ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ‘ಚೊಂಬು’ ಹಿಡಿದಿದ್ದೀರಿ. ಏನಿದು?
ಅವರು (ಮೋದಿ) ರಾಜ್ಯ ಮತ್ತು ದೇಶದ ಜನರಿಗೆ 10 ವರ್ಷಗಳ ಆಡಳಿತದಲ್ಲಿ ನೀಡಿದ್ದು ‘ಚೊಂಬು’ ಅಲ್ಲವೇ? ಕೊಟ್ಟ ಭರವಸೆಯಂತೆ ಯಾವುದನ್ನು ಈಡೇರಿಸಿದ್ದಾರೆ? 2 ಕೋಟಿ ಉದ್ಯೋಗ, ಎಲ್ಲರ ಖಾತೆಗೆ ₹ 15 ಲಕ್ಷ, ರೈತರ ಆದಾಯ ದ್ವಿಗುಣ, 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ನೀಡಬೇಕಿದ್ದ ₹ 62 ಸಾವಿರ ಕೋಟಿ, 2022ರೊಳಗೆ 100 ಸ್ಮಾರ್ಟ್ ಸಿಟಿ ಅಭಿವೃದ್ಧಿ, 2022ರೊಳಗೆ ಎಲ್ಲರಿಗೂ ಪಕ್ಕಾ ಮನೆ, ರಾಜ್ಯಕ್ಕೆ ಬರ ಪರಿಹಾರ, ತೆರಿಗೆ ಹಣ ಪಾಲು, ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಘೋಷಿಸಿದ್ದ ಹಣ... ಹೀಗೆ ಎಲ್ಲವೂ ‘ಚೊಂಬು’. ಇಷ್ಟೆಲ್ಲ ಚೊಂಬು ನೀಡಿದ ಮೋದಿ ಮತ್ತು ಅವರ ಪಕ್ಷಕ್ಕೆ ಜನ ಈ ಬಾರಿ ‘ಚೊಂಬು’ ಮರಳಿಸುವುದರಲ್ಲಿ ಯಾವ ಅನುಮಾನವೂ ಇಲ್ಲ.
ಅಂದರೆ, ಮೋದಿ ಅವರು ಅಧಿಕಾರದಿಂದ ದೂರ ಉಳಿಯಲಿದ್ದಾರೆಂದೇ?
ಖಂಡಿತ. 2004ರ ಚುನಾವಣೆಯ ಫಲಿತಾಂಶ ಈ ಬಾರಿ ಮರುಕಳಿಸಲಿದೆ. ಕಾಂಗ್ರೆಸ್ ತನ್ನ ಸ್ವಂತ ಬಲದಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಅಟಲ್ ಬಿಹಾರಿ ವಾಜಪೇಯಿ ಮತ್ತು ಬಿಜೆಪಿ ಸರ್ಕಾರದ ‘ಇಂಡಿಯಾ ಶೈನಿಂಗ್’ ಪ್ರಚಾರದ ವಿರುದ್ಧ ಜನರು ಮತ ಚಲಾಯಿಸಿರಲಿಲ್ಲವೇ? ಈ ಚುನಾವಣೆಯಲ್ಲಿ ಮೋದಿ ಮತ್ತು ಅವರ ನೇತೃತ್ವದ ಸರ್ಕಾರದ ವಿರುದ್ಧ ಜನಾಭಿಪ್ರಾಯ ಬರಲಿದೆ.
ಕರ್ನಾಟಕದಲ್ಲಿ ನೀವು (ಕಾಂಗ್ರೆಸ್) ಎಷ್ಟು ಸ್ಥಾನ ಗೆಲ್ಲುತ್ತೀರಿ?
ಕಳೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ, ಜೆಡಿಎಸ್ ಪಕ್ಷದ 27 ಜನ ಲೋಕಸಭಾ ಸದಸ್ಯರು ಕೂಡಾ ರಾಜ್ಯಕ್ಕೆ ನೀಡಿದ್ದು ‘ಚೊಂಬು’ನ್ನೇ ಅಲ್ಲವೇ? ಹೀಗಾಗಿ, ಬಿಜೆಪಿ– ಜೆಡಿಎಸ್ ಮೈತ್ರಿಕೂಟಕ್ಕೆ 6.5 ಕೋಟಿ ಕನ್ನಡಿಗರು ಕೂಡಾ ಅದೇ ಚೊಂಬು ನೀಡಿ ಮನೆಗೆ ಕಳುಹಿಸಲಿದ್ದಾರೆ. ಹೀಗಾಗಿ, ರಾಜ್ಯದಲ್ಲಿಯೂ ಫಲಿತಾಂಶ ರಿವರ್ಸ್ ಆಗಲಿದೆ. ನಾವು 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ನಾನು ಮಾಡಿಸಿದ ಸರ್ವೇ ಪ್ರಕಾರ 23 ಸ್ಥಾನ ಬರಲಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಸುಧಾರಿಸುತ್ತಿದೆ.
‘ಇಂಡಿಯಾ’ ಮೈತ್ರಿಕೂಟದಲ್ಲಿನ ಒಗ್ಗಟ್ಟು ಬಿಕ್ಕಟ್ಟಿನಲ್ಲಿದೆಯಲ್ಲ?
ಹಾಗೇನೂ ಇಲ್ಲ. ನಮ್ಮದು ವಿವಿಧತೆಯಲ್ಲಿ ಏಕತೆಯನ್ನು ಪ್ರತಿನಿಧಿಸುವ ಮೈತ್ರಿಕೂಟ. ಪರಸ್ಪರ ವಿಶ್ವಾಸ ಗಟ್ಟಿಯಾಗಿದೆ. ಈ ನಡುವೆಯೂ ಪ್ರತಿಯೊಂದು ರಾಜಕೀಯ ಪಕ್ಷವು ತನ್ನ ನೆಲದಲ್ಲಿ ರಾಜಕೀಯ ನೆಲೆಯನ್ನು ಗಟ್ಟಿಗೊಳಿಸಲು ಯತ್ನಿಸುವುದು ಸಹಜ. ಅದೇ ಕಾರಣಕ್ಕೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಪಕ್ಷ ಪ್ರತ್ಯೇಕವಾಗಿ ಸ್ಪರ್ಧಿಸಿದೆ. ಮೈತ್ರಿಕೂಟ ಮತ್ತು ಅವರ ಸೈದ್ಧಾಂತಿಕವಾದ ಯೋಚನೆ, ರಾಷ್ಟ್ರೀಯ ಹಿತಾಸಕ್ತಿಯ ವಿಚಾರದಲ್ಲಿ ನಿಲುವು, ಗುರಿ ಒಂದೇ ಆಗಿದೆ. ಹೀಗಾಗಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ವಿಚಾರದಲ್ಲಿ ನಾವು ಒಂದಾಗುತ್ತೇವೆ. ಚುನಾವಣೆಯ ಬಳಿಕ ಒಂದೇ ಸೂರಿನಡಿ ಸೇರುತ್ತೇವೆ.
‘ಗ್ಯಾರಂಟಿ’ಗಳು ಕೈಹಿಡಿಯಬಹುದೆಂಬ ಆತ್ಮವಿಶ್ವಾಸವೇ?
ನಮ್ಮದು ಎಲ್ಲ ವರ್ಗದ ಜನರಿಗೆ ಆದಾಯವನ್ನು ಸಮಾನವಾಗಿ ಹಂಚುವ ಹಾಗೂ ಕಲ್ಯಾಣ ಆಶಯದ ‘ಗ್ಯಾರಂಟಿ’ಗಳು. ಬೆಲೆ ಏರಿಕೆ. ನಿರುದ್ಯೋಗ, ಹಣದುಬ್ಬರ, ಕುಸಿದ ಆರ್ಥಿಕತೆಯ ಮಧ್ಯೆ ಬಡವರ, ಶ್ರಮಿಕರ, ಮಧ್ಯಮ ವರ್ಗದವರ, ವೇತನ ಪಡೆಯುವವರು, ಪರಿಶಿಷ್ಟರು, ಹಿಂದುಳಿದವರು ಹೀಗೆ 100 ಕೋಟಿ ಜನರ ಬದುಕು ಕಟ್ಟಿಕೊಡುವ ಯೋಜನೆಗಳು. ಕರ್ನಾಟಕದ ಜನರಿಗೆ ನೀಡಿದ್ದ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಜನರಿಗೆ ವಿಶ್ವಾಸ ಬಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ಘೋಷಿಸಿದ 25 ಅಂಶಗಳ ಐದು ‘ಗ್ಯಾರಂಟಿ’ಗಳನ್ನು ಜನ ಒಪ್ಪುವ ವಿಶ್ವಾಸವಿದೆ.
‘ಗ್ಯಾರಂಟಿ’ ಯೋಜನೆಗಳು ಹೊರತುಪಡಿಸಿದರೆ ಯಾವ ವಿಚಾರಗಳು ಈ ಬಾರಿ ಮತದಾರರನ್ನು ಪ್ರಭಾವಿಸಬಹುದು?
ಬೆಲೆ ಏರಿಕೆ, ಹಣದುಬ್ಬರ, ಆರ್ಥಿಕತೆ ಕುಸಿತ ಕೂಡಾ ಗೇಮ್ ಚೇಂಜರ್ ಆಗಲಿದೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ರೈತರನ್ನು ಭಯೋತ್ಪಾದಕರು, ಗೂಂಡಾಗಳು, ನಕ್ಸಲರು ಎಂದೆಲ್ಲ ಬಿಜೆಪಿಯವರು ಕರೆದರು. ರೈತರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ನಾವು ಅಧಿಕಾರಕ್ಕೆ ಬಂದರೆ ರೈತರ ಸಾಲ ಸಂಪೂರ್ಣ ಮನ್ನಾ, ನರೇಗಾ ಕೂಲಿ ಮೊತ್ತ ₹ 400ಕ್ಕೆ ಹೆಚ್ಚಿಸುತ್ತೇವೆಂದು ಘೋಷಿಸಿದ್ದೇವೆ. ಇನ್ನು ಮೋದಿ ಸರ್ಕಾರ ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳಿಗೆ ಅನ್ಯಾಯ ಮಾಡಿದೆ. ಕರ್ನಾಟಕಕ್ಕೆ ತೆರಿಗೆ ಜೊತೆಗೆ ಅನುದಾನ ಹಂಚಿಕೆಯಲ್ಲೂ ಅನ್ಯಾಯ ಮಾಡಿದೆ. ಬರ ಪರಿಹಾರ ಬಿಡುಗಡೆಗಾಗಿ ಸರ್ಕಾರವು ಸುಪ್ರೀಂ ಕೋರ್ಟ್‌ನ ಕದ ತಟ್ಟಿದೆ. ಈ ಎಲ್ಲ ಅಂಶಗಳೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಇಡೀ ದೇಶದ, ಕಾಂಗ್ರೆಸ್‌ನ ರಾಜಕೀಯ ಚಿತ್ರಣವನ್ನೇ ಬದಲಿಸಲಿದೆ.
ಎನ್‌ಡಿಎ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದೆ. ‘ಇಂಡಿಯಾ’ ಮೈತ್ರಿಕೂಟದ ಮುಖ ಯಾರು?
ನಾವು ಸಂಸದೀಯ ವ್ಯವಸ್ಥೆಯನ್ನು ಗೌರವಿಸುತ್ತೇನೆ. ನಮ್ಮದು ಚೀನಾ ಮಾದರಿಯ ಸರ್ವಾಧಿಕಾರ ಅಲ್ಲ. ಮೋದಿ ಅವರದ್ದು ಚೀನಾ ಮಾದರಿ. ಸಂಸತ್‌ಗೆ ಚುನಾಯಿತರಾದ ಸದಸ್ಯರು ತಮ್ಮ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಅತೀ ಹೆಚ್ಚು ಸ್ಥಾನ ಗೆದ್ದ ಪಕ್ಷದಿಂದ ಪ್ರಧಾನಿ ಆಯ್ಕೆ ಆಗುತ್ತಾರೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಬಗ್ಗೆ ಏನು ಹೇಳಲು ಬಯಸುತ್ತೀರಿ?
ನಮ್ಮದು ಉತ್ತರದಾಯಿತ್ವ ಹೊಂದಿರುವ ಸ್ಥಿರ ಸರ್ಕಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಒಂದು ತಂಡವಾಗಿ ಆಡಳಿತ ನಡೆಸುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ್ದ ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನದ ಮೂಲಕ ₹ 58 ಸಾವಿರ ಕೋಟಿಯನ್ನು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಫಲಾನುಭವಿಗಳಗೆ ನೇರವಾಗಿ ತಲುಪಿಸಿ ಬದುಕು ಹಸನುಗೊಳಿಸಿದೆ. ಕನ್ನಡಿಗರು ಈ ಸರ್ಕಾರದ ಭಾಗೀದಾರರು ಚಾಲಕರು. ಇನ್ನು ಸೂಕ್ತ ಸಮಯದಲ್ಲಿ ನಿಗಮ– ಮಂಡಳಿಗಳ ಅಧ್ಯಕ್ಷರ ಶಾಸಕರ ಸಚಿವರ ಕಾರ್ಯವೈಖರಿಯ ಮೌಲ್ಯಮಾಪನ ಮಾಡುತ್ತೇವೆ. ಅಷ್ಟೇ ಅಲ್ಲ ಪಕ್ಷದ ಉಸ್ತುವಾರಿಯಾಗಿ ನನ್ನ ಕೆಲಸ ಸಂಘಟನೆಯ ಹೊಣೆ ಹೊತ್ತವರ ಚಟುವಟಿಕೆಗಳು ಪರಾಮರ್ಶೆಗೆ ಒಳಪಡಲಿವೆ.
‘ಅಧಿಕಾರ ಹಂಚಿಕೆ’ ಸೂತ್ರದ ಬಗ್ಗೆ?
ಈ ಬಗ್ಗೆ ನಾನು ಎಲ್ಲೂ ಮಾತನಾಡಿಲ್ಲ. ಅಷ್ಟೇ ಅಲ್ಲ ಈ ಪ್ರಶ್ನೆಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.