ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿವೃದ್ಧಿ ನೋಡಿ ಮತ ಹಾಕಿ: ಭವಾನಿ ರೇವಣ್ಣ

ಚನ್ನಿಗರಾಯ ಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ
Published 22 ಮಾರ್ಚ್ 2024, 13:27 IST
Last Updated 22 ಮಾರ್ಚ್ 2024, 13:27 IST
ಅಕ್ಷರ ಗಾತ್ರ

ಹೊಳೆನರಸೀಪುರ: ಶಾಸಕ ಎಚ್.ಡಿ. ರೇವಣ್ಣ ಜಿಲ್ಲೆಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಒಂದು ಸುತ್ತು ನೋಡಿಕೊಂಡು ಬರಲು 6 ತಿಂಗಳು ಬೇಕಾಗುತ್ತದೆ. ಅಷ್ಟು ಕೆಲಸಗಳನ್ನು ಮಾಡಿದ್ದಾರೆ. ತಾಲ್ಲೂಕಿನ ಯಾವುದೇ ಊರಿಗೂ ಹೋದರೂ ರೇವಣ್ಣ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮಾತನಾಡುತ್ತವೆ ಎಂದು ಭವಾನಿ ರೇವಣ್ಣ ತಿಳಿಸಿದರು.

ದೇವೇಗೌಡರು 1957ರಿಂದಲೂ ಯಾವುದೇ ಚುನಾವಣೆಯಲ್ಲಿ ಚುನಾವಣೆ ಪ್ರಚಾರ ಮಾಡುವ ಮುನ್ನ ಮೂಡಲಹಿಪ್ಪೆಯ ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಇಲ್ಲಿಂದಲೇ ಪ್ರಾರಂಭಿಸುತ್ತಿದ್ದರು. ಬಹುತೇಕ ಎಲ್ಲಾ ಚುನಾವಣೆಗಳಲ್ಲೂ ಗೆದಿದ್ದಾರೆ. ನಾವೂ ಕೂಡ ಅದೇ ಸಂಪ್ರದಾಯ ಮುಂದುವರಿಸಿದ್ದು ಇಂದು ಮೂಡಲಹಿಪ್ಪೆಯ ಚೆನ್ನಿಗರಾಯನಿಗೆ ಪೂಜೆ ಸಲ್ಲಿಸಿ ಪ್ರಚಾರ ಪ್ರಾರಂಭಿಸಿದ್ದೇವೆ. ಈ ಬಾರಿಯೂ ಮತದಾರರು ನಮ್ಮ ಕೈ ಹಿಡಿಯುತ್ತಾರೆ. ನರೇಂದ್ರ ಮೋದಿ ಅತ್ಯುತ್ತಮ ಆಡಳಿತ ನೀಡಿದ್ದಾರೆ. ಪ್ರಜ್ವಲ್ ಕೂಡ ಹಾಸನ ಜಿಲ್ಲೆಯನ್ನು ಅಭಿವೃದ್ಧಿ ಪತದತ್ತ ತೆಗೆದುಕೊಂಡು ಹೋಗುತ್ತಾರೆ, ನಿಮ್ಮ ಮತನೀಡಿ ಗೆಲ್ಲಿಸಿ ಎಂದು ವಿನಂತಿ ಮಾಡಿದರು.

ಶಾಸಕ ರೇವಣ್ಣ ಮಾತನಾಡಿ, ನಮ್ಮ ಕುಟುಂಬ ರಾಜಕೀಯದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಮೂಡಲಹಿಪ್ಪೆ ಹಾಗೂ ಸುತ್ತಮುತ್ತಲ ಗ್ರಾಮದ ಜನರ ಆಶೀರ್ವಾದವೂ ಕಾರಣ. ಇವರು ಹಿಂದಿನಿಂದಲೂ ನಮ್ಮ ಜೊತೆಯಲ್ಲಿದ್ದಾರೆ. ಮುಂದೆಯೂ ನಮ್ಮ ಜೊತೆಯಲ್ಲೇ ಇರುತ್ತಾರೆ. ನಾವೂ ಕೂಡ ಸದಾ ನಿಮ್ಮ ಜೊತೆಯಲ್ಲಿ ಇರುತ್ತೇವೆ ಎಂದರು.

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ನಾವು ಬಿಜೆಪಿ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಗೌಡರು ದೇಶದ ದೃಷ್ಟಿಯಿಂದ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯದ ಅನೇಕ ಕಡೆ ನೀರಿಗೆ ತೀವ್ರ ತೊಂದರೆ ಆಗುತ್ತಿದೆ. ಶಾಸಕ ರೇವಣ್ಣ ಅವರು ಈ ಹಿಂದೆ ಮಾಡಿಸಿದ ಜಲಜೀವನ್ ಮಿಷನ್ ಯೋಜನೆಯಿಂದ ಇಂದಿಗೂ ಮನೆ ಮನೆಗೆ ಶುದ್ಧ ಕುಡಿಯುವ ನೀರು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಕಾರ್ಯಗಳಿಗೆ ₹16,500 ಕೋಟಿ ಹಾಗೂ ಕುಡಿಯುವ ನೀರು ಯೋಜನೆಗೆ ₹4,907 ಕೋಟಿ ಹಣ ನೀಡಿದ್ದಾರೆ. ಇದರ ಹಿಂದೆ ದೇವೇಗೌಡರ ಶ್ರಮ ಇದೆ ಎಂದರು.

ರಾಜ್ಯದ ಕಾಂಗ್ರೆಸ್ ಆಡಳಿತ ತನ್ನ 5 ಗ್ಯಾರಂಟಿ ಯೋಜನೆ ಜಾರಿಗಾಗಿ ಎಲ್ಲದರ ಬೆಲೆ ಹೆಚ್ಚಿಸಿದೆ. ₹20 ರೂಪಾಯಿಗೆ ಸಿಗುತ್ತಿದ್ದ ಸ್ಟಾಂಪ್ ಪೇಪರ್ ಬೆಲೆಯನ್ನು ₹100 ರೂಪಾಯಿಗೆ ಏರಿಸಿದ್ದಾರೆ. ₹10 ಅನ್ನು ಕಿತ್ತುಕೊಂಡು ₹5 ಅನ್ನು ನೀಡಿ ಜನರನ್ನು ಕಷ್ಟಕ್ಕೆ ತಳ್ಳಿದ್ದಾರೆ. ಜನ ಅರ್ಥಮಾಡಿಕೊಂಡು ಮತಹಾಕಿ. ನಾನೇನಾದರು ತಪ್ಪು ಮಾಡಿದ್ದರೆ ತಿದ್ದಿಕೊಂಡು ನಡೆಯುತ್ತೇನೆ. ತಪ್ಪುಮಾಡಿದ್ದರೆ ಕ್ಷಮಿಸಿ ನನ್ನನ್ನು ಬೆಳೆಸಿ ಸದಾ ನಿಮ್ಮ ಜೊತೆಯಲ್ಲಿರುತ್ತೇನೆ ಎಂದರು.

ಪ್ರಚಾರಕ್ಕೂ ಮುನ್ನ ಗ್ರಾಮದ ಚೆನ್ನಿಗರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ದೇಶಕ್ಕೆ ಮೋದಿ ಆಡಳಿತ ಬರಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿ ಎಂದು ಸಂಸದ ಪ್ರಜ್ವಲ್ ಅರ್ಚಕರಿಗೆ ಸೂಚಿಸಿದರು. ರೇವಣ್ಣ ಅವರು ಪ್ರಜ್ವಲ್‍ಗೆ ಗೆಲುವಾಗಲಿ ಎಂದು ಆಶೀರ್ವದಿಸಿ ಎಂದರು. ಉದ್ಯಮಿ ನ್ಯಾಮನಹಳ್ಳಿ ಎನ್.ಆರ್. ಅನಂತ್‍ಕುಮಾರ್, ಗುಂಜೇವು ಮಲ್ಲಿಕಾರ್ಜುನ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ, ಮೂಡಲಹಿಪ್ಪೆ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT