ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವತಂತ್ರ ಅಭ್ಯರ್ಥಿಯಾಗಿ ಮತ್ತೆ ಸುಮಲತಾ ಅಂಬರೀಶ್ ಕಣಕ್ಕೆ?: ಗುಟ್ಟು ಬಿಡದ ಸಂಸದೆ

Published 30 ಮಾರ್ಚ್ 2024, 15:51 IST
Last Updated 30 ಮಾರ್ಚ್ 2024, 15:51 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಮುಂದಿನ ರಾಜಕೀಯ ಹೆಜ್ಜೆ ಕುರಿತು ರಹಸ್ಯ ಕಾಯ್ದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಬೆಂಬಲಿಗರ ಸಭೆ ನಡೆಸಿದರೂ ಯಾವುದೇ ನಿರ್ಧಾರ ಪ್ರಕಟಿಸಲಿಲ್ಲ.

ಮಂಡ್ಯ ಜಿಲ್ಲೆಯಿಂದ ಬಂದಿದ್ದ ಬೆಂಬಲಿಗರ ಜತೆ ಇಲ್ಲಿನ ಜೆ.ಪಿ.ನಗರದಲ್ಲಿ ಸುದೀರ್ಘ ಸಭೆ ನಡೆಸಿ ಅಭಿಪ್ರಾಯ ಆಲಿಸಿದರು. ಮಗ ಅಭಿಷೇಕ್‌ ಜತೆಗಿದ್ದರು. ಮಂಡ್ಯದಲ್ಲೇ ಏಪ್ರಿಲ್‌ 3ರಂದು ಸಭೆ ನಡೆಸಿ ತಮ್ಮ ಮುಂದಿನ ಹೆಜ್ಜೆಯ ಕುರಿತು ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಸುಮಲತಾ ಅವರ ಬೆಂಬಲಿಗರಲ್ಲಿ ಹಲವರು ಒತ್ತಾಯಿಸಿದರು.  ಜನಾಭಿಪ್ರಾಯ ಸಂಗ್ರಹಿಸಿದ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಸಭೆಯ ಬಳಿಕ ತೆರೆದ ವಾಹನದಲ್ಲಿ ನಿಂತು ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅವರು, ‘ಹಿಂದಿನ ಚುನಾವಣೆಯಲ್ಲಿ ದೊಡ್ಡ ಶಕ್ತಿಗಳೂ ಜತೆಗಿರದಿದ್ದರೂ ನಿಮ್ಮೆಲ್ಲರ ಬೆಂಬಲದಿಂದ ಗೆದ್ದು ಬಂದಿದ್ದೆ. ಎಷ್ಟೇ ಸವಾಲು, ನೋವು ಎದುರಾದರೂ ಎದೆಗುಂದಲಿಲ್ಲ. ಪ್ರಾಮಾಣಿಕವಾಗಿ ಮಂಡ್ಯ ಜಿಲ್ಲೆಯ ಸೇವೆ ಮಾಡಿದ್ದೇನೆ. ಮಂಡ್ಯದ ಘನತೆಯನ್ನು ಸಂಸತ್ತಿನಲ್ಲೂ ಎತ್ತಿ ಹಿಡಿದಿದ್ದೇನೆ’ ಎಂದರು.

‘ನಾನು ಸ್ವಾರ್ಥಕ್ಕಾಗಿ ರಾಜಕೀಯ ಮಾಡುವುದಿಲ್ಲ. ಮಂಡ್ಯ ಅಭ್ಯರ್ಥಿಯನ್ನು ನಿರ್ಧರಿಸಿದ ಬಳಿಕ ಬೇರೆ ಕಡೆ ಸ್ಪರ್ಧಿಸುವಂತೆ ಬಿಜೆಪಿಯಿಂದ ಆಹ್ವಾನ ಬಂದಿತ್ತು. ನಾನು ಮಂಡ್ಯ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ.ಮಂಡ್ಯದಲ್ಲಿರುವುದೇ ನನ್ನ ಸ್ವಾರ್ಥ’ ಎಂದು ಹೇಳಿದರು.

‘ಬಿಜೆಪಿಯನ್ನು ಬೆಂಬಲಿಸಿದರೆ ಉತ್ತಮ ಸ್ಥಾನಮಾನ ನೀಡುವುದಾಗಿ ಬಿ.ಎಸ್‌. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ತಿಳಿಸಿದ್ದರು. ನನಗೆ ಸೀಮಿತವಾಗಿ ತೀರ್ಮಾನ ಮಾಡಲಾಗದು. ನನ್ನನ್ನು ಬೆಂಬಲಿಸಿಕೊಂಡು ಬಂದ ನಿಮ್ಮೆಲ್ಲರ ಸ್ಥಾನಮಾನದ ಬಗ್ಗೆಯೂ ನಾನು ಯೋಚಿಸುತ್ತಿದ್ದೇನೆ. ಆ ಬಗ್ಗೆ ಬಿಜೆಪಿ ವರಿಷ್ಠರ ಮುಂದೆಯೇ ಪ್ರಶ್ನೆ ಎತ್ತಿದ್ದೇನೆ’ ಎಂದರು.

‘ಬಿಜೆಪಿ ಸೇರುವಂತೆ ನೇರವಾಗಿ ಆಹ್ವಾನ ಬಂದಿದೆ. ಮಂಡ್ಯದ ಜನರ ಋಣ ಎಲ್ಲಕ್ಕಿಂತ ಮುಖ್ಯ. ಏ.3ರಂದು ಮಂಡ್ಯದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ ಆ ಬಳಿಕ ತೀರ್ಮಾನ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ‘ಎಲ್ಲ ಪ್ರಶ್ನೆಗಳಿಗೂ ಅಂದೇ ಉತ್ತರ ದೊರಕಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT