ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಇಂದಿನಿಂದ ರಾಜ್ಯದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ

Published 14 ಏಪ್ರಿಲ್ 2024, 0:30 IST
Last Updated 14 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಭಾನುವಾರದಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದು, ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.

ಮೊದಲ ದಿನವೇ ಮೈಸೂರಿನಲ್ಲಿ ಬಹಿರಂಗ ಸಭೆ ಮತ್ತು ಮಂಗಳೂರಿನಲ್ಲಿ ರೋಡ್‌ ಶೋ ಮೂಲಕ ಚುನಾವಣಾ ಕಹಳೆ ಮೊಳಗಿಸಲಿದ್ದಾರೆ.

ರಾಜ್ಯದಲ್ಲಿ ಎರಡು ಹಂತಗಳಲ್ಲಿ ತಲಾ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಕ್ಷೇತ್ರಗಳಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳ ಪರ ಮತ ಸೆಳೆಯುವ ಗುರಿಯೊಂದಿಗೆ ಮೋದಿ ಭಾನುವಾರ ರಾಜ್ಯಕ್ಕೆ ಬರಲಿದ್ದಾರೆ. ಜಂಟಿ ಪ್ರಚಾರ ಸಭೆಗಳ ಮೂಲಕ ಎರಡೂ ಪಕ್ಷಗಳ ಮತಗಳ ಧ್ರುವೀಕರಣಕ್ಕೆ ಚಾಲನೆ ನೀಡುವ ಕಾರ್ಯತಂತ್ರವೂ ಇದರ ಹಿಂದಿದೆ.

ನೇರವಾಗಿ ಮೈಸೂರಿಗೆ ಬಂದಿಳಿಯಲಿರುವ ಪ್ರಧಾನಿ, ಅಲ್ಲಿ ಸಂಜೆ 4 ಗಂಟೆಗೆ ನಡೆಯುವ ಬಹಿರಂಗ ಸಮಾವೇಶದಲ್ಲಿ ಭಾಗವಹಿಸುವರು. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ಮಂಡ್ಯ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯೂ ಆಗಿರುವ ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕೂಡ ವೇದಿಕೆಯಲ್ಲಿ ಇರಲಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಎರಡೂ ಪಕ್ಷಗಳ ಹಲವು ಅಭ್ಯರ್ಥಿಗಳು ವೇದಿಕೆಯಲ್ಲಿ ಇರುತ್ತಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮೈಸೂರಿನಿಂದ ಮಂಗಳೂರಿಗೆ ತೆರಳುವ ಮೋದಿ, ಅಲ್ಲಿ ರೋಡ್‌ ಶೋ ಮೂಲಕ ಮತ ಯಾಚಿಸುವರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬೃಜೇಶ್‌ ಚೌಟ ಮತ್ತು ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಕೂಡ ಜತೆಗಿರುತ್ತಾರೆ ಎಂದು ಮೂಲಗಳು ಹೇಳಿವೆ.

ಆರರಿಂದ ಎಂಟು ಬಾರಿ ರಾಜ್ಯಕ್ಕೆ: ಏಪ್ರಿಲ್‌ 20ಕ್ಕೆ ಮೋದಿಯವರು ಪುನಃ ರಾಜ್ಯಕ್ಕೆ ಬರಲಿದ್ದಾರೆ. ಆ ದಿನ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಹಾಗೂ ಬೆಂಗಳೂರು ನಗರದಲ್ಲಿ ಚುನಾವಣಾ ಪ್ರಚಾರ ನಡೆಸುವರು. ಬಳಿಕ ತುಮಕೂರು ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

‘ಎರಡೂ ಹಂತಗಳ ಚುನಾವಣೆಯಲ್ಲಿ ತಲಾ ಮೂರರಿಂದ ನಾಲ್ಕು ಬಾರಿ ರಾಜ್ಯದಲ್ಲಿ ಪ್ರಚಾರ ನಡೆಸುವಂತೆ ಮೋದಿಯವರಿಗೆ ಮನವಿ ಮಾಡಲಾಗಿದೆ. ಒಟ್ಟು ಆರರಿಂದ ಎಂಟು ಬಾರಿ ಅವರು ಪ್ರಚಾರ ನಡೆಸುವ ಸಾಧ್ಯತೆ ಇದೆ’ ಎಂದು ಚುನಾವಣಾ ಪ್ರಚಾರ ಕಾರ್ಯಕ್ರಮ ಆಯೋಜನೆ ಉಸ್ತುವಾರಿ ಹೊತ್ತಿರುವ ಬಿಜೆಪಿ ಮುಖಂಡರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT