ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಸು ಮರೆತು ಒಂದಾದ ಎಚ್‌.ಡಿ. ಕುಮಾರಸ್ವಾಮಿ–ಎಚ್. ವಿಶ್ವನಾಥ್

Published 6 ಏಪ್ರಿಲ್ 2024, 13:00 IST
Last Updated 6 ಏಪ್ರಿಲ್ 2024, 13:00 IST
ಅಕ್ಷರ ಗಾತ್ರ

ಕೆ.ಆರ್. ನಗರ (ಮೈಸೂರು ಜಿಲ್ಲೆ): ಮಾಜಿ ಮುಖ್ಯಮಂತ್ರಿ, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಅವರನ್ನು ಇಲ್ಲಿನ ನಿವಾಸದಲ್ಲಿ ಶನಿವಾರ ಭೇಟಿಯಾಗಿ ಬೆಂಬಲ ಕೋರಿದರು.

ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಇಲ್ಲೇ ಈ ನಾಯಕರು ಮುನಿಸು ಮರೆತು ಮತ್ತೆ ಒಂದಾಗಿರುವುದು ಹಲವು ಚರ್ಚೆಗಳಿಗೂ ಕಾರಣವಾಗಿದೆ. ಕುಮಾರಸ್ವಾಮಿ ಅವರೊಂದಿಗೆ ಶಾಸಕ ಜಿ.ಟಿ. ದೇವೇಗೌಡ, ನಾಯಕರಾದ ಸಾ.ರಾ. ಮಹೇಶ್, ಸಿ.ಎಸ್.ಪುಟ್ಟರಾಜು‌, ಬಂಡೆಪ್ಪ ಕಾಶೆಂಪೂರ ಕೂಡ ಆಗಮಿಸಿದ್ದರು. ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನದ ನಂತರ ವಿಶ್ವನಾಥ್‌–ಎಚ್‌ಡಿಕೆ ದೂರವಾಗಿದ್ದರು.

ವಿಶ್ವನಾಥ್ ಅವರನ್ನು ‘ವಿಶ್ವಣ್ಣ’ ಎಂದು ಕರೆದ ಎಚ್‌ಡಿಕೆ, ಆತ್ಮೀಯವಾಗಿ ಮಾತುಕತೆ ನಡೆಸಿದರು. ಜಂಟಿ ಪತ್ರಿಕಾಗೋಷ್ಠಿ ನಡೆಸಿ ಪರಸ್ಪರ ಹೊಗಳಿಕೆಯ ಮಾತುಗಳನ್ನು ಆಡಿದರು.

ವಿಶ್ವನಾಥ್ ಬೆಂಬಲದಿಂದ ಶಕ್ತಿ ಬಂದಿದೆ:

‘ರಾಜಕೀಯದಲ್ಲಿ ಟೀಕೆ– ಟಿಪ್ಪಣಿ ಸಹಜ. ವಿಶ್ವಣ್ಣ ಅದೆಲ್ಲವನ್ನೂ ಮರೆತು ಬೆಂಬಲ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಸ್ಪರ್ಧಿಸುವ ವಿಷಯ ತಿಳಿದು ಕರೆ ಮಾಡಿ ಶುಭಾಶಯ ಕೋರಿದ್ದರು. ನನ್ನ ಬೆಂಬಲವಿದೆ ಎಂದೂ ತಿಳಿಸಿದ್ದರು. ಅವರ ಅಭಿಮಾನಕ್ಕೆ ಸೋತು ಮನೆಗೆ ಬಂದಿದ್ದೇನೆ. ಅವರು ನೇರ–ನಿಷ್ಠುರವಾಗಿ ಮಾತನಾಡುವ ರಾಜಕಾರಣಿ. ಪ್ರಾಮಾಣಿಕವಾಗಿದ್ದಾರೆ. ಅವರು ಬೆಂಬಲ ನೀಡಿರುವುದು ಶಕ್ತಿ ತುಂಬಿದೆ. ಇದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಮಂಡ್ಯದಲ್ಲಿ ಚುನಾವಣೆಯನ್ನು ಸಂಪೂರ್ಣವಾಗಿ ನಮ್ಮ ಮುಖಂಡರು ಹಾಗೂ ಕಾರ್ಯಕರ್ತರೇ ಮಾಡುತ್ತಾರೆ. ನಾನು ಹಿರಿಯರನ್ನು ಭೇಟಿಯಾಗಿ ಬೆಂಬಲ ಕೋರುತ್ತಿದ್ದೇನೆ. ಕೆ.ಆರ್. ನಗರದಲ್ಲಿ ಸಾ.ರಾ. ಮಹೇಶ್ ಸೋಲಿನ ಬಗ್ಗೆ ಜನರಲ್ಲಿರುವ ಅನುಕಂ‍ಪವೂ ನನಗೆ ನೆರವಾಗಲಿದೆ’ ಎಂದು ಪ್ರತಿಕ್ರಿಯಿಸಿದರು.

‘ಸರ್ಕಾರದ ನಡವಳಿಕೆ, ಸಚಿವರ ಹೇಳಿಕೆ ಹಾಗೂ ಅವರ ರಹಸ್ಯ ಕಾರ್ಯಸೂಚಿಗಳನ್ನು ಗಮನಿಸಿದರೆ ಸರ್ಕಾರದ ಆಯಸ್ಸು ಮುಗಿಯುತ್ತಾ ಬರುತ್ತಿದೆ’ ಎಂದರು.

ಸಚಿವ ಕೆ.ಎನ್.ರಾಜಣ್ಣ ಅವರು ದೇವೇಗೌಡರನ್ನು ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಅವರು ವಿಧಾನಸೌಧದ ಮೆಟ್ಟಿಲು ಹತ್ತಿದ್ದೇ ದೇವೇಗೌಡರಿಂದ. ಭೂಮಿಗೆ ಹೋಗುವವರೆಗೂ ದೇವೇಗೌಡರಿಗೆ ರಾಜಕೀಯದಿಂದ ನಿವೃತ್ತಿ ಎನ್ನುವುದಿಲ್ಲ. ರಾಜಣ್ಣನಿಂದ ಸಲಹೆ ಪಡೆಯುವ ಸ್ಥಿತಿ ನಮಗೆ ಬಂದಿಲ್ಲ. ಅವರು ಕುಟುಂಬ ರಾಜಕಾರಣ ಮಾಡಿಲ್ಲವೇ? ಇಂಥವರ ಆಟ ಹೆಚ್ಚು ದಿನ ನಡೆಯುವುದಿಲ್ಲ. ಓಲೈಕೆ ರಾಜಕಾರಣ ಅಂತಿಮ ಘಟ್ಟ ತಲುಪಿದೆ. ಇಂಥವರೇ ಸೇರಿ ಈ ರಾಜ್ಯ ಸರ್ಕಾರವನ್ನು ತೆಗೆಯುತ್ತಾರೆ’ ಎಂದು ತಿರುಗೇಟು ನೀಡಿದರು.

‘ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವವರು ನಮಗೆ ಜಾತ್ಯತೀತ ಎಂಬ ಪದ ತೆಗೆಯಿರಿ ಎನ್ನುತ್ತಾರೆ. ಇತ್ತೀಚಿಗೆ ಒಕ್ಕಲಿಗರ ಮೇಲೆ ಪ್ರೀತಿ ಬಂದಿದೆ. ಮೈಸೂರಿನಲ್ಲಿ 47 ವರ್ಷಗಳಿಂದ ಒಕ್ಕಲಿಗರಿಗೆ ಟಿಕೆಟ್ ಕೊಡಬೇಡಿ ಎಂದು ತಡೆದಿದ್ದವರಾರು? ಈ ಸರ್ಕಾರ ಬಹಳ ದಿನ ಇರುವುದಿಲ್ಲ. 2024ರಲ್ಲಿ ಏನೇನು ಬದಲಾವಣೆ ಆಗುತ್ತದೆ ಎಂಬುದನ್ನು ಕಾದು ನೋಡಿ’ ಎಂದು ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.

ವಿಶ್ವನಾಥ್ ಮಾತನಾಡಿ, ‘ರಾಜಕಾರಣ ನಿಂತ ನೀರಲ್ಲ. ಮಾತು–ಸಂಘರ್ಷ ರಾಜಕಾರಣದಲ್ಲಿ ಸಹಜ. ಅದನ್ನೆಲ್ಲಾ ಸರಿಪಡಿಸಿಕೊಳ್ಳಬೇಕಾಗುತ್ತದೆ. ದೇವೇಗೌಡರು ನನಗೆ ಸದಾ ಸ್ಮರಣೀಯರು. ನನ್ನ ಹಾಗೂ ಸಾ.ರಾ. ಮಹೇಶ್‌ ಭಿನ್ನಾಭಿಪ್ರಾಯ ಚಾಮುಂಡಿಬೆಟ್ಟದವರೆಗೆ ಹೋಗಿತ್ತು. ಈಗ ಅದನ್ನೆಲ್ಲಾ ಮರೆತು ಜೊತೆಯಾಗಿದ್ದೇವೆ’ ಎಂದರು.

‘ದೇವೇಗೌಡರನ್ನು ಟೀಕಿಸುವ ನೈತಿಕತೆ ಕಾಂಗ್ರೆಸ್‌ನವರಿಗೆ ಇಲ್ಲ. ದೇವೇಗೌಡರ ಕುಟುಂಬದವರನ್ನು ಸೋಲಿಸುತ್ತೇನೆ ಎಂಬ ದುರಹಂಕಾರದ ಮಾತನ್ನು ಸಿದ್ದರಾಮಯ್ಯ ಆಡಬಾರದು’ ಎಂದು ಹೇಳಿದರು.

‘ಸಿದ್ದರಾಮಯ್ಯ ಮಗನನ್ನು ಕಣಕ್ಕಿಳಿಸಬೇಕು ಎಂದುಕೊಂಡಿದ್ದರು. ನನ್ನ ಹೆಸರೂ ಇತ್ತು‌. ಸಮೀಕ್ಷೆ ವರದಿ ಬಂದ ಮೇಲೆ ಲಕ್ಷ್ಮಣಗೆ ಟಿಕೆಟ್ ಕೊಟ್ಟರು. ಜಾತಿ ಪ್ರಸ್ತಾಪಿಸಿ ಒಕ್ಕಲಿಗರಿಗೆ ಅಪಮಾನ ಮಾಡುತ್ತಿದ್ದಾರೆ. ಮೈಸೂರಲ್ಲಿ ಯದುವೀರ್ ಹಾಗೂ ಮಂಡ್ಯದಿಂದ ಕುಮಾರಸ್ವಾಮಿ ಗೆಲ್ಲಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT