವರು ಉತ್ತರ ಭಾರತದಿಂದ ಬಂದು ಸ್ಪರ್ಧಿಸಿದ್ದರು. 1957ರ ಚುನಾವಣೆಯಲ್ಲಿ ಮಹದೇವಪ್ಪ ಯಶವಂತರಾವ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. 1962 1967ರಲ್ಲಿ ರಾಮಚಂದ್ರ ವೀರಪ್ಪ 1971 1977ರಲ್ಲಿ ಶಂಕರದೇವ್‌ ಬಾಲಾಜಿರಾವ್‌ 1980 1984 1989ರ ಚುನಾವಣೆಗಳಲ್ಲಿ ಸತತವಾಗಿ ನರಸಿಂಗರಾವ್‌ ಸೂರ್ಯವಂಶಿಯವರು ಕಾಂಗ್ರೆಸ್‌ನಿಂದ ಜಯ ಸಾಧಿಸಿದ್ದರು. 1991 1996 1998 1999 2004ರ ಚುನಾವಣೆಯಲ್ಲಿ ಬಿಜೆಪಿಯಿಂದ ರಾಮಚಂದ್ರ ವೀರಪ್ಪ 2004 ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ನರಸಿಂಗರಾವ್‌ ಸೂರ್ಯವಂಶಿ 2009ರ ಚುನಾವಣೆಯಲ್ಲಿ ಎನ್‌. ಧರ್ಮಸಿಂಗ್‌ 2014 2019ರಲ್ಲಿ ಬಿಜೆಪಿಯಿಂದ ಭಗವಂತ ಖೂಬಾ ಜಯ ಸಾಧಿಸಿದ್ದಾರೆ. 18 ಚುನಾವಣೆಗಳಲ್ಲಿ 7 ಸಲ ರಾಮಚಂದ್ರ ವೀರಪ್ಪ 4 ಸಲ ನರಸಿಂಗರಾವ್‌ ಸೂರ್ಯವಂಶಿ ಗೆದ್ದಿರುವುದು ವಿಶೇಷ.

ಸರಳ ವ್ಯಕ್ತಿತ್ವ
ರಾಮಚಂದ್ರ ವೀರಪ್ಪನವರ ಸರಳ ವ್ಯಕ್ತಿತ್ವ ಜನರ ಮನ ಗೆದ್ದಿತ್ತು. ಈ ಕಾರಣಕ್ಕಾಗಿಯೇ ಅವರು ಏಳು ಸಲ ಸಂಸತ್ತಿಗೆ ಆಯ್ಕೆಯಾಗಿ ಹೋಗಿದ್ದರು. ತಲೆಯ ಮೇಲೆ ರುಮಾಲು ಖಾದಿ ಜುಬ್ಬಾ ಧೋತ್ರ ಅವರಿಗೆ ಇಷ್ಟವಾದ ಉಡುಪು. ಚುನಾವಣೆಯಲ್ಲಿ ಅಬ್ಬರದ ಪ್ರಚಾರದ ಮೊರೆಯೂ ಹೋಗುತ್ತಿರಲಿಲ್ಲ. ‘ಭಿಕ್ಷೆ ಕೊಡುವವರಿಗೆ ಮನಸ್ಸಿದ್ದರೆ ಎಲ್ಲಿ ಕುಳಿತರು ಕೊಡುತ್ತಾರೆ’ ಎಂದು ರಾಮಚಂದ್ರ ವೀರಪ್ಪ ಹೇಳುತ್ತಿದ್ದರು. ಅಷ್ಟರಮಟ್ಟಿಗೆ ಮತದಾರರ ಮೇಲೆ ಅವರಿಗೆ ವಿಶ್ವಾಸ ಇತ್ತು. ಆದರೆ ಏಳು ಸಲ ಕ್ಷೇತ್ರದಿಂದ ಆಯ್ಕೆಯಾಗಿದ್ದರೂ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವರಿಂದ ಸಾಧ್ಯವಾಗಿರಲಿಲ್ಲ ಎಂಬ ಕೊರಗು ಕ್ಷೇತ್ರದ ಮತದಾರರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT